ಆಸ್ಟ್ರೇಲಿಯ ವಿರುದ್ಧ ಭಾರತದ ಮಹಿಳಾ ತಂಡಕ್ಕೆ ಹ್ಯಾಟ್ರಿಕ್ ಸೋಲು
ಪರ್ತ್: ಆರಂಭಿಕ ಆಟಗಾರ್ತಿ ಸ್ಮತಿ ಮಂಧಾನ ಶತಕ ಗಳಿಸಿದ ಹೊರತಾಗಿಯೂ ಭಾರತ ಕ್ರಿಕೆಟ್ ತಂಡವು ಆಸ್ಟ್ರೇಲಿಯ ವಿರುದ್ಧದ ಮೂರನೇ ಮಹಿಳೆಯರ ಏಕದಿನ ಪಂದ್ಯದಲ್ಲಿ 83 ರನ್‌ನಿಂದ ಸೋಲುಂಡಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 0-3 ಅಂತರದಿಂದ ವೈಟ್‌ವಾಶ್ ಮುಖಭಂಗಕ್ಕೆ ಒಳಗಾಗಿದೆ.
ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ಭಾರತ ತಂಡವು ಆಸ್ಟ್ರೇಲಿಯವನ್ನು ಮೊದಲು ಬ್ಯಾಟಿಂಗ್‌ಗೆ ಇಳಿಸಿತು. ಒಂದು ಹಂತದಲ್ಲಿ 78 ರನ್‌ಗೆ 4 ವಿಕೆಟ್‌ಗಳನ್ನು ಕಳೆದುಕೊಂಡ ಆಸ್ಟ್ರೇಲಿಯ ತಂಡವು ಸಂಕಷ್ಟದಲ್ಲಿತ್ತು. ಆಗ 95 ಎಸೆತಗಳಲ್ಲಿ 110 ರನ್ ಗಳಿಸಿದ ಅನಬೆಲ್ ಸದರ್‌ಲ್ಯಾಂಡ್ ಅವರು ಅಶ್ಲೆ ಗಾರ್ಡ್ನರ್(50 ರನ್)ಹಾಗೂ ನಾಯಕಿ ತಹಲಿಯಾ ಮೆಕ್‌ಗ್ರಾತ್(ಔಟಾಗದೆ 56) ಜೊತೆ ಸೇರಿ ಗಮನಾರ್ಹ ಕೊಡುಗೆ ನೀಡಿದರು. ಈ ಮೂವರ ಸಾಹಸದಿಂದ ಆಸ್ಟ್ರೇಲಿಯ ತಂಡವು ವಾಕಾ ಕ್ರೀಡಾಂಗಣಗದಲ್ಲಿ 50 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 298 ರನ್ ಗಳಿಸಿತು.
ಗೆಲ್ಲಲು 299 ರನ್ ಬೆನ್ನಟ್ಟಿದ ಭಾರತ ತಂಡವು 45.1 ಓವರ್‌ಗಳಲ್ಲಿ 215 ರನ್ ಗಳಿಸಿ ಆಲೌಟಾಯಿತು.
109 ಎಸೆತಗಳಲ್ಲಿ 105 ರನ್ ಗಳಿಸಿದ ಮಂಧಾನ ಭಾರತದ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿದರು. ಮಂಧಾನ ಇನಿಂಗ್ಸ್‌ನಲ್ಲಿ 14 ಬೌಂಡರಿ ಹಾಗೂ ಒಂದು ಸಿಕ್ಸರ್ ಇದ್ದವು.
ಮಂಧಾನ ಹಾಗೂ ಹರ್ಲೀನ್ ದೆವೊಲ್(39 ರನ್, 64 ಎಸೆತ)ನಡುವಿನ 118 ರನ್ ಜೊತೆಯಾಟವನ್ನು ಅಲನಾ ಕಿಂಗ್ ಬೇರ್ಪಡಿಸಿದರು. ಆ ನಂತರ ಮಂಧಾನಗೆ ಮತ್ತೊಂದು ಕಡೆಯಿಂದ ಸರಿಯಾದ ಬೆಂಬಲ ಸಿಗದ ಕಾರಣ ಭಾರತದ ಇನಿಂಗ್ಸ್ ಸೊರಗಿತು.
ಬ್ಯಾಟ್ ಹಾಗೂ ಬಾಲ್‌ನಲ್ಲಿ ಮಿಂಚಿದ ಗಾರ್ಡ್ನರ್ 30 ರನ್ ನೀಡಿ ಐದು ವಿಕೆಟ್‌ಗಳನ್ನು ಉರುಳಿಸಿದರು.
ವಿಕೆಟ್‌ಕೀಪರ್ ರಿಚಾ ಘೋಷ್(2 ರನ್), ನಾಯಕಿ ಹರ್ಮನ್‌ಪ್ರೀತ್ ಕೌರ್(12 ರನ್), ಜೆಮಿಮಾ ರೋಡ್ರಿಗಸ್(16 ರನ್) ಹಾಗೂ ದೀಪ್ತಿ ಶರ್ಮಾ(0) ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾದರು.
ಇದಕ್ಕೂ ಮೊದಲು ಅರುಂಧತಿ ರೆಡ್ಡಿ ಅವರ ಅತ್ಯುತ್ತಮ ಬೌಲಿಂಗ್ ಸ್ಪೆಲ್‌ನಿಂದ ಚೇತರಿಸಿಕೊಂಡ ಆಸ್ಟ್ರೇಲಿಯ ತಂಡವು ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಿತು. ರೆಡ್ಡಿ 26 ರನ್ ನೀಡಿ ನಾಲ್ಕು ನಿರ್ಣಾಯಕ ವಿಕೆಟ್‌ಗಳನ್ನು ಪಡೆದು ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಜೀವನಶ್ರೇಷ್ಠ ಪ್ರದರ್ಶನ ನೀಡಿದರು.
ಲಿಚ್‌ಫೀಲ್ಡ್(25 ರನ್)ಹಾಗೂ ಜಾರ್ಜಿಯಾ ವೊಲ್(26 ರನ್)58 ರನ್ ಆರಂಭಿಕ ಜೊತೆಯಾಟ ನಡೆಸಿದರು. ಉತ್ತಮ ಬೌಲಿಂಗ್ ಸಂಘಟಿಸಿದ ರೆಡ್ಡಿ ಪಂದ್ಯಕ್ಕೆ ತಿರುವು ನೀಡಿದರು. ಇಬ್ಬರು ಆರಂಭಿಕ ಆಟಗಾರ್ತಿಯರಲ್ಲದೆ, ಎಲ್ಲಿಸ್ ಪೆರ್ರಿ(4 ರನ್) ಹಾಗೂ ಬೆಥ್ ಮೂನಿ(10 ರನ್) ವಿಕೆಟ್‌ಗಳನ್ನು ಉರುಳಿಸಿದರು. ಆಗ ಆಸ್ಟ್ರೇಲಿಯದ ಸ್ಕೋರ್ 78ಕ್ಕೆ 4.
ಸದರ್‌ಲ್ಯಾಂಡ್ ಹಾಗೂ ಗಾರ್ಡ್ನರ್ 5ನೇ ವಿಕೆಟ್‌ಗೆ 96 ರನ್ ಜೊತೆಯಾಟ ನಡೆಸಿ ಆಸ್ಟ್ರೇಲಿಯದ ಬ್ಯಾಟಿಂಗ್‌ಗೆ ಆಸರೆಯಾದರು. ಸದರ್‌ಲ್ಯಾಂಡ್ ಅವರು ದೀಪ್ತಿ ಸಹಿತ ಭಾರತದ ಸ್ಪಿನ್ನರ್‌ಗಳ ಎದುರು ಪ್ರಾಬಲ್ಯ ಸಾಧಿಸಿದರು.
ಅಂತಿಮ ಓವರ್‌ನಲ್ಲಿ ದೀಪ್ತಿ ಬೌಲಿಂಗ್‌ನಲ್ಲಿ ಸಿಕ್ಸರ್ ಸಿಡಿಸಿದ ಸದರ್‌ಲ್ಯಾಂಡ್ ಶತಕ ಪೂರೈಸಿದರು.
ಮೆಕ್‌ಗ್ರಾತ್ ಹಾಗೂ ಸದರ್‌ಲ್ಯಾಂಡ್ 6ನೇ ವಿಕೆಟ್‌ಗೆ 122 ರನ್ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.
ಭಾರತ ತಂಡವು ಫೀಲ್ಡಿಂಗ್‌ನಲ್ಲಿ ಮೂರು ಕ್ಯಾಚ್‌ಗಳನ್ನು ಕೈಚೆಲ್ಲಿ ಕೈಸುಟ್ಟುಕೊಂಡಿತು.
3ನೇ ಪಂದ್ಯದಲ್ಲಿ ಮಿಂಚಿದ್ದಲ್ಲದೆ ಸರಣಿಯಲ್ಲಿ ಒಟ್ಟು 122 ರನ್ ಹಾಗೂ 6 ವಿಕೆಟ್‌ಗಳನ್ನು ಪಡೆದಿರುವ ಸದರ್‌ಲ್ಯಾಂಡ್ ಪಂದ್ಯಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಎರಡೂ ಪ್ರಶಸ್ತಿಗಳನ್ನು ಬಾಚಿಕೊಂಡರು.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯ: 50 ಓವರ್‌ಗಳಲ್ಲಿ 298/6
(ಸದರ್‌ಲ್ಯಾಂಡ್ 110, ಮೆಕ್‌ಗ್ರಾತ್ ಔಟಾಗದೆ 56, ಗಾರ್ಡ್ನರ್ 50, ಅರುಂಧತಿ ರೆಡ್ಡಿ 4-26)
ಭಾರತ: 45.1 ಓವರ್‌ಗಳಲ್ಲಿ 215 ರನ್‌ಗೆ ಆಲೌಟ್
(ಸ್ಮತಿ ಮಂಧಾನ 105, ಹರ್ಲೀನ್ 39, ಗಾರ್ಡ್ನರ್ 5-30, ಮೆಗಾನ್ ಶುಟ್ 2-26, ಅಲನಾ ಕಿಂಗ್ 2-27)
ಪಂದ್ಯಶ್ರೇಷ್ಠ: ಅನಬೆಲ್ ಸದರ್‌ಲ್ಯಾಂಡ್
ಸರಣಿಶ್ರೇಷ್ಠ: ಅನಬೆಲ್ ಸದರ್‌ಲ್ಯಾಂಡ್.