ಪ್ಯಾರಿಸ್ ಒಲಿಂಪಿಕ್ಸ್ | ಹಾಕಿ ಸೆಮಿಫೈನಲ್ ನಲ್ಲಿ ಭಾರತವನ್ನು ಸೋಲಿಸಿ ಫೈನಲ್ ಪ್ರವೇಶಿಸಿದ ಜರ್ಮನಿ
ಪ್ಯಾರಿಸ್ : ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮಂಗಳವಾರ ನಡೆದ ಪುರುಷರ ಹಾಕಿ ಸೆಮಿ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಜರ್ಮನಿ ತಂಡದ ವಿರುದ್ಧ 2-3 ಅಂತರದಿಂದ ವೀರೋಚಿತ ಸೋಲುಂಡಿದೆ.
ಭಾರತವು ಕಂಚಿನ ಪದಕಕ್ಕಾಗಿ ನಡೆಯಲಿರುವ ಪ್ಲೇ ಆಫ್ ಪಂದ್ಯದಲ್ಲಿ ಸ್ಪೇನ್ ತಂಡದ ಸವಾಲನ್ನು ಎದುರಿಸಲಿದೆ.
ಜಿದ್ದಾಜಿದ್ದಿನಿಂದ ಕೂಡಿದ ಅಂತಿಮ-4ರ ಪಂದ್ಯದಲ್ಲಿ ಭಾರತವು 7ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿತು. 18ನೇ ನಿಮಿಷದಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಗೋಲು ಗಳಿಸಿದ ಜರ್ಮನಿ ಸ್ಕೋರನ್ನು 1-1ರಿಂದ ಸಮಬಲಗೊಳಿಸಿತು. ಜರ್ಮನಿ ತಂಡ 27ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿ 2-1 ಮುನ್ನಡೆ ಸಾಧಿಸಿತು. ಭಾರತವು 36ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿ ಸ್ಕೋರನ್ನು 2-2ರಿಂದ ಸಮಬಲಗೊಳಿಸಿತು. 54ನೇ ನಿಮಿಷದಲ್ಲಿ ಗೋಲು ಗಳಿಸಿದ ಜರ್ಮನಿ 3-2 ಮುನ್ನಡೆ ಸಾಧಿಸಿತು.
ಜರ್ಮನಿಯ ಪರ ಗೊಂಝಾಲೊ ಪೀಲಾಟ್, ಕ್ರಿಸ್ಟೋಫರ್ ರೂಹ್ರ್ ಹಾಗೂ ಮಾರ್ಕೊ ಮಿಲ್ಟ್‌ಕೌ ತಲಾ ಒಂದು ಗೋಲು ಗಳಿಸಿದರೆ, ಭಾರತದ ಪರ ನಾಯಕ ಹರ್ಮನ್‌ಪ್ರೀತ್ ಸಿಂಗ್(7ನೇ ನಿಮಿಷ) ಹಾಗೂ ಸುಖಜೀತ್ ಸಿಂಗ್ (36ನೇ ನಿಮಿಷ) ತಲಾ ಒಂದು ಗೋಲು ಗಳಿಸಿದರು.
ಜರ್ಮನಿ ತಂಡ ಫೈನಲ್‌ನಲ್ಲಿ ನೆದರ್‌ಲ್ಯಾಂಡ್ಸ್ ತಂಡವನ್ನು ಎದುರಿಸಲಿದೆ.