ಬೆಂಕಿಯಲ್ಲಿ ಅರಳಿದ ಹೂವು ಇಮಾನಿ ಖಲೀಫ್
ಅಲ್ಜೀರಿಯಾದ ಬಾಕ್ಸರ್ ಇಮಾನಿ ಖಲೀಫ್ ಸುತ್ತ ಈಗ ವಿವಾದದ ಬೆಟ್ಟ ನಿರ್ಮಾಣವಾಗಿದೆ. ಇಮಾನಿ ಖಲೀಫ್ ಹೆಣ್ಣಾ? ಗಂಡಾ? ಅನ್ನುವ ಚರ್ಚೆ ಎಲ್ಲೆಡೆ ನಡೆಯುತ್ತಿದೆ.
ಡೊನಾಲ್ಡ್ ಟ್ರಂಪ್, ಇಲಾನ್ ಮಸ್ಕ್, ಜೆಕೆ ರೋಲಿಂಗ್ ಮತ್ತು ವಿವಾದಗಳಿಂದಲೇ ಕುಖ್ಯಾತರಾದ ನಟಿ ಕಂಗನಾ ರಣಾವತ್ ಇಮಾನಿ ಖಲೀಫ್ ವಿರುದ್ಧ ನಿಂತಿದ್ದರೆ ಮತ್ತೊಂದಷ್ಟು ಜನ ಇಮಾನಿ ಖಲೀಫ್ ಪರವಾಗಿ ನಿಂತಿದ್ದಾರೆ.
ಇಮಾನಿ ಖಲೀಫ್ ಯಾರು? ಇವರ ಹಿನ್ನೆಲೆ ಏನು? ಏನಿದು ವಿವಾದ?
ಅಲ್ಜೀರಿಯಾದ ಒಬ್ಬ ಗುಜರಿ ಮಾರಾಟಗಾರನ ಮಗಳು ಇಮಾನಿ ಖಲೀಫ್ ಬಹಳ ಬಡ ಕುಟುಂಬದಿಂದ ಬಂದವರು. ತನ್ನ ಬಾಕ್ಸಿಂಗ್ ತರಬೇತಿಗಾಗಿ ಬ್ರೆಡ್, ಬೇಕರಿ ಪದಾರ್ಥಗಳನ್ನು ಮಾರಿದವರು. ಹೆಣ್ಣಾಗಿ ಕ್ರೀಡೆಯಲ್ಲಿ ತೊಡಗಿಸಿಕೊಂಡದ್ದಕ್ಕೆ ಕುಟುಂಬ ಮತ್ತು ಸಂಬಂಧಿಕರ ವಿರೋಧವನ್ನೂ ಎದುರಿಸಿದವರು.
ಇಮಾನಿ ಖಲೀಫ್‌ರ ಬಾಲ್ಯದ ಚಿತ್ರಗಳು, ಆಕೆಯ ಶಾಲಾ ದಿನಗಳ ಚಿತ್ರಗಳು, ಬಾಕ್ಸಿಂಗ್ ವೃತ್ತಿಯಾಗುವ ಮುಂಚಿನ ಚಿತ್ರಗಳು ಪೂರ್ತಿಯಾಗಿ ಇಮಾನಿ ಖಲೀಫ್ ಒಬ್ಬಳು ಹೆಣ್ಣು ಎಂಬುದನ್ನು ಸ್ಪಷ್ಟಪಡಿಸುತ್ತವೆ.
ಹಾಗಿದ್ದರೂ ಈ ವಿವಾದ ಯಾಕೆ?
ವಿವಾದ ಮೂಲ ಇರುವುದು 2023ರ ವಿಶ್ವ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಅಲ್ಜೀರಿಯಾದ ಇಮಾನಿ ಮತ್ತು ತೈವಾನಿನ ಬಾಕ್ಸರ್ ಲೀ ಯು ಥುಂಗ್ ಅವರ ಟೆಸ್ಟೋಸ್ಟಿರೋನ್ ಮಟ್ಟವು ಹೆಚ್ಚಿನ ಮಟ್ಟದಲ್ಲಿ ಇದ್ದುದರಿಂದ (ಅಂದರೆ ಪುರುಷರಲ್ಲಿ ಇರುವಷ್ಟು ಪ್ರಮಾಣದಲ್ಲಿ) ಟೂರ್ನಿಯಿಂದ ಬ್ಯಾನ್ ಮಾಡಲಾಗಿತ್ತು. ಆಗಲೂ ಈ ನಿರ್ಣಯದ ವಿರುದ್ಧ ವ್ಯಾಪಕ ಆಕ್ಷೇಪ ವ್ಯಕ್ತವಾಗಿತ್ತು. ಇಮಾನಿ ಖಲೀಫ್‌ರನ್ನು ಒಲಂಪಿಕ್ಸ್‌ನಲ್ಲಿ ಆಡಲು ಅನುವು ಮಾಡಿಕೊಟ್ಟದ್ದಕ್ಕೂ ಹಲವು ಚರ್ಚೆಗಳಾಗಿದ್ದವು.
ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕೂಡಾ ಭಾಗವಹಿಸಿದ್ದ ಇಮಾನಿ ಖಲೀಫ್, ಆಗ ಈ ಪ್ರತಿರೋಧವನ್ನು ಎದುರಿಸಿರಲಿಲ್ಲ, ಈ ಬಾರಿ ಇಟಲಿಯ ಬಾಕ್ಸರ್ ಏಂಜೆಲ ಕ್ಯಾರಿನಿಯನ್ನು ಒಂದೇ ಒಂದು ಹೊಡೆತದಲ್ಲಿ ಸುಸ್ತು ಮಾಡಿದ್ದಕ್ಕೆ ವಿವಾದ ಎಬ್ಬಿಸಲಾಯಿತು.
ವಿವಾದ ಸೃಷ್ಟಿಕರ್ತೆ ಇಟಲಿಯ ಬಾಕ್ಸರ್ ಕ್ಯಾರಿನಿ ಮತ್ತು ಇಮಾನಿ ಖಲೀಫ್ ಹಲವು ವರ್ಷಗಳಿಂದ ಪರಿಚಿತರು. ಇಟಲಿಗೆ ಇಮಾನಿ ಬಾಕ್ಸಿಂಗ್ ತರಬೇತಿಗಾಗಿ ತೆರಳುತ್ತಿದ್ದ ದಿನಗಳಿಂದಲೂ ಪರಿಚಿತರು ಸಾಲದ್ದಕ್ಕೆ ಕ್ಯಾರಿನಿಯ ಕೋಚ್ ಇಟಲಿಯಲ್ಲಿ ಇಮಾನಿಯ ಆರಂಭದ ದಿನಗಳಲ್ಲಿ ತರಬೇತಿ ಕೂಡಾ ನೀಡಿದವರು. ಇಟಲಿಯ ಅಸ್ಸಿಸಿ ನಗರದಲ್ಲಿ ಇಮಾನಿ ಮತ್ತು ಕ್ಯಾರಿನಿ ಒಟ್ಟಾಗಿ ತರಬೇತಿಗಳಲ್ಲಿ ಪಾಲ್ಗೊಂಡಿದ್ದವರು. ಆಗ ಎಂದೂ ಮೂಡದ ಅನುಮಾನ ಈಗ ಇದ್ದಕ್ಕಿದ್ದ ಹಾಗೆ ಮೂಡಿದ್ದು ಹೇಗೆ?
ಒಲಿಂಪಿಕ್ಸ್ ಸಮಿತಿಯು ಈ ವಿಚಾರದಲ್ಲಿ ಗೌರವಯುತವಾಗಿ ನಡೆದುಕೊಂಡು, 2020ರ ಟೋಕಿಯೊ ಒಲಿಂಪಿಕ್ಸ್ ಮಾನದಂಡದ ಪ್ರಕಾರ ಕ್ರಮಬದ್ಧ ನಿಯಮಗಳಿಗೆ ಅನುಸಾರವಾಗಿ ಅನುಮತಿ ನೀಡಿರುವುದಾಗಿಯೂ, ಇಮಾನಿ ಖಲೀಫ್ ವಿರುದ್ಧದ ದಬ್ಬಾಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.
ಇದು ಮೊದಲ ಬಾರಿ ಸೃಷ್ಟಿಯಾಗಿರುವ ವಿವಾದ ಅಲ್ಲ, ಒಲಿಂಪಿಕ್ ಚಿನ್ನದ ಪದಕ ವಿಜೇತೆ - ಓಟಗಾರ್ತಿ ಕ್ಯಾಸ್ಟರ್ ಸೆಮನ್ಯಾ, ಭಾರತದ ಓಟಗಾರ್ತಿ ದ್ಯುತಿ ಚಂದ್ ಕೂಡಾ ಇದೇ ರೀತಿ ಎಕ್ಸ್ ಮತ್ತು ವೈ ಕ್ರೋಮೋಸೋಮ್‌ಗಳ ಇರುವಿಕೆ ಮತ್ತು ಹೆಚ್ಚಿನ ಪ್ರಮಾಣದ ಟೆಸ್ಟೋಸ್ಟಿರೋನ್ ಇರುವಿಕೆಯಿಂದಾಗಿ ಇದೇ ರೀತಿಯ ಅವಮಾನವನ್ನು ಎದುರಿಸಿದ್ದರು.
ಭ್ರೂಣವು ಇನ್ನೂ ಬೆಳವಣಿಗೆಯಲ್ಲಿ ಅಂದರೆ ಗಂಡು ಅಥವಾ ಹೆಣ್ಣು ಹಂತದಲ್ಲಿ ಇರುವಾಗಲೇ ಎಕ್ಸ್,ವೈ ಕ್ರೋಮೋಸೋಮ್‌ಗಳು ಆನುವಂಶಿಕತೆ ರೂಪಿಸುವ ಸಮಯದಲ್ಲಿ ಆಗುವ ವ್ಯತ್ಯಯಗಳಿಂದಾಗಿ ಬಹಳ ಅಪರೂಪಕ್ಕೆ ಗಂಡಿನಲ್ಲಿ ಹೆಣ್ಣಿನ ಲಕ್ಷಣಗಳೂ, ಹೆಣ್ಣಿನಲ್ಲಿ ಗಂಡಿನ ಲಕ್ಷಣಗಳೂ ಕಾಣಿಸಿಕೊಳ್ಳುತ್ತವೆ.
ಹಾಗಾಗಿಯೇ ಕೇವಲ ಟೆಸ್ಟೋಸ್ಟಿರೋನ್ ಪರೀಕ್ಷೆಯಿಂದ ಲಿಂಗಪತ್ತೆ ಮಾಡಿ, ಇವರು ಹೆಣ್ಣು, ಇವರು ಗಂಡು ಎಂದು ಅಳೆಯಲಾಗುವುದಿಲ್ಲ.
ಒಲಿಂಪಿಕ್ಸ್ ಸಮಿತಿಯ ವಿವರಣೆಯ ನಂತರ ಇಟಲಿಯ ಬಾಕ್ಸರ್ ಆ್ಯಂಜೆಲಾ ಕ್ಯಾರಿನಿಯು ಇಮಾನಿ ಖಲೀಫ್‌ರ ಕ್ಷಮೆಯಾಚಿಸಿದ್ದರೂ ಕೂಡಾ ಇಮಾನಿಯ ಮೇಲಿನ ದ್ವೇಷ ಕಾರುವಿಕೆ ನಿಲ್ಲುತ್ತಿಲ್ಲ.
ಕ್ರೀಡೆಗಳು ದ್ವೇಷವನ್ನು ಅಳಿಸಬೇಕೇ ಹೊರತು ಬೆಳೆಸಬಾರದು, ಇದನ್ನು ಅರಿಯದ ಕುಹಕಿಗಳು, ದ್ವೇಷಕೋರರು ಕೇವಲ ಇಮಾನಿಯ ಜನಾಂಗೀಯ ಹಿನ್ನೆಲೆಯ ಕಾರಣಕ್ಕಾಗಿ ದ್ವೇಷ ಹಬ್ಬಿಸುತ್ತಿದ್ದಾರೆ.