ಆರಂಭಿಕ ಬ್ಯಾಟರ್ ಯಾರು- ರಾಹುಲ್, ರೋಹಿತ್?
ಹೊಸದಿಲ್ಲಿ : ಬಾರ್ಡರ್-ಗವಾಸ್ಕರ್ ಟ್ರೋಫಿ ಪಂದ್ಯಾವಳಿಯ ಎರಡನೇ ಪಂದ್ಯಕ್ಕೆ ನಾಯಕ ರೋಹಿತ್ ಶರ್ಮಾ ಮರಳಲಿದ್ದಾರೆ. ಅವರಿಗೆ ಆಡುವ 11ರ ಬಳಗದಲ್ಲಿ ಜಾಗ ಮಾಡಿಕೊಡಲು ದೇವದತ್ತ ಪಡಿಕ್ಕಲ್ ಹೊರಗುಳಿಯಲಿದ್ದಾರೆ.
ಎರಡನೇ ಟೆಸ್ಟ್ ಅಡಿಲೇಡ್‌ನಲ್ಲಿ ಡಿಸೆಂಬರ್ 6ರಂದು ಆರಂಭಗೊಳ್ಳಲಿದೆ.
ಅದೇ ವೇಳೆ, ಕ್ಯಾನ್‌ಬೆರದಲ್ಲಿ ನವೆಂಬರ್ 30 ಮತ್ತು ಡಿಸೆಂಬರ್ 1ರಂದು ನಡೆಯಲಿರುವ ಅಭ್ಯಾಸ ಪಂದ್ಯದಲ್ಲಿ ಕೆ.ಎಲ್. ರಾಹುಲ್ ರ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಎಲ್ಲರೂ ಕುತೂಹಲಿಗಳಾಗಿದ್ದಾರೆ.
ಇದು ಗಾಯಾಳು ಶುಭಮನ್ ಗಿಲ್ ರ ಲಭ್ಯತೆಯನ್ನು ಅವಲಂಬಿಸಿದೆ. ಅವರು ಲಭ್ಯರಿಲ್ಲದಿದ್ದರೆ ರಾಹುಲ್, ಪಡಿಕ್ಕಲ್ ರ ಸ್ಥಾನದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಹುದಾಗಿದೆ.
ಆದರೆ, ರೋಹಿತ್ ಶರ್ಮಾ ಮಧ್ಯಮ ಕ್ರಮಾಂಕದಲ್ಲಿ, ಅದರಲ್ಲೂ ಮುಖ್ಯವಾಗಿ ಐದು ಅಥವಾ ಆರನೇ ಕ್ರಮಾಂಕದಲ್ಲಿ ಆಡಿದರೆ ತಂಡಕ್ಕೆ ಪ್ರಯೋಜನವಾಗಬಹುದು ಎಂಬ ಅಭಿಪ್ರಾಯಗಳೂ ಕೇಳಿಬರುತ್ತಿವೆ.
ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಿಂದ ರೋಹಿತ್ ಶರ್ಮ ಹೊರಗಿದ್ದ ಹಿನ್ನೆಲೆಯಲ್ಲಿ, ರಾಹುಲ್ ರನ್ನು ಹಂಗಾಮಿ ಆರಂಭಕಾರನಾಗಿ ಪರಿಗಣಿಸಲಾಗಿತ್ತು. ಆದರೆ, ಎರಡು ಇನಿಂಗ್ಸ್‌ಗಳಲ್ಲಿ 26 ಮತ್ತು 77 ರನ್‌ಗಳನ್ನು ಗಳಿಸುವ ಮೂಲಕ ಅವರು ತಂಡಕ್ಕೆ ಉತ್ತಮ ಕೊಡುಗೆ ನೀಡಿದರು.
ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಇಂಡಿಯಾ ಎ ಪರವಾಗಿ ಮತ್ತು ಈಗ ಮೊದಲ ಟೆಸ್ಟ್ ಆಡಿದ ಬಳಿಕ, ರಾಹುಲ್ ಅಗ್ರ ಕ್ರಮಾಂಕದಲ್ಲಿ ನೆಲೆಯೂರಿದಂತೆ ಕಂಡುಬಂದಿದ್ದಾರೆ.
ಹಾಗಾಗಿ, ರೋಹಿತ್ ಶರ್ಮಾರ ಕ್ರಮಾಂಕದ ಬಗ್ಗೆ ಈಗ ಜಿಜ್ಞಾಸೆ ಎದ್ದಿದೆ.