ಗ್ರ್ಯಾನ್ ಸ್ಲಾಮ್‍ : 27ನೇ ವಿಶ್ವ ರ‍್ಯಾಂಕಿಂಗ್‌ ನ ಆಟಗಾರ ಅಲೆಕ್ಸಾಂಡರ್ ಬಬ್ಲಿಕ್‍ರನ್ನು ಸೋಲಿಸಿದ ಸುಮಿತ್ ನಾಗಲ್

Update: 2024-01-16 16:25 GMT

ಸುಮಿತ್ ನಾಗಲ್ Photo: instagram/nagalsumit

ಮೆಲ್ಬರ್ನ್: ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯಲ್ಲಿ ಭಾರತದ ಸುಮಿತ್ ನಾಗಲ್ ಎರಡನೇ ಸುತ್ತು ಪ್ರವೇಶಿಸುವ ಮೂಲಕ ಐತಿಹಾಸಿಕ ಸಾಧನೆಗೈದಿದ್ದಾರೆ. ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ 139ನೇ ವಿಶ್ವ ರ‍್ಯಾಂಕಿಂಗ್‌ ನ ನಾಗಲ್ ಖಝಖ್‍ಸ್ತಾನದ 27ನೇ ವಿಶ್ವ ರ‍್ಯಾಂಕಿಂಗ್‌ ನ ಆಟಗಾರ ಅಲೆಕ್ಸಾಂಡರ್ ಬಬ್ಲಿಕ್‍ರನ್ನು 6-4, 6-2, 7-6 ಸೆಟ್‍ಗಳಿಂದ ಸೋಲಿಸಿದರು.

ಮೊದಲ ಎರಡು ಸೆಟ್‍ಗಳನ್ನು ಸುಲಭವಾಗಿ ಗೆದ್ದ ಭಾರತೀಯ ಆಟಗಾರನಿಗೆ ಮೂರನೇ ಸುತ್ತಿನಲ್ಲಿ ಎದುರಾಳಿ ಆಟಗಾರ ತೀವ್ರ ಸ್ಪರ್ಧೆ ನೀಡಿದರು. ಮೊದಲ ಆರು ಗೇಮ್‍ಗಳಲ್ಲಿ ಇಬ್ಬರೂ ಆಟಗಾರರು ಸಮಬಲದ ಹೋರಾಟ ನೀಡಿದರು. ಒಂದು ಹಂತದಲ್ಲಿ ಬಬ್ಲಿಕ್‍ರ ಸರ್ವನ್ನು ತುಂಡರಿಸಿದ ನಾಗಲ್ 4-3ರ ಮುನ್ನಡೆ ಪಡೆದರು. ಬಳಿಕ ಮುನ್ನಡೆಯನ್ನು 5-3ಕ್ಕೆ ವಿಸ್ತರಿಸಿದರು.

ಆದರೆ, ನಾಟಕೀಯತೆ ಈಗಷ್ಟೇ ಆರಂಭಗೊಂಡಿತು. ಮುಂದಿನ ಗೇಮ್‍ನಲ್ಲಿ ಬಬ್ಲಿಕ್ ಒಂದು ಅಂಕವನ್ನೂ ಕಳೆದುಕೊಳ್ಳದೆ ಮೇಲುಗೈ ಸಾಧಿಸಿದ ಬಬ್ಲಿಕ್ ಅಂತರವನ್ನು 4-5ಕ್ಕೆ ತಗ್ಗಿಸಿದರು. ಮುಂದಿನ ಗೇಮ್‍ನಲ್ಲೂ ಯಶಸ್ವಿ ಸರ್ವ್ ನೀಡಲು ನಾಗಲ್‍ಗೆ ಸಾಧ್ಯವಾಗಲಿಲ್ಲ. ಆಗ ಕಝಖ್‍ಸ್ತಾನದ ಆಟಗಾರ ಅಂಕವನ್ನು 5-5ರಲ್ಲಿ ಸಮಬಲವಾಗಿಸಿದರು.

ಅಂತಿಮವಾಗಿ ಪಂದ್ಯವು ಟೈಬ್ರೇಕರ್‍ನತ್ತ ಸಾಗಿತು. ಟೈಬ್ರೇಕರ್‍ನಲ್ಲಿ ನಾಗಲ್ 7-5ರ ಮುನ್ನಡೆ ಪಡೆದು ವಿಜಯಿಯಾಗಿ ಹೊರಹೊಮ್ಮಿದರು.

1989ರ ಬಳಿಕ, ಗ್ರ್ಯಾನ್ ಸ್ಲಾಮ್ ಪಂದ್ಯವೊಂದರಲ್ಲಿ ಭಾರತೀಯ ಆಟಗಾರರೊಬ್ಬರು ಶ್ರೇಯಾಂಕಿತ ಆಟಗಾರರೊಬ್ಬರನ್ನು ಸೋಲಿಸಿರುವುದು ಇದೇ ಮೊದಲು. ಈ ಹಿಂದೆ ಈ ಸಾಧನೆಯನ್ನು 1989ರಲ್ಲಿ ಭಾರತೀಯ ಟೆನಿಸ್ ದಂತಕತೆ ರಮೇಶ್ ಕೃಷ್ಣನ್ ಮಾಡಿದ್ದರು.

ಆದರೆ, ಸುಮಿತ್ ನಾಗಲ್ ಗ್ರ್ಯಾನ್ ಸ್ಲಾಮ್ ಪಂದ್ಯಾವಳಿಯೊಂದರಲ್ಲಿ ಎರಡನೇ ಸುತ್ತು ಪ್ರವೇಶಿಸಿರುವುದು ಇದು ಮೊದಲ ಬಾರಿಯೇನಲ್ಲ. 2020ರ ಅಮೆರಿಕ ಓಪನ್‍ನಲ್ಲಿ ಅವರು ಎರಡನೇ ಸುತ್ತು ತಲುಪಿದ್ದರು. ಎರಡನೇ ಸುತ್ತಿನಲ್ಲಿ ಅವರನ್ನು ಎರಡನೇ ಶ್ರೇಯಾಂಕದ ಡೋಮಿನಿಕ್ ತಿಯಮ್ 6-3, 6-3, 6-2 ಸೆಟ್‍ಗಳಿಂದ ಸೋಲಿಸಿದ್ದರು. ಅಂತಿಮವಾಗಿ ತಿಯಮ್ ಪ್ರಶಸ್ತಿ ಎತ್ತಿದರು.

5 ಬಾರಿ 3ನೇ ಸುತ್ತು ತಲುಪಿದ್ದ ರಮೇಶ್ ಕೃಷ್ಣನ್

ಆಸ್ಟ್ರೇಲಿಯನ್ ಓಪನ್‍ನಲ್ಲಿ ನಾಗಲ್ ಎರಡನೇ ಸುತ್ತು ಪ್ರವೇಶಿಸಿರುವುದು ಟೆನಿಸ್ ಇತಿಹಾಸದಲ್ಲಿ ಭಾರತದ ಅವಿಸ್ಮರಣೀಯ ಕ್ಷಣವಾಗಿದೆ. ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯ ಸಿಂಗಲ್ಸ್ ವಿಭಾಗದಲ್ಲಿ ಈವರೆಗೆ ಭಾರತೀಯ ಆಟಗಾರರೊಬ್ಬರ ದೊಡ್ಡ ಸಾಧನೆಯೆಂದರೆ ತೃತೀಯ ಸುತ್ತು ತಲುಪಿರುವುದು. ಈ ಸಾಧನೆಯನ್ನು ರಮೇಶ್ ಕೃಷ್ಣನ್ ಮಾಡಿದ್ದಾರೆ. ಅವರು ತನ್ನ ಕ್ರೀಡಾ ಬದುಕಿನಲ್ಲಿ ಆಸ್ಟ್ರೇಲಿಯನ್ ಓಪನ್‍ನಲ್ಲಿ ಒಟ್ಟು ಐದು ಬಾರಿ ಮೂರನೇ ಸುತ್ತು ತಲುಪಿದ್ದಾರೆ. 1983, 1984, 1987, 1988 ಮತ್ತು 1989ರಲ್ಲಿ ಅವರು ಈ ಸಾಧನೆಗೈದಿದ್ದಾರೆ.

1989ರ ಆಸ್ಟ್ರೇಲಿಯನ್ ಓಪನ್‍ನಲ್ಲಿ ಅವರು ಎರಡನೇ ಸುತ್ತಿನಲ್ಲಿ ಅಂದಿನ ವಿಶ್ವದ ನಂಬರ್ ವನ್ ಆಟಗಾರ ಮ್ಯಾಟ್ಸ್ ವಿಲಾಂಡರ್‍ರನ್ನು ಸೋಲಿಸಿ ಸುದ್ದಿ ಮಾಡಿದ್ದರು.

2ನೇ ಸುತ್ತು ತಲುಪಿದ್ದ ವಿಜಯ್ ಅಮೃತರಾಜ್, ಲಿಯಾಂಡರ್ ಪೇಸ್, ದೇವವರ್ಮನ್

ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯಲ್ಲಿ ಮೊದಲ ಸುತ್ತು ದಾಟಿ ಮುನ್ನಡೆದಿರುವ ಇನ್ನೋರ್ವ ಭಾರತೀಯ ಆಟಗಾರನೆಂದರೆ ವಿಜಯ ಅಮೃತರಾಜ್. 1984ರ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯಲ್ಲಿ ಅವರು ಎರಡನೇ ಸುತ್ತು ತಲುಪಿದ್ದರು.

ಲಿಯಾಂಡರ್ ಪೇಸ್ ಕೂಡ 1997 ಮತ್ತು 2000ದಲ್ಲಿ ಈ ಸಾಧನೆ ಮಾಡಿದ್ದಾರೆ.

ತೀರಾ ಇತ್ತೀಚೆಗೆ, 2013ರ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯಲ್ಲಿ ಸೋಮದೇವ್ ದೇವವರ್ಮನ್ ಎರಡನೇ ಸುತ್ತು ತಲುಪಿದ್ದರು.

ಸುಮಿತ್ ಸಾಧನೆಯ ಹಿಂದೆ ವಿರಾಟ್ ಕೊಹ್ಲಿ

ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯಲ್ಲಿ ಮಂಗಳವಾರ ಭಾರತೀಯ ಟೆನಿಸ್‍ನ ಸೂಪರ್ ಸ್ಟಾರ್ ಸುಮಿತ್ ನಾಗಲ್ ಮಾಡಿರುವ ಐತಿಹಾಸಿಕ ಸಾಧನೆಯ ಹಿಂದೆ ಕ್ರಿಕೆಟ್ ಮಾಂತ್ರಿಕ ವಿರಾಟ್ ಕೊಹ್ಲಿ ಇದ್ದಾರೆ. ಅವರ ಬೆಂಬಲ ಇಲ್ಲದಿರುತ್ತಿದ್ದರೆ ನಾಗಲ್‍ಗೆ ಈ ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲವೋ ಏನೋ!

“ನನ್ನ ಕಿಸೆಯಲ್ಲಿ ಕೇವಲ ಆರು ಡಾಲರ್ (ಸುಮಾರು 500 ರೂಪಾಯಿ) ಇದ್ದಾಗ ಕೊಹ್ಲಿ ಮತ್ತು ಅವರ ಫೌಂಡೇಶನ್‍ನವರು ನನಗೆ ಸಹಾಯ ಮಾಡಿದ್ದಾರೆ’’ ಎಂಬುದಾಗಿ ‘ಬಾಂಬೆ ಟೈಮ್ಸ್’ಗೆ ನೀಡಿದ ಸಂದರ್ಶನವೊಂದರಲ್ಲಿ ನಾಗಲ್ ಹೇಳಿದ್ದಾರೆ.

2017ರಲ್ಲಿ ನಾಗಲ್‍ಗೆ ಕೊಹ್ಲಿ ಮೊದಲ ಬಾರಿ ನೆರವು ನೀಡಿದ್ದರು.

“ವಿರಾಟ್ ಕೊಹ್ಲಿಯ ಫೌಂಡೇಶನ್ 2017ರಿಂದ ನನಗೆ ನೆರವು ನೀಡುತ್ತಿದೆ. ಹಿಂದಿನ ಎರಡು ವರ್ಷಗಳಿಂದ ನನ್ನ ಸಾಧನೆ ಚೆನ್ನಾಗಿರಲಿಲ್ಲ. ನಾನು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದೆ. ವಿರಾಟ್ ಕೊಹ್ಲಿ ನನಗೆ ಸಹಾಯ ಮಾಡಿರದಿದ್ದರೆ, ನಾನು ಏನು ಮಾಡುತ್ತಿದ್ದೆನೋ ನನಗೆ ಗೊತ್ತಿಲ್ಲ’’ ಎಂದು ಅವರು ‘ಬಾಂಬೆ ಟೈಮ್ಸ್’ನೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

“2019ರಲ್ಲಿ, ಪಂದ್ಯಾವಳಿಯೊಂದರ ಬಳಿಕ ನಾನು ಕೆನಡದಿಂದ ಜರ್ಮನಿಗೆ ಪ್ರಯಾಣಿಸುತ್ತಿದ್ದಾಗ, ನನ್ನ ಕಿಸೆಯಲ್ಲಿ ಕೇವಲ ಆರು ಡಾಲರ್ ಗಳಿದ್ದವು... ನನಗೆ ಸಿಗುತ್ತಿದ್ದ ಎಲ್ಲಾ ನೆರವುಗಳ ಹೊರತಾಗಿಯೂ ನನ್ನಲ್ಲಿ ಇದ್ದದ್ದು 6 ಡಾಲರ್ ಗಳು. ಹಾಗಾದರೆ, ಅದಕ್ಕಿಂತ ಮೊದಲಿನ ನನ್ನ ಪರಿಸ್ಥಿತಿ ಏನಾಗಿತ್ತು ಎನ್ನುವುದನ್ನು ಊಹಿಸಿ. ಆದರೆ, ನಾನು ಪರಿಸ್ಥಿತಿಯನ್ನು ಎದುರಿಸಿದೆ. ಈಗ ಪರಿಸ್ಥಿತಿ ಸುಧಾರಿಸುತ್ತಿದೆ. ಜನರು ಕ್ರೀಡಾಪಟುಗಳಿಗೆ ಹಣ ಕೊಟ್ಟರೆ, ಅದರಿಂದ ದೇಶದ ಕ್ರೀಡೆ ಬೆಳೆಯುತ್ತದೆ. ವಿರಾಟ್‍ರ ಸಹಾಯ ನನಗೆ ಸಿಕ್ಕಿರುವುದು ನನ್ನ ಅದೃಷ್ಟವಾಗಿದೆ’’ ಎಂದು ಸುಮಿತ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News