ನ್ಯೂಝಿಲ್ಯಾಂಡ್ ವಿರುದ್ಧದ ಟೆಸ್ಟ್ | 462 ರನ್ ಗೆ ಆಲೌಟ್ ಆದ ಭಾರತ
ಬೆಂಗಳೂರು : ಇಲ್ಲಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನ್ಯೂಝಿಲ್ಯಾಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡವು 462 ರನ್ ಗೆ ಆಲೌಟ್ ಆಗಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 46 ರನ್ ಗೆ ಆಲೌಟ್ ಆಗಿದ್ದ ಭಾರತ ತಂಡವು, ಎರಡನೇ ಇನ್ನಿಂಗ್ಸ್‌ನಲ್ಲಿ ಮಳೆಯ ನಡುವೆಯೂ ಪುಟಿದೆದ್ದು ಮರು ಹೋರಾಟ ನೀಡಿತು.
ಆರಂಭದಲ್ಲಿ ಸರ್ಫರಾಝ್ ಖಾನ್, ವಿರಾಟ್ ಕೊಹ್ಲಿ ಇನ್ನಿಂಗ್ಸ್ ಕಟ್ಟಿದರು. ವಿರಾಟ್ ಕೊಹ್ಲಿ 70 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಬಹದಿನಗಳಿಂದ ಟೆಸ್ಟ್ ಅಂಗಳಕ್ಕೆ ಕಮ್ ಬ್ಯಾಕ್ ಮಾಡಬೇಕು ಎಂದು ಹಾತೊರೆಯುತ್ತಿದ್ದ ಸರ್ಫರಾಝ್ ಖಾನ್ ಉತ್ತಮ ಆಟ ಪ್ರದರ್ಶಿಸಿದರು.
ಕೊಹ್ಲಿ ಔಟ್ ಆದ ನಂತರ ಸರ್ಫರಾಝ್ ಖಾನ್ ಗೆ ಸಾಥ್ ನೀಡಿದ ರಿಷಬ್ ಪಂಥ್, ಸರ್ಫರಾಝ್ ರ ಮೊದಲ ಟೆಸ್ಟ್ ಶತಕಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿ ಸಾಕ್ಷಿಯಾದರು. ಯಾವಾಗಲೂ ಆಕ್ರಮಣಕಾರಿ ಆಟ ಪ್ರದರ್ಶಿಸುವುದಕ್ಕೆ ಹೆಸರಾದ ಸರ್ಫರಾಝ್ ಖಾನ್ ಟೆಸ್ಟ್ ಪಂದ್ಯದಲ್ಲೂ ತಮ್ಮ ಬತ್ತಳಿಕೆಯಲ್ಲಿದ್ದ ಶಾಟ್ ಗಳನ್ನು ಬಾರಿಸಿ, ಪಂದ್ಯದದ ಮೊದಲ ದಿನದಿಂದ ನಿರಾಶೆಯಲ್ಲಿದ್ದ ಭಾರತ ಕ್ರೀಡಾಪ್ರೇಮಿಗಳ ಮನ ತಣಿಸಿದರು.
ಶತಕ ಬಾರಿಸುತ್ತಿದ್ದಂತೆ ಕ್ರೀಸ್ ಮಧ್ಯೆ ಓಡಿ ಕುಣಿದು ಕುಪ್ಪಳಿಸಿದ ಸರ್ಫರಾಝ್ ಖಾನ್ ಡಗೌಟ್ ನಲ್ಲಿಯೇ ಕೂರಿಸಿ ಬೆಂಚು ಬಿಸಿ ಮಾಡಿಸುತ್ತಿದ್ದ ಆಯ್ಕೆಗಾರರಿಗೆ ತೀಕ್ಷ್ಣ ಪ್ರತಿಕ್ರಿಯೆಯಾಗಿ ಬ್ಯಾಟ್ ಎತ್ತಿ ತೋರಿಸಿದರು.
ಸರ್ಫರಾಝ್ ಆಟ ಕೊಂಡಾಡಿದ ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ರವಿಶಾಸ್ತ್ರಿ, "ಇನ್ನು ತಂಡದಿಂದ ಸರ್ಫರಾಝ್ ಹೊರಗಿಡುವುದು ಕಷ್ಟ", ಎಂದು ಕುಟುಕಿದ್ದಾರೆ.
ಸರ್ಫರಾಝ್ 150 ರನ್ ಗಳಿಸಿ ಔಟ್ ಆದರು. ಬಳಿಕ ಪಂತ್ ಗೆ ಕೆ ಎಲ್ ರಾಹುಲ್ ಜೋಡಿಯಾದರು. ಟಿ20 ಮಾದರಿಯಲ್ಲಿ ಸಿಕ್ಸರ್ ಬಾರಿಸಿದ ಭಾರತದ ವಿಕೆಟ್ ಕೀಪರ್ ರಿಷಬ್ ಪಂತ್ ಚೆಂಡನ್ನು ಸ್ಟೇಡಿಯಂನಿಂದ ಹೊರಗಟ್ಟಿದರು. ಆ ಮೂಲಕ ನ್ಯೂಝಿಲ್ಯಾಂಡ್ ಆಟಗಾರರು ಕಣ್ಣು ಬಿಟ್ಟು ಆಗಸದೆತ್ತರ ನೋಡುವಂತೆ ಮಾಡಿದರು. ಪಂತ್ ಇನ್ನೇನೂ ಶತಕ ಬಾರಿಸುತ್ತಾರೆ ಎನ್ನುವಾಗ ವಿಲ್ ಒ ರೂರ್ಕಿ ಎಸೆತದಲ್ಲಿ ವಿಕೆಟ್ ಒಪ್ಪಿಸಿ ಕೇವಲ ಒಂದು ರನ್ ನಿಂದ ಶತಕ ವಂಚಿತರಾದರು.
ಆ ಬಳಿಕ ಯಾವ ಬ್ಯಾಟರ್‌ಗಳೂ ಹೆಚ್ಚು ಹೊತ್ತ ಕ್ರೀಸ್ ನಲ್ಲಿ ನಿಲ್ಲಲಿಲ್ಲ. ನಾಲ್ಕನೇ ದಿನದಾಟದಲ್ಲಿ ಅಂತಿಮವಾಗಿ 99.3 ಓವರ್ ಗಳಲ್ಲಿ ಭಾರತ ತಂಡವು 462 ರನ್ ಗಳಿಗೆ ಆಲೌಟ್ ಆಯಿತು.
ನ್ಯೂಝಿಲ್ಯಾಂಡ್‌ಗೆ ಗೆಲ್ಲಲು 107 ರನ್ ಗಳ ಅವಶ್ಯಕತೆಯಿದೆ.