2022ರ ಟಿ20 ವಿಶ್ವಕಪ್ ನಲ್ಲಿ ವಿರಾಟ್ ಕೊಹ್ಲಿ ಬಾರಿಸಿದ ಸಿಕ್ಸರ್ ಅನ್ನು ʼಶತಮಾನದ ಶ್ರೇಷ್ಠ ಹೊಡೆತ' ಎಂದು ಘೋಷಿಸಿದ ಐಸಿಸಿ

Update: 2023-11-11 11:58 GMT

Photo : ICC/instagram 

ದುಬೈ: ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಆಸ್ಟ್ರೇಲಿಯದ ಆತಿಥ್ಯದಲ್ಲಿ ನಡೆದಿದ್ದ ಟಿ20 ವಿಶ್ವಕಪ್ 2022 ಟೂರ್ನಿಯ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದಿದ್ದ ರೋಚಕ ಪಂದ್ಯದಲ್ಲಿ ಹಾರಿಸ್ ರವೂಫ್ ಬೌಲಿಂಗ್ ನಲ್ಲಿ ಬಾರಿಸಿದ್ದ ಅವಿಸ್ಮರಣೀಯ ಸಿಕ್ಸರ್ ರನ್ನು ”ಐಸಿಸಿ ಶತಮಾನದ ಶ್ರೇಷ್ಠ ಹೊಡೆತ” ಎಂದು ಬಣ್ಣಿಸಿದೆ.

ಐಸಿಸಿ ತನ್ನ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ವಿರಾಟ್ ಕೊಹ್ಲಿ ಅವರ ಪಂದ್ಯಾವಳಿಯ ಪ್ರಮುಖ ಕ್ಷಣಗಳನ್ನು ಒಳಗೊಂಡ ವೀಡಿಯೊವನ್ನು ಹಂಚಿಕೊಂಡಿದೆ. 2022 ರ ಟಿ20 ವಿಶ್ವಕಪ್ ನಲ್ಲಿ ಹಾರಿಸ್ ರವೂಫ್ ಎಸೆತದಲ್ಲಿ ವಿರಾಟ್ ಕೊಹ್ಲಿಯ ಬೃಹತ್ ಸಿಕ್ಸರ್ ಅನ್ನು ಈ ವೀಡಿಯೊ ಒಳಗೊಂಡಿದೆ. ಐಸಿಸಿ ಈ ಸಿಕ್ಸರ್ ಅನ್ನು 'ಶತಮಾನದ ಹೊಡೆತ' ಎಂದು ಘೋಷಿಸುವುದರೊಂದಿಗೆ ಈ ಸಿಕ್ಸರ್ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಹಲವಾರು ವರ್ಷಗಳ ಕಾಲ ಅಚ್ಚಳಿಯದೇ ಉಳಿಯುವಂತೆ ಮಾಡಿದೆ.

ವಿಶ್ವಕಪ್ ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧದ ತೀವ್ರ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಭಾರತವು ಕಡೆಯ ಎಂಟು ಎಸೆತದಲ್ಲಿ 28 ರನ್ ಗಳ ಅಗತ್ಯವಿತ್ತು. ಈ ರೋಚಕ ಪಂದ್ಯದಲ್ಲಿ ಹಾರಿಸ್ ರವೂಫ್ ಬೌಲಿಂಗ್ ನಲ್ಲಿ ವಿರಾಟ್ ಕೊಹ್ಲಿ ಸತತ ಎರಡು ಸಿಕ್ಸರ್ ಸಿಡಿಸುವ ಮೂಲಕ ಭಾರತ ನಾಲ್ಕು ವಿಕೆಟ್ ಗಳಿಂದ ಗೆಲುವು ಸಾಧಿಸುವುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಸ್ಮರಣೀಯ ಇನ್ನಿಂಗ್ಸ್ ನಲ್ಲಿ ವಿರಾಟ್ 53 ಎಸೆತಗಳಲ್ಲಿ 83 ರನ್ ಗಳಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News