ವೈಯಕ್ತಿಕ ಕಾರಣದಿಂದ ಭಾರತಕ್ಕೆ ಮರಳಿದ ಗೌತಮ್ ಗಂಭೀರ್
ಹೊಸದಿಲ್ಲಿ: ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ವೈಯಕ್ತಿಕ ತುರ್ತು ಪರಿಸ್ಥಿತಿಯ ಕಾರಣಕ್ಕೆ ಆಸ್ಟ್ರೇಲಿಯದಿಂದ ಭಾರತಕ್ಕೆ ಮರಳಿದ್ದಾರೆ. ಡಿಸೆಂಬರ್ 6ರಂದು ಆರಂಭವಾಗಲಿರುವ 2ನೇ ಟೆಸ್ಟ್ ಪಂದ್ಯಕ್ಕಿಂತ ಮೊದಲು ಆಸ್ಟ್ರೇಲಿಯದಲ್ಲಿ ತಂಡವನ್ನು ಮತ್ತೆ ಸೇರಿಕೊಳ್ಳಲಿದ್ದಾರೆ.
ಗಂಭೀರ್ ಅವರು ವೈಯಕ್ತಿಕ ತುರ್ತು ಪರಿಸ್ಥಿತಿಯಿಂದಾಗಿ ಭಾರತಕ್ಕೆ ಮರಳಿದ್ದಾರೆ. ಅವರ ಕುಟುಂಬದಲ್ಲಿ ಯಾರಿಗೋ ಸಮಸ್ಯೆ ಇದೆ ಎಂದು ತೋರುತ್ತಿದೆ. ಅಡಿಲೇಡ್‌ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್‌ಗೆ ಮೂರು ದಿನಗಳ ಮೊದಲು ಅವರು ಡಿ.3ರಂದು ಆಸ್ಟ್ರೇಲಿಯಕ್ಕೆ ಹಿಂತಿರುಗುತ್ತಾರೆ ಎಂದು ಬಿಸಿಸಿಐ ಮೂಲವೊಂದು ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದೆ.
ಭಾರತ ಕ್ರಿಕೆಟ್ ತಂಡವು ಶನಿವಾರದಿಂದ ಆರಂಭವಾಗಲಿರುವ ದ್ವಿದಿನ ಅಭ್ಯಾಸ ಪಂದ್ಯದಲ್ಲಿ ಆಡಲು ಬುಧವಾರ ಕ್ಯಾನ್‌ಬೆರಾಗೆ ಪ್ರಯಾಣಿಸಲಿದೆ.
ಗಂಭೀರ್ ಅನುಪಸ್ಥಿತಿಯಲ್ಲಿ ಸಹಾಯಕ ಕೋಚ್‌ಗಳಾದ ಅಭಿಷೇಕ್ ನಾಯರ್, ರಿಯಾನ್ ಟೆನ್ ಡೊಶೆಟ್, ಮೊರ್ನೆ ಮೊರ್ಕೆಲ್(ಬೌಲಿಂಗ್ ಕೋಚ್)ಹಾಗೂ ಟಿ. ದಿಲಿಪ್(ಫೀಲ್ಡಿಂಗ್ ಕೋಚ್)ತಂಡದ ಉಸ್ತುವಾರಿ ವಹಿಸಲಿದ್ದಾರೆ.
ಮೊದಲ ಟೆಸ್ಟ್ ಪಂದ್ಯದಿಂದ ವಂಚಿತರಾಗಿದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾಗೆ ಅಭ್ಯಾಸ ಪಂದ್ಯವು ನೆರವಾಗಲಿದೆ.
ಭಾರತ ಕ್ರಿಕೆಟ್ ತಂಡವು ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಆಸ್ಟ್ರೇಲಿಯದಲ್ಲಿದ್ದು, ಪರ್ತ್‌ನಲ್ಲಿ ಸೋಮವಾರ ಮೊದಲ ಪಂದ್ಯವನ್ನು 295 ರನ್ ಅಂತರದಿಂದ ಗೆದ್ದುಕೊಂಡು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.