ಭಾರತದಲ್ಲಿ ರೆಫರಿಗಳ ಗುಣಮಟ್ಟ ಸುಧಾರಿಸುತ್ತಿದೆ : ಎಐಎಫ್‌ಎಫ್ ಮುಖ್ಯ ತೀರ್ಪು ನಿರ್ವಹಣಾ ಅಧಿಕಾರಿ ಟ್ರೆವರ್ ಕೆಟಲ್

Update: 2024-11-10 15:54 GMT

ಟ್ರೆವರ್ ಕೆಟಲ್ | PC ; FACEBOOK 

ಹೊಸದಿಲ್ಲಿ : ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್)ನಲ್ಲಿ ರೆಫರಿಗಳ ನಿರ್ವಹಣೆ ಕಳಪೆಯಾಗಿದೆ ಎಂಬುದಾಗಿ ಕೋಚ್‌ಗಳು ದೂರುತ್ತಿದ್ದಾರೆ. ಆದರೆ, ರೆಫರಿಗಳ ಗುಣಮಟ್ಟವು ಹಲವು ವಿಭಾಗಗಳಲ್ಲಿ ಸುಧಾರಿಸುತ್ತಿದೆ ಎಂದು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ (ಎಐಎಫ್‌ಎಫ್)ನ ಮುಖ್ಯ ತೀರ್ಪು ನಿರ್ವಹಣಾ ಅಧಿಕಾರಿ ಟ್ರೆವರ್ ಕೆಟಲ್ ಹೇಳುತ್ತಾರೆ.

ಇಂಡಿಯನ್ ಸೂಪರ್ ಲೀಗ್ ಕ್ಲಬ್‌ನ ಹಲವು ಕೋಚ್‌ಗಳು, ಅದರಲ್ಲೂ ಮುಖ್ಯವಾಗಿ ವಿದೇಶಿ ಕೋಚ್‌ಗಳು ಈ ಲೀಗ್‌ ನ ಕಳಪೆ ಅಂಪಯರಿಂಗ್ ನಿರ್ವಹಣೆ ಬಗ್ಗೆ ಹಿಂದೆ ಮಾತನಾಡಿದ್ದಾರೆ. ಅದೂ ಅಲ್ಲದೆ, ಸ್ವತಃ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಅಧ್ಯಕ್ಷ ಕಲ್ಯಾಣ್ ಚೌಬೆ ಕೆಲವು ತಿಂಗಳುಗಳ ಹಿಂದೆ ಈ ವಿಷಯದಲ್ಲಿ ಕಳವಳ ವ್ಯಕ್ತಪಡಿಸಿದ್ದರು.

ಆದರೆ, ಐಎಸ್‌ಎಲ್‌ನಲ್ಲಿ ರೆಫರಿಗಳ ನಿರ್ವಹಣೆಯ ಗುಣಮಟ್ಟದ ಬಗ್ಗೆ ಹಿಂದಿನ ಮತ್ತು ಪ್ರಸ್ತುತ ವಿದೇಶಿ ಕೋಚ್‌ ಗಳು ವ್ಯಕ್ತಪಡಿಸಿರುವ ಅಭಿಪ್ರಾಯಗಳ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೆಟಲ್, ಭಾರತೀಯ ರೆಫರಿಗಳ ನಿರ್ವಹಣೆಯ ಗುಣಮಟ್ಟ ಸುಧಾರಿಸುತ್ತಿದೆ ಎಂದು ಹೇಳಿದರು.

‘‘ಭಾರತೀಯ ರೆಫರಿಗಳ ಗುಣಮಟ್ಟವು ಹಲವು ವಿಭಾಗಗಳಲ್ಲಿ ಸುಧಾರಿಸುತ್ತಿದೆ. ಕಠಿಣ ಶಿಸ್ತು ಕ್ರಮ ತೆಗೆದುಕೊಳ್ಳುವ ಧೈರ್ಯ ಅವರಲ್ಲಿ ಹೆಚ್ಚುತ್ತಿದೆ, ಆಟದೊಂದಿಗೆ ಹೆಜ್ಜೆಯಿಡಲು ಅವರ ದೈಹಿಕ ಕ್ಷಮತೆಯೂ ಹೆಚ್ಚಿದೆ, ಆಟಗಾರರ ಅತಿರಂಜಿತ ಮನವಿಗಳಿಂದ ಅವರು ಮೋಸಹೋಗುವುದು ಕಡಿಮೆಯಾಗುತ್ತಿದೆ’’ ಎಂದು ರವಿವಾರ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

‘‘ರೆಫರಿಗಳ ನಿರ್ವಹಣೆಯ ಗುಣಮಟ್ಟದ ಪ್ರಮುಖ ಮಾನದಂಡವಾಗಿ ಪಂದ್ಯದ ಪ್ರಮುಖ ಘಟನೆಗಳ ಕುರಿತ ನಿರ್ಧಾರಗಳ ನಿಖರತೆಯನ್ನು ಪರಿಶೀಲಿಸಲಾಗುತ್ತಿದೆ. 85 ಶೇಕಡ ನಿಖರತೆ ಸಾಧಿಸುವುದು ನಮ್ಮ ಗುರಿಯಾಗಿದೆ. ಆಸಕ್ತಿದಾಯಕ ವಿಚಾರವೆಂದರೆ, ರೆಫರಿಗಳ ನಿರ್ವಹಣೆ ಬಗ್ಗೆ ಪ್ರಧಾನ ಕೋಚ್‌ ಗಳು ಮಾಡಿರುವ ಸಮೀಕ್ಷೆಯಲ್ಲಿ, ವಿಎಆರ್ ತಂತ್ರಜ್ಞಾನ ಬಳಸದೆ ರೆಫರಿಗಳು ತೆಗೆದುಕೊಂಡಿರುವ ನಿರ್ಧಾರವು 82.5 ಶೇಕಡ ನಿಖರವಾಗಿದೆ ಎನ್ನುವುದು ಹೊರಬಿದ್ದಿದೆ’’ ಎಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News