ಎಲ್ಲ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ವೃದ್ಧಿಮಾನ್ ಸಹಾ

Update: 2025-02-02 12:54 IST
Photo of Wridhiman Shah

Photo credit: PTI

  • whatsapp icon

ಹೊಸದಿಲ್ಲಿ: ಭಾರತೀಯ ವಿಕೆಟ್ ಕೀಪರ್ ಬ್ಯಾಟರ್ ವೃದ್ಧಿಮಾನ್ ಸಹಾ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. 18 ವರ್ಷಗಳ ಸುದೀರ್ಘ ಕ್ರಿಕೆಟ್ ವೃತ್ತಿಜೀವನದ ನಂತರ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.

2021ರವರೆಗೆ ಭಾರತೀಯ ಟೆಸ್ಟ್ ತಂಡದಲ್ಲಿ ಆಡಿದ್ದ ವೃದ್ಧಿಮಾನ್ ಸಹಾ, ತಮ್ಮ ಅತ್ಯುತ್ತಮ ವಿಕೆಟ್ ಕೀಪಿಂಗ್ ಮೂಲಕ ಗಮನ ಸೆಳೆದಿದ್ದರು. ಇದೀಗ ತಮ್ಮ 40ನೇ ವಯಸ್ಸಿನಲ್ಲಿ ಅವರು ಎಲ್ಲ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಪ್ರಕಟಿಸಿದ್ದಾರೆ.

ತಮ್ಮ 18 ವರ್ಷಗಳ ಕ್ರಿಕೆಟ್ ವೃತ್ತಿಜೀವನದಲ್ಲಿ ವೃದ್ಧಿಮಾನ್ ಸಹಾ 15 ವರ್ಷಗಳ ಕಾಲ ಪಶ್ಚಿಮ ಬಂಗಾಳ ಪರವಾಗಿ ಹಾಗೂ ಎರಡು ವರ್ಷಗಳ ಕಾಲ ತ್ರಿಪುರ ಪರವಾಗಿ ದೇಶೀಯ ಕ್ರಿಕೆಟ್ ಆಡಿದ್ದಾರೆ. ಈ ಅವಧಿಯಲ್ಲಿ ಒಟ್ಟು 142 ಪಂದ್ಯಗಳನ್ನು ಆಡಿರುವ ಅವರು, 14 ಶತಕಗಳೊಂದಿಗೆ ಒಟ್ಟು 7,169 ರನ್ ಪೇರಿಸಿದ್ದಾರೆ.

2010ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದ ವೃದ್ಧಿಮಾನ್ ಸಹಾ, ಒಟ್ಟು 40 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಈ ಪೈಕಿ 56 ಇನಿಂಗ್ಸ್ ಗಳಲ್ಲಿ ಒಟ್ಟು 1,353 ರನ್ ಗಳಿಸಿದ್ದರು.

ಪಂಜಾಬ್ ವಿರುದ್ಧ ತಮ್ಮ ಕೊನೆಯ ಪ್ರಥಮ ದರ್ಜೆ ಪಂದ್ಯವಾಡಿದ ವೃದ್ಧಿಮಾನ್ ಸಹಾ ಪಶ್ಚಿಮ ಬಂಗಾಳ ತಂಡಕ್ಕೆ ವಿಶೇಷ ಕಾಣಿಕೆಯನ್ನೇನೂ ನೀಡಲು ಸಾಧ್ಯವಾಗಲಿಲ್ಲ. ಆ ಪಂದ್ಯವನ್ನು ಇನಿಂಗ್ಸ್ ಅಂತರದಲ್ಲಿ ಪಶ್ಚಿಮ ಬಂಗಾಳ ಜಯಿಸಿದ್ದರಿಂದ, ಅವರಿಗೆ ಎರಡನೆ ಇನಿಂಗ್ಸ್ ನಲ್ಲಿ ಬ್ಯಾಟಿಂಗ್ ಮಾಡುವ ಅವಕಾಶವೂ ದೊರೆಯಲಿಲ್ಲ. ಪಶ್ಚಿಮ ಬಂಗಾಳ ತಂಡವು ಪಂಜಾಬ್ ತಂಡವನ್ನು ಇನಿಂಗ್ಸ್ ಹಾಗೂ 13 ರನ್ ಗಳ ಅಂತರದಿಂದ ಪರಾಭವಗೊಳಿಸಿತು.

“ಈಗ ಜೀವನದಲ್ಲಿ ಹೊಸ ಅಧ್ಯಾಯ ಪ್ರಾರಂಭಿಸುವ ಸಮಯ. ಕುಟುಂಬ ಮತ್ತು ಸ್ನೇಹಿತರಿಗೆ ನಮ್ಮನ್ನು ಮೀಸಲಿಡುವ ಸಮಯ. ಕ್ರಿಕೆಟ್ ಆಡುತ್ತಿದ್ದ ಸಮಯದಲ್ಲಿ ಸಾಧ್ಯವಾಗದ ಆ ಕ್ಷಣಗಳನ್ನು ಜೀವಿಸಲು ಹಾಗೂ ಅನುಭವಿಸಲು ನಾನು ಬಯಸುತ್ತೇನೆ” ಎಂದು ತಮ್ಮ ನಿವೃತ್ತಿ ನಿರ್ಧಾರದ ಕುರಿತು ವೃದ್ಧಿಮಾನ್ ಸಹಾ ಹೇಳಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News