ವಿಶ್ವ ಚೆಸ್ ಚಾಂಪಿಯನ್‌ಶಿಪ್ | 2ನೇ ಪಂದ್ಯದಲ್ಲಿ ಡ್ರಾ ಸಾಧಿಸಿದ ಗುಕೇಶ್
ಹೊಸದಿಲ್ಲಿ : ಸಿಂಗಾಪುರದಲ್ಲಿ ನಡೆಯುತ್ತಿರುವ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನ ಎರಡನೇ ಗೇಮ್‌ನಲ್ಲಿ ಮಂಗಳವಾರ ಭಾರತದ ಗ್ರಾಂಡ್‌ಮಾಸ್ಟರ್ ಡಿ. ಗುಕೇಶ್ ಹಾಲಿ ವಿಶ್ವ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ವಿರುದ್ಧ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
14 ಗೇಮ್‌ಗಳ ಸರಣಿಯ ಮೊದಲ ಗೇಮ್‌ನಲ್ಲಿ ಸೋಮವಾರ ಗುಕೇಶ್ ಲಿರೆನ್ ವಿರುದ್ಧ ಸೋಲನುಭವಿಸಿದ್ದರು. ಮಂಗಳವಾರ ನಡೆದ ಎರಡನೇ ಗೇಮ್‌ನಲ್ಲಿ ಅವರು ಪುಟಿದೆದ್ದರು.
ಅವರು ಈ ಪಂದ್ಯಾವಳಿಯಲ್ಲಿ ಕಪ್ಪು ಕಾಯಿಗಳೊಂದಿಗೆ ಆಡುತ್ತಿದ್ದಾರೆ.
‘‘ವಿಶ್ವ ಚಾಂಪಿಯನ್‌ಶಿಪ್ ಪಂದ್ಯವೊಂದರಲ್ಲಿ ಕಪ್ಪು ಕಾಯಿಗಳೊಂದಿಗೆ ಆಡಿ ಡ್ರಾ ಸಾಧಿಸುವುದು ಯಾವತ್ತೂ ಒಳ್ಳೆಯ ಅನುಭವ. ಪಂದ್ಯಾವಳಿ ಈಗಷ್ಟೇ ಆರಂಭವಾಗಿದೆ, ನಾವಿನ್ನು ಬಹುದೂರ ಸಾಗಬೇಕಾಗಿದೆ’’ ಎಂದು ಪಂದ್ಯಾನಂತರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚೆನ್ನೈ ಗ್ರಾಂಡ್‌ಮಾಸ್ಟರ್ ಹೇಳಿದರು.
18 ವರ್ಷದ ಗುಕೇಶ್ ಸಾಧಿಸಿರುವ ಡ್ರಾ ಒಂದು ಧನಾತ್ಮಕ ಹೆಜ್ಜೆಯಾಗಿದೆ. ಅವರು ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನ ಇತಿಹಾಸದಲ್ಲೇ ಅತ್ಯಂತ ಕಿರಿಯ ಸ್ಪರ್ಧಿಯಾಗಿದ್ದಾರೆ. ವಿಶ್ವನಾಥನ್ ಆನಂದ್ ಬಳಿಕ, ಈ ಪ್ರಶಸ್ತಿ ಪಡೆಯುವ ಮೊದಲ ಭಾರತೀಯನಾಗುವ ನಿಟ್ಟಿನಲ್ಲಿ ಗುಕೇಶ್ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
‘‘ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಆಡುವಾಗ ಸಹಜವಾಗಿಯೇ ಪ್ರತಿಯೊಬ್ಬರಲ್ಲೂ ಸ್ವಲ್ಪ ಒತ್ತಡ ಇರುತ್ತದೆ. ನಾನು ತುಂಬಾ ಒತ್ತಡಕ್ಕೆ ಒಳಗಾಗಿದ್ದೆ. ಅದರ ಜೊತೆಗೆ, ಇದೊಂದು ನನಗೆ ಸಿಕ್ಕ ಗೌರವದಂತೆಯೂ ನಾನು ಈ ಪಂದ್ಯಾವಳಿಯನ್ನು ಪರಿಗಣಿಸುತ್ತೇನೆ. ಇಲ್ಲಿ ನಾನು ನನ್ನ ದೇಶ ಮತ್ತು ಅದರ ಅಗಾಧ ಸಂಖ್ಯೆಯ ಜನರನ್ನು ಪ್ರತಿನಿಧಿಸುತ್ತಿದ್ದೇನೆ’’ ಎಂದು ಗುಕೇಶ್ ಹೇಳಿದರು.
ಪಂದ್ಯಾವಳಿಯು 2.5 ಮಿಲಿಯ ಡಾಲರ್ (ಸುಮಾರು 21 ಕೋಟಿ ರೂಪಾಯಿ) ಬಹುಮಾನವನ್ನು ಹೊಂದಿದೆ. 7.5 ಅಂಕಗಳನ್ನು ಮೊದಲು ಪಡೆದ ಆಟಗಾರನ್ನು ವಿಜೇತ ಎಂಬುದಾಗಿ ಪರಿಗಣಿಸಲಾಗುತ್ತದೆ.
ವಿಶ್ವನಾಥನ್ ಆನಂದ್ ಐದು ಬಾರಿಯ ವಿಶ್ವ ಚೆಸ್ ಚಾಂಪಿಯನ್ ಆಗಿದ್ದಾರೆ. ಅವರು ಗುಕೇಶ್‌ರನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.