ಮೊದಲ ಹಾಕಿ ಟೆಸ್ಟ್ | ಜರ್ಮನಿ ವಿರುದ್ಧ ಸೋತ ಭಾರತ

Update: 2024-10-23 16:17 GMT

PC : PTI 

ಹೊಸದಿಲ್ಲಿ : ಭಾರತೀಯ ಪುರುಷರ ಹಾಕಿ ತಂಡವು 10 ವರ್ಷಗಳ ನಂತರ ಮೇಜರ್ ಧ್ಯಾನ್‌ಚಂದ್ ಕ್ರೀಡಾಂಗಣಕ್ಕೆ ವಾಪಸಾಗಿದೆ. ಸ್ಟೇಡಿಯಮ್‌ನ ವ್ಯವಸ್ಥೆಗಳನ್ನು ಉತ್ತಮಪಡಿಸಲಾಗಿದೆ. ಭಾರತೀಯ ಹಾಕಿ ತಂಡದ ಕೋಚಿಂಗ್ ಸಿಬ್ಬಂದಿಯನ್ನು ಬದಲಿಸಲಾಗಿದೆ. ಆದರೆ, ಉಭಯ ತಂಡಗಳ ನಡುವೆ ಇದೇ ಪಿಚ್‌ನಲ್ಲಿ ಕಳೆದ ಮುಖಾಮುಖಿಯಲ್ಲಿ ಕಂಡುಬಂದ ಫಲಿತಾಂಶ ಪುನರಾವರ್ತನೆಯಾಗಲಿಲ್ಲ.

ಹೆನ್ರಿಕ್ ಮರ್ಟ್ಜೆನ್ಸ್ ಹಾಗೂ ಲುಕಾಸ್ ವಿಂಡ್‌ಫೆಡರ್ ಮೊದಲಾರ್ಧದಲ್ಲಿ ಗೋಲುಗಳನ್ನು ಗಳಿಸುವ ಮೂಲಕ ಜರ್ಮನಿ ತಂಡಕ್ಕೆ ಮುನ್ನಡೆ ಒದಗಿಸಿದ್ದರು. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ತಂಡವನ್ನು ಸೋಲಿಸಿದ್ದ ಜರ್ಮನಿ ತಂಡವು ಈ ಗೆಲುವಿನೊಂದಿಗೆ 2 ಪಂದ್ಯಗಳ ದ್ವಿಪಕ್ಷೀಯ ಹಾಕಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಭಾರತ ತಂಡವು ಇದೇ ಮೊದಲ ಬಾರಿ 21 ತಿಂಗಳ ನಂತರ ಪಂದ್ಯದಲ್ಲಿ ಗೋಲು ದಾಖಲಿಸುವಲ್ಲಿ ವಿಫಲವಾಯಿತು. 2022ರ ಆಗಸ್ಟ್ ನಂತರ ಭಾರತವು ಒಂದೂ ಗೋಲು ಗಳಿಸದೆ ಪಂದ್ಯವನ್ನು ಸೋತಿದೆ.

ಮಧ್ಯಾಹ್ನ 3 ಗಂಟೆಗೆ ಆರಂಭವಾದ ಪಂದ್ಯದಲ್ಲಿ ಉಚಿತ ಟಿಕೆಟ್‌ಗಳ ಲಾಭ ಪಡೆದ ಹಾಕಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಭಾರತ ತಂಡವು 7 ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಪಡೆದಿದ್ದು ಈ ಪೈಕಿ ಯಾವುದನ್ನೂ ಗೋಲಾಗಿ ಪರಿವರ್ತಿಸಿಲ್ಲ.

26ನೇ ನಿಮಿಷದಲ್ಲಿ ದಿಲ್‌ಪ್ರೀತ್ ಸಿಂಗ್ ನೆಟ್‌ನ ಮೇಲ್ಛಾವಣಿಯೊಳಗೆ ಚೆಂಡನ್ನು ಸ್ಕೂಪ್ ಮಾಡಿ ಗೋಲನ್ನು ಸಮಬಲಗೊಳಿಸುವ ವಿಶ್ವಾಸ ಮೂಡಿಸಿದರು. ಆದರೆ ಜರ್ಮನಿ ತಂಡ ವೀಡಿಯೊ ರೆಫರಲ್‌ಗೆ ವಿನಂತಿಸಿತು. ವೀಡಿಯೊ ರೆಫರಲ್ ಭಾರತಕ್ಕೆ ಪೆನಾಲ್ಟಿ ಸ್ಟ್ರೋಕ್ ಅವಕಾಶ ನೀಡಲಾಯಿತು. ನಾಯಕ ಹರ್ಮನ್‌ಪ್ರೀತ್ ಅವರ ಸ್ಟ್ರೋಕ್ ಅನ್ನು ಜರ್ಮನಿಯ ಗೋಲ್‌ಕೀಪರ್ ಜೊಶುವಾ ತಡೆದರು.

ಪ್ರೇಕ್ಷಕರು ಮೈದಾನಕ್ಕೆ ಆಗಮಿಸಲು ಆರಂಭಿಸುತ್ತಿದ್ದಂತೆ ಭಾರತ ತಂಡ ಆರಂಭಿಕ ಆಘಾತ ಅನುಭವಿಸಿತು. ಹೆನ್ರಿಕ್ ಮರ್ಟ್ಜೆನ್ 4ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿದರು. ಮೊದಲಾರ್ಧ ಕೊನೆಗೊಳ್ಳಲು 14 ಸೆಕೆಂಡ್‌ಗಳು ಬಾಕಿ ಇರುವಾಗ ಹಾಲಿ ವಿಶ್ವ ಚಾಂಪಿಯನ್ ಜರ್ಮನಿ ತಂಡ ಪೆನಾಲ್ಟಿ ಕಾರ್ನರ್ ಅವಕಾಶ ಪಡೆಯಿತು. ವಿಂಡ್‌ಫೆಡರ್ ಗೋಲ್‌ಕೀಪರ್ ಕೃಷ್ಣ ಬಹದ್ದೂರ್ ಪಾಠಕ್‌ರನ್ನು ವಂಚಿಸಿ 30ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.

ಗುರುವಾರ ಎರಡನೇ ಟೆಸ್ಟ್ ಪಂದ್ಯ ನಡೆಯಲಿದ್ದು, ಭಾರತಕ್ಕೆ ಸರಣಿಯನ್ನು ಸಮಬಲಗೊಳಿಸುವ ಉತ್ತಮ ಅವಕಾಶ ಲಭಿಸಿದೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News