ಹೈಜಂಪ್: ಶರದ್‌ಗೆ ಬೆಳ್ಳಿ, ಸತತ 3ನೇ ಪ್ಯಾರಾಲಿಂಪಿಕ್ಸ್‌ನಲ್ಲೂ ತಂಗವೇಲುಗೆ ಪದಕ
ಪ್ಯಾರಿಸ್: ಶರದ್ ಕುಮಾರ್(1.88 ಮೀ.) ಹಾಗೂ ಮರಿಯಪ್ಪನ್ ತಂಗವೇಲು(1.85 ಮೀ.) ಮಂಗಳವಾರ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನ ಪುರುಷರ ಹೈಜಂಪ್ ಟಿ63 ಸ್ಪರ್ಧೆಯಲ್ಲಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಜಯಿಸಿದರು.
ಶರದ್ ತನ್ನ ಎರಡನೇ ಪ್ರಯತ್ನದಲ್ಲಿ 1.88 ಮೀ.ಎತ್ತರಕ್ಕೆ ಜಿಗಿದು 2021ರ ಟೋಕಿಯೊ ಗೇಮ್ಸ್‌ನಲ್ಲಿ 1.86 ಮೀ.ಎತ್ತರಕ್ಕೆ ಜಿಗಿದಿದ್ದ ಮರಿಯಪ್ಪನ್ ದಾಖಲೆಯನ್ನು ಮುರಿದರು. ಈ ಹಾದಿಯಲ್ಲಿ ಶರದ್ ಅವರು ಸತತ 2ನೇ ಪ್ಯಾರಾಲಿಂಪಿಕ್ಸ್ ಪದಕ ಜಯಿಸಿದರು. ಹಿಂದಿನ ಆವೃತ್ತಿಯಲ್ಲಿ ಶರದ್ ಕಂಚು ಜಯಿಸಿದ್ದರು.
2016ರ ರಿಯೋ ಗೇಮ್ಸ್‌ನಲ್ಲಿ ಚಿನ್ನ ಹಾಗೂ ಟೋಕಿಯೊ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಮರಿಯಪ್ಪನ್ 1.85 ಮೀ.ಎತ್ತರಕ್ಕೆ ಜಿಗಿದು ಕಂಚು ಜಯಿಸಿದರು. ಈ ಮೂಲಕ ಮೂರನೇ ಬಾರಿ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಸಾಧನೆ ಮಾಡಿದರು. ಅವರು ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ, ಬೆಳ್ಳಿ ಹಾಗೂ ಕಂಚು ಮೂರೂ ಪದಕವನ್ನು ಗೆದ್ದಿದ್ದಾರೆ.
ಅಮೆರಿಕದ ಎಝ್ರಾ ಫ್ರೆಚ್ ನೂತನ ಪ್ಯಾರಾಲಿಂಪಿಕ್ಸ್ ದಾಖಲೆ(1.94ಮೀ.)ಯೊಂದಿಗೆ ಚಿನ್ನದ ಪದಕ ಬಾಚಿಕೊಂಡರು.
ರಶ್ಯ ಹಾಗೂ ಉಕ್ರೇನ್ ನಡುವೆ ಸಂಘರ್ಷ ನಡೆಯುತ್ತಿರುವ ಕಾರಣ ಕಳೆದ 2 ವರ್ಷಗಳಿಂದ ತನ್ನ ಉಕ್ರೇನ್ ಕೋಚ್ ನಿಕಿಟಿನ್‌ರನ್ನು ಭೇಟಿಯಾಗಲು ಸಾಧ್ಯವಾಗದಿದ್ದರೂ ಬೆಳ್ಳಿ ಗೆದ್ದಿರುವುದು ಶರದ್ ಕುಮಾರ್ ಅವರ ಮಹತ್ವದ ಸಾಧನೆಯಾಗಿದೆ. ಬಿಹಾರದ ಶರದ್ 2014 ಹಾಗೂ 2018ರಲ್ಲಿ 2 ಬಾರಿ ಏಶ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಹೈಜಂಪ್ ಚಾಂಪಿಯನ್ ಆಗಿದ್ದಾರೆ.
ಸ್ಪರ್ಧೆಯಲ್ಲಿದ್ದ ಭಾರತದ ಶೈಲೇಶ್ ಕುಮಾರ್ ಅವರು ಮರಿಯಪ್ಪನ್‌ರೊಂದಿಗೆ ಟೈ ಮಾಡಿಕೊಂಡಿದ್ದರೂ ನಾಲ್ಕನೇ ಸ್ಥಾನ ಪಡೆದರು. ಹೈಜಂಪ್‌ನಲ್ಲಿ 2 ಪದಕ ಜಯಿಸಿದ ಭಾರತದ ಪದಕದ ಸಂಖ್ಯೆ 20ಕ್ಕೇರಿತು.