ಭಾರತಕ್ಕೆ 200 ರನ್ ಗಳ ಭರ್ಜರಿ ಜಯ: ಸರಣಿ ಕೈವಶ
ಹೊಸದಿಲ್ಲಿ: ವೆಸ್ಟ್ಇಂಡೀಸ್ ವಿರುದ್ಧದ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ 200 ರನ್ ಗಳ ಭರ್ಜರಿ ಜಯ ಸಾಧಿಸುವ ಮೂಲಕ ಭಾರತ ಕ್ರಿಕೆಟ್ ತಂಡ ಮೂರು ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ. ಈ ಮಹತ್ವದ ಪಂದ್ಯ ಭಾರತದ ಪ್ರಮುಖ ಆಟಗಾರರ ಪ್ರತಿಭೆಯನ್ನು ಪ್ರದರ್ಶಿಸಿರುವುದು ಮಾತ್ರವಲ್ಲದೇ ಏಷ್ಯಾಕಪ್ ಮತ್ತು ತವರು ನೆಲದಲ್ಲಿ ನಡೆಯಲಿರುವ ಬಹುನಿರೀಕ್ಷಿತ ವಿಶ್ವಕಪ್ ಟೂರ್ನಿಯ ತಂಡದಲ್ಲಿ ಇರಬಹುದಾದ ಆಟಗಾರರ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ವಿಶ್ವಕಪ್ ನಿರೀಕ್ಷೆಯಲ್ಲಿರುವವರಿಗೆ ಅವಕಾಶ ನೀಡುವ ದೃಷ್ಟಿಯಿಂದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಹಿರಿಯ ಆಟಗಾರ ವಿರಾಟ್ ಕೊಹ್ಲಿಯವರಿಗೆ ಮತ್ತೆ ವಿಶ್ರಾಂತಿ ನೀಡಲಾಗಿತ್ತು. ಈ ಫಲಿತಾಂಶ ಅತ್ಯಂತ ಶ್ಲಾಘನೀಯ ಪ್ರದರ್ಶನವಾದರೂ, ತಂಡದಲ್ಲಿ ಸಮತೋಲನ ಸಾಧಿಸುವ ನಿಟ್ಟಿನಲ್ಲಿ ಇನ್ನೂ ದೂರ ಸಾಗಬೇಕಿದೆ ಎನ್ನುವುದನ್ನು ತೋರಿಸಿಕೊಟ್ಟಿದೆ.
ಟೂರ್ನಿಯಲ್ಲಿ ಶುಭಮನ್ ಗಿಲ್ ಮೊದಲ ಬಾರಿಗೆ ಉತ್ತಮ ಪ್ರದರ್ಶನ ನೀಡಿದರು. 92 ಎಸೆತಗಳಲ್ಲಿ 85 ರನ್ ಗಳಿಸಿದ ಅವರು ಮೊದಲ ವಿಕೆಟ್ ಗೆ ಇಶಾನ್ ಕಿಶನ್ (64 ಎಸೆತಗಳಲ್ಲಿ 77) ಜತೆ 143 ರನ್‍ಗಳ ಜತೆಯಾಟ ನೀಡಿದರು. ಇದರ ಪರಿಣಾಮವಾಗಿ ಭಾರತ ನಿಗದಿತ 50 ಓವರ್ ಗಳಲ್ಲಿ 351 ರನ್‍ಗಳ ಬೃಹತ್ ಮೊತ್ತ ಕಲೆಹಾಕಿತು.
ಮೊದಲ ಪವರ್ ಪ್ಲೇನಲ್ಲಿ ಮುಕೇಶ್ ಕುಮಾರ್ ಮೂರು ವಿಕೆಟ್ ಕಬಳಿಸುವ ಮೂಲಕ ಆರಂಭದಲ್ಲೇ ವೆಸ್ಟ್ಇಂಡೀಸ್ ಪತನಕ್ಕೆ ನಾಂದಿ ಹಾಡಿದರು. ಅತಿಥೇಯ ತಂಡ 35.3 ಓವರ್ ಗಳಲ್ಲಿ ಕೆವಲ 151 ರನ್‍ಗಳಿಗೆ ಆಲೌಟ್ ಆಯಿತು. ಶಾರ್ದೂಲ್ ಠಾಕೂರ್ (6.3 ಓವರ್ ಗಳಲ್ಲಿ 4/37), ಜಯದೇವ್ ಉದನ್ಕತ್ (5 ಓವರ್ ಗಳಲ್ಲಿ 1/16) ಹಾಗೂ ಕುಲದೀಪ್ ಯಾದವ್ (8 ಓವರ್ ಗಳಲ್ಲಿ 2/25) ಭಾರತದ ಮೇಲುಗೈಗೆ ಕೊಡುಗೆ ನೀಡಿದರು.