ಆಸ್ಟ್ರೇಲಿಯ ಓಪನ್ ಡಬಲ್ಸ್ ಟೆನಿಸ್ ಗೆದ್ದ ರೋಹನ್ ಬೋಪಣ್ಣ: ಅವರು ಗಳಿಸಿದ ಪ್ರಶಸ್ತಿಯ ಮೊತ್ತವೆಷ್ಟು ಗೊತ್ತೆ?
ಸಿಡ್ನಿ: ಶನಿವಾರ ತಮ್ಮ ಜೊತೆಗಾರ ಮ್ಯಾಥ್ಯೂ ಎಬ್ಡೆನ್ ಅವರೊಂದಿಗೆ ಆಸ್ಟ್ರೇಲಿಯ ಓಪನ್ ಡಬಲ್ಸ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಗೆಲುವು ಸಾಧಿಸುವ ಮೂಲಕ ಭಾರತದ ರೋಹನ್ ಬೋಪಣ್ಣ ಆ ಸಾಧನೆ ಮಾಡಿದ ಅತ್ಯಂತ ಹಿರಿಯ ಆಟಗಾರ ಎಂಬ ಹಿರಿಮೆಗೆ ಭಾಜನರಾಗಿದ್ದಾರೆ. ಎರಡನೆ ಶ‍್ರೇಯಾಂಕದ ರೋಹನ್ ಬೋಪಣ್ಣ ಹಾಗೂ ಮ್ಯಾಥ್ಯೂ ಎಬ್ಡೆನ್ ಜೋಡಿಯು ಶ್ರೇಯಾಂಕ ರಹಿತ ಆಟಗಾರರಾದ ಇಟಲಿಯ ಸಿಮೋನ್ ಬೊಲೆಲ್ಲಿ ಹಾಗೂ ಆ್ಯಂಡ್ರಿಯ ವವಸ್ಸೋರಿ ಜೋಡಿಯನ್ನು ರಾಡ್ ಲ್ಯಾವರ್ ಅರೆನಾ ಕ್ರೀಡಾಂಗಣದಲ್ಲಿ 7-6 (7/0) ಹಾಗೂ 7-5ರ ನೇರ ಸೆಟ್ ನಲ್ಲಿ ಪರಾಭವಗೊಳಿಸಿತು. ಆ ಈ ಹಿಂದಿನ 60 ಗ್ರ್ಯಾಂಡ್ ಸ್ಲ್ಯಾಮ್ ಪಂದ್ಯಗಳಲ್ಲಿ ಈ ಡಬಲ್ಸ್ ಜೋಡಿಗೆ ಇದು ಚೊಚ್ಚಲ ಗೆಲುವಾಗಿದ್ದರೆ, ರೋಹನ್ ಬೋಪಣ್ಣ ಪಾಲಿಗೆ ಇದು ಪ್ರಪ್ರಥಮ ಪುರುಷರ ಡಬಲ್ಸ್ ಗ್ರ್ಯಾಂಡ್ ಸ್ಲ್ಯಾಮ್ ಕಿರೀಟವಾಗಿದೆ ಎಂದು ndtv.com ವರದಿ ಮಾಡಿದೆ.
ಈ ಗೆಲುವಿನೊಂದಿಗೆ ರೋಹನ್ ಬೋಪಣ್ಣ ಹಾಗೂ ಮ್ಯಾಥ್ಯೂ ಎಡ್ಬೆನ್ ಜೋಡಿಯು ಒಟ್ಟು 7,30,000 ಆಸ್ಟ್ರೇಲಿಯನ್ ಡಾಲರ್ ಸಂಪಾದಿಸಿದ್ದು, ಇದು ಭಾರತೀಯ ರೂಪಾಯಿಯಲ್ಲಿ ರೂ. 3.98 ಕೋಟಿ ರೂಪಾಯಿ ಆಗಲಿದೆ.
43 ವರ್ಷದ ರೋಹನ್ ಬೋಪಣ್ಣ ಗ್ರ್ಯಾಂಡ್ ಸ್ಲ್ಯಾಮ್ ಟ್ರೋಫಿ ಗೆದ್ದ ಅತ್ಯಂತ ಹಿರಿಯ ಆಟಗಾರರಾಗಿ ಹೊರಹೊಮ್ಮಿದ್ದಾರೆ. ಅವರು 2022ರ ಫ್ರೆಂಚ್ ಓಪನ್ ಪುರುಷರ ಡಬಲ್ಸ್ ಟ್ರೋಫಿಯನ್ನು ತಮ್ಮ ಸಹ ಆಟಗಾರ ಮಾರ್ಸೆಲೊ ಅರೆವೊಲಾರೊಂದಿಗೆ ಗೆದ್ದಿದ್ದ ಜೀನ್-ಜೂಲಿಯನ್ ರೋಜರ್ ಅವರ ದಾಖಲೆಯನ್ನು ಈ ಸಾಧನೆಯೊಂದಿಗೆ ಮತ್ತಷ್ಟು ಉತ್ತಮ ಪಡಿಸಿದ್ದಾರೆ.