ಸಿರಾಜ್ – ಶಮಿ ದಾಳಿಗೆ ತತ್ತರಿಸಿದ ಲಂಕಾ: ಸೆಮೀಸ್ ಗೆ ಭಾರತ
ಮುಂಬೈ: ಇಲ್ಲಿನ ವಾಂಖೇಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿ ಪಂದ್ಯದಲ್ಲಿ ಭಾರತ ತಂಡವು ಶ್ರೀಲಂಕಾ ವಿರುದ್ಧ 302 ರನ್ ಗಳ ಬೃಹತ್ ಜಯ ದಾಖಲಿಸಿದೆ.
ಮುಹಮ್ಮದ್ ಸಿರಾಜ್ ಹಾಗೂ ಮುಹಮ್ಮದ್ ಶಮಿ ದಾಳಿಗೆ ತತ್ತರಿಸಿದ ಶ್ರೀಲಂಕಾ 19.4 ಓವರ್ ನಲ್ಲಿ ಆಲೌಟ್ ಆಗುದರೊಂದಿಗೆ ಭಾರತ ಏಕದಿನ ವಿಶ್ವಕಪ್ ಇತಿಹಾಸದಲ್ಲಿ 302 ರನ್ ಗಳ ಎರಡನೇ ಬೃಹತ್ ಗೆಲುವು ದಾಖಲಿಸಿದೆ. ಪರಿಣಾಮ ಈ ಗೆಲುವಿನೊಂದಿಗೆ ಭಾರತ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ಅಲಂಕರಿಸುವ ಮೂಲಕ ಅಧಿಕೃತವಾಗಿ ಸೆಮೀಸ್ ಪ್ರವೇಶಿಸಿದ ಮೊದಲ ತಂಡವಾಯಿತು
ಶುಬ್ ಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಭರ್ಜರಿ ಜೊತೆಯಾಟ ಹಾಗೂ ಶ್ರೇಯಸ್ ಐಯ್ಯರ್ ಸ್ಟೋಟಕ ಅರ್ಧಶತಕದ ನೆರವಿನಿಂದ ಭಾರತ ಲಂಕಾ ಗೆಲುವಿಗೆ 358 ರನ್ ಗಳ ಗುರಿ ನೀಡಿತು. ಈ ಕಠಿಣ ಗುರಿ ಬೆನ್ನಟ್ಟಲು ಬ್ಯಾಟಿಂಗ್ ಗೆ ಇಳಿದ ಶ್ರೀಲಂಕಾ ಬ್ಯಾಟರ್ಸ್ ಗೆ ಭಾರತೀಯ ವೇಗಿಗಳಾದ ಬುಮ್ರಾ-ಸಿರಾಜ್ ಆಘಾತ ನೀಡಿದರು. ಆರಂಭಿಕ ಮೂವರು ಬ್ಯಾಟರ್ ಗಳನ್ನು ಶೂನ್ಯಕ್ಕೆ ಔಟ್ ಮಾಡುವ ಮುಖಾಂತರ ಪಂದ್ಯವನ್ನು ಭಾರತದ ಕಡೆ ವಾಲಿಸಿದರು. ಕೇವಲ 3 ರನ್ ಗೆ 4 ವಿಕೆಟ್ ಕಳದುಕೊಂಡ ಲಂಕಾ ಬಹುತೇಕ ಸೋಲಿನ ದವಡೆಗೆ ಸಿಲುಕಿತು .ಓಪನರ್ ಪಾತುಮ್ ನಿಸಾಂಕ ಬುಮ್ರಾ ಬೌಲಿಂಗ್ ನಲ್ಲಿ ಔಟ್ ಆದರೆ ದಿಮುತ್ ಕರುಣರತ್ನೆ, ನಾಯಕ ಕುಸಾಲ್ ಮೆಂಡಿಸ್, ಸಧೀರ ಸಮರವಿಕ್ರಮ ಮೂವರು ಬ್ಯಾಟರ್ ಗಳು ಕ್ರಮವಾಗಿ ಮುಹಮ್ಮದ್ ಸಿರಾಜ್ ಗೆ ವಿಕೆಟ್ ಒಪ್ಪಿಸಿದರು. ಆದರೆ ಮತ್ತೆ ಬೌಲಿಂಗ್ ದಾಳಿ ಮುದುವರಿರಿಸಿದ ಮುಹಮ್ಮದ್ ಶಮಿ 10 ನೇ ಓವರ್ ನಲ್ಲಿ ಚರಿತ್ ಅಸಲಂಕಾ ಹಾಗೂ ದುಶಾನ್ ಹೇಮಂತ ರನ್ನು ಸತತ ಎರಡು ಬಾಲ್ ನಲ್ಲಿ ಔಟ್ ಮಾಡುವ ಮೂಲಕ ಹ್ಯಾಟ್ರಿಕ್ ಅವಕಾಶ ಪಡೆದರು ಆದರೆ ಚಮೀರ ಅದಕ್ಕೆ ಆಸ್ಪದ ನೀಡಲಿಲ್ಲ. ಏಂಜಲೋ ಮಾಥ್ಯೂಸ್ 12 ದುಶ್ಮಂತ ಚಮೀರ 0, ಮಹೇಶ ತೀಕ್ಷಣ 12 ,ರಜಿತ 14, ದಿಲ್ಶನ್ 5 ರನ್ ಬಾರಿಸಿದರು.
ಭಾರತದ ಪರ ಮುಹಮ್ಮದ್ ಶಮಿ 5 ವಿಕೆಟ್ ಸಾಧನೆ ಮಾಡಿದರೆ ಮುಹಮ್ಮದ್ ಸಿರಾಜ್ 3 ಹಾಗೂ ಜಸ್ಪ್ರೀತ್ ಬುಮ್ರಾ ಒಂದು ವಿಕೆಟ್ ಕಬಳಿಸಿದರು.
ಈ ಮೊದಲು ಟಾಸ್ ಗೆದ್ದ ಶ್ರೀಲಂಕಾ ತಂಡ ಬೌಲಿಂಗ್ ಆಯ್ದುಕೊಂಡು ಭಾರತಕ್ಕೆ ಬ್ಯಾಟಿಂಗ್ ಆಹ್ವಾನ ನೀಡಿತು. ಇತ್ತ ಬ್ಯಾಟಿಂಗ್ ಗೆ ಇಳಿದ ಭಾರತಕ್ಕೆ ಲಂಕಾದ ದಿಲ್ಶನ್ ಮಧುಶಂಕ ಆರಂಭಿಕ ಆಘಾತ ನೀಡಿದರು, ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ್ದ ನಾಯಕ ರೋಹಿತ್ ಶರ್ಮಾ ಕೇವಲ 4 ರನ್ ಗೆ ಬೌಲ್ಡ್ ಆದರು. ರೋಹಿತ್ ವಿಕೆಟ್ ಪತನದ ಬಳಿಕ ಒಂದಾದ ಶುಬ್ ಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ಜೋಡಿ ಲಂಕಾ ಬೌಲರ್ ಗಳನ್ನು ಮನಬಂದಂತೆ ದಂಡಿಸಿದರು . 179 ರನ್ ಗಳ ಭರ್ಜರಿ ಜೊತೆಯಾಟ ನಿರ್ವಹಿಸಿದ್ದ ಈ ಜೋಡಿ ಪರಸ್ಪರ ಶತಕ ಸಿಡಿಸುವ ಅಂಚಿನಲ್ಲಿ ಎಡವಿದರು. ಲಂಕಾ ವಿರುದ್ಧ ಶುಬ್ ಮನ್ ಗಿಲ್ 11 ಬೌಂಡರಿ 2 ಸಿಕ್ಸರ್ ಸಹಿತ 92 ರನ್ ಬಾರಿಸಿದರೆ ವಿರಾಟ್ ಕೊಹ್ಲಿ 11 ಬೌಂಡರಿ ಸಹಾಯದಿಂದ 88 ರನ್ ಗಳಿಸಿ ಕ್ರಮವಾಗಿ ಇಬ್ಬರೂ ಬ್ಯಾಟರ್ ಗಳು ಮದುಶಂಕ ಬೌಲಿಂಗ್ ನಲ್ಲಿ ಪೆವಿಲಿಯನ್ ಸೇರಿಕೊಂಡರು. ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯ ದಾಖಲೆಯ ಶತಕಕ್ಕೆ ಕಾದಿದ್ದ ಅಭಿಮಾನಿಗಳು , ಶತಕದಂಚಿನಲ್ಲಿ ಎಡವಿದ ವಿರಾಟ್ ವಿಕೆಟ್ ಪತನ ಸ್ಟೇಡಿಯಂನಲ್ಲಿ ನೆರದಿದ್ದ ಅಭಿಮಾನಿಗಳನ್ನು ತೀವ್ರ ನಿರಾಸೆ ಗೊಳಿಸಿತು. ಕೊಹ್ಲಿ- ಗಿಲ್ ಜೋಡಿ ವಿಕೆಟ್ ಪತನದ ಬಳಿಕ ಭಾರತದ ಪರ ದೊಡ್ಡ ಜೊತೆಯಾಟ ಸೃಷ್ಟಿ ಆಗಲಿಲ್ಲ. ಕೆಎಲ್ ರಾಹುಲ್ 21 ರನ್ ಗೆ ಚಮೀರ ಗೆ ವಿಕೆಟ್ ನೀಡಿದರೆ ಸೂರ್ಯಕುಮಾರ್ ಯಾದವ್ 12 ರನ್ ಗೆ ಮದುಶಂಕಗೆ ವಿಕೆಟ್ ಒಪ್ಪಿಸಿದರು. ಮಧ್ಯಮ ಓವರ್ ನಲ್ಲಿ ತಂಡದ ಪರ ಏಕಾಂಗಿ ಭರ್ಜರಿ ಬ್ಯಾಟಿಂಗ್ ಪದರ್ಶಿಸಿದ ಶ್ರೇಯಸ್ ಐಯ್ಯರ್ 3 ಬೌಂಡರಿ 6 ಸಿಕ್ಸರ್ ಸಹಿತ 88 ರನ್ ಬಾರಿಸಿದರು. ಕೊನೆಯಲ್ಲಿ ಸ್ಟೋಟಕ ಆಟವಾಡಿದ ರವೀಂದ್ರ ಜಡೇಜ 34 ರನ್ ಪೇರಿಸಿ ತಂಡ ಮುನ್ನೂರ ಐವತ್ತು ದಾಟುವಂತೆ ಮಾಡಿದರು. ಮುಹಮ್ಮದ್ ಶಮಿ 2 , ಬುಮ್ರಾ 1 ರನ್ ಸೇರಿಸಿದರು.
ಭಾರತದ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ ದಿಲ್ಶನ್ ಮಧುಶಂಕ5 ವಿಕೆಟ್ ಕಬಳಿಸಿ ಭಾರತ ಕಟ್ಟಿ ಹಾಕುವ ಪ್ರಯತ್ನ ಮಾಡಿದರೆ. ಗಾಯದ ಕಾರಣ ತಂಡದಿಂದ ಹೊರಗಿಳಿದಿದ್ದ ದುಶ್ಮಂತ ಚಮೀರ ಒಂದು ವಿಕೆಟ್ ಪಡೆದರು.