ಜಾಗತಿಕ ಮಟ್ಟದಲ್ಲಿ ಮಿಂಚುತ್ತಿರುವ ಭಾರತೀಯ ಯುವ ಚೆಸ್ ಪಟುಗಳು
ಹೊಸದಿಲ್ಲಿ: ವಿಶ್ವನಾಥನ್ ಆನಂದ್ ಮೂರು ದಶಕಗಳ ಕಾಲ ಭಾರತದ ನಂ. 1 ಚೆಸ್ ಪಟು ಎನಿಸಿಕೊಂಡಿದರು. ಆದರೆ ಸೆಪ್ಟೆಂಬರ್ ನಿಂದ ಈ ಕಿರೀಟ 17 ವರ್ಷದ ಡಿ.ಗುಕೇಶ್ ಗೆ ವರ್ಗಾವಣೆಯಾಗಲಿದೆ. ಈ ಪ್ರತಿಭಾವಂತ ಚೆಸ್ ಪಟುವಿಗೆ ಆನಂದ್ ದಾರಿ ಮಾಡಿಕೊಡುತ್ತಿರುವುದು ಮಹತ್ವದ ಬೆಳವಣಿಗೆಯಾಗಿದ್ದು, ಇದು ದೇಶದ ಚೆಸ್ ಕ್ಷೇತ್ರಕ್ಕೆ ಮಾತ್ರ ಸೀಮಿತವಲ್ಲ. ಇದು ಇಡೀ ಚೆಸ್ ಜಗತ್ತಿನಲ್ಲಿ ಮಹತ್ವ ಪಡೆದಿದೆ.
ವಿಶ್ವದ ಅಗ್ರ 50 ಚೆಸ್ ಆಟಗಾರರ ಪೈಕಿ ನಾಲ್ವರು ಭಾರತೀಯ ಕಿರಿಯ ಆಟಗಾರರಿದ್ದಾರೆ. ಗುಕೇಶ್ ವಿಶ್ವದ ಎಂಟನೇ ಕ್ರಮಾಂಕದಲ್ಲಿದ್ದು 2758.4 ಲೈವ್ ರೇಟಿಂಗ್ ಹೊಂದಿದ್ದಾರೆ. ಪ್ರಜ್ಞಾನಂದ (2720.8) 23ನೇ ಸ್ಥಾನದಲ್ಲಿದ್ದು, ಅರ್ಜುನ್ ಎರಿಗೈಸಿ (2712) 30ನೇ, ನಿಹಾಲ್ ಸರಿನ್ (2694.2) 42ನೇ ಸ್ಥಾನದಲ್ಲಿದ್ದಾರೆ. ರಾನಕ್ ಸಧ್ವಾನಿ, ಲಿಯೋನ್ ಕುಕೆ ಮೆಂಡೋನ್ಸಾ ಮತ್ತು ಆದಿತ್ಯ ಧಿಂಗ್ರಾ ಅವರ ಜತೆ ಏಳು ಮಂದಿ ಭಾರತೀಯರು ವಿಶ್ವದ ಅಗ್ರ 20 ಕಿರಿಯ ಪಟುಗಳ ಪೈಕಿ ಸ್ಥಾನ ಪಡೆದಿದ್ದಾರೆ.
ಪ್ರಜ್ಞಾನಂದ
ಈ ಕಿರಿಯ ಆಟಗಾರರು ಇಡೀ ಅಂಕಪಟ್ಟಿಯ ಚಿತ್ರಣವನ್ನೇ ಬದಲಿಸುತ್ತಿದ್ದಾರೆ. 18ರ ವಯೋಮಿತಿಯ ಮತ್ತು ಕೆಳ ಹಂತದ ವಿಶ್ವ ಯುವ ಚಾಂಪಿಯನ್ ಶಿಪ್ ನಲ್ಲಿ ಭಾರತ ಮಿಂಚಿದ್ದರೂ, 20ರ ವಯೋಮಿತಿಯ ವರ್ಗದಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿತ್ತು. ಆದರೆ ಇದೀಗ ವಿಶ್ವದ ಹಿರಿಯರ ವಿಭಾಗದಲ್ಲಿ ಭಾರತೀಯ ಚೆಸ್ ಕುಡಿಗಳು ಮಿಂಚುತ್ತಿವೆ. ಈ ಬದಲಾವಣೆ ಸಾಧ್ಯವಾದದ್ದು ಹೇಗೆ?
ಅರ್ಜುನ್ ಎರಿಗೈಸಿ
ಮೊದಲ ನೋಟಕ್ಕೆ ಕಾಣುವುದು ಕೋವಿಡ್-19 ಸಾಂಕ್ರಾಮಿಕ ಹಾಗೂ ವಿಶ್ವನಾಥ್ ಆನಂದ್ ಅವರ ಮಾರ್ಗದರ್ಶನ. ಚೆಸ್ ಎಂಜಿನ್ ಗಳು ಹಾಗೂ ಸಾಫ್ಟ್ ವೇರ್ ಗಳು ಈ ಯುವಪ್ರತಿಭೆಗಳನ್ನು ಈ ಕ್ಷೇತ್ರದ ದಿಗ್ಗಜರ ಮಟ್ಟದಲ್ಲೇ ತರಬೇತಿ ಪಡೆಯಲು ಅನುವು ಮಾಡಿಕೊಟ್ಟಿವೆ. ಗುಕೇಶ್ ಹಾಗೂ ಪ್ರಜ್ಞಾನಂದರಂತಹ ಪ್ರತಿಭೆಗಳು ವಿಶ್ವದ ಚೆಸ್ ದಿಗ್ಗಜರಿಗೆ ಸವಾಲು ಹಾಕಿದ್ದಾರೆ. ಈಗಾಗಲೇ ಮುಂದಿನ ಹಂತಕ್ಕೇರಿರುವ ಕಾರಣ ಕಳೆದ ವರ್ಷ ಕಿರಿಯರ ವಿಭಾಗದಲ್ಲಿ ಸ್ಪರ್ಧಿಸದೇ ಇರಲು ಗುಕೇಶ್ ನಿರ್ಧರಿಸಿದ್ದರು. ಕಳೆದ ವರ್ಷ ಅವರ ನೇತೃತ್ವದ ಭಾರತ ಬಿ ತಂಡ ಭಾರತ ಎ ತಂಡದ ವಿರುದ್ಧ ಗೆಲುವು ಸಾಧಿಸಿ ಒಲಿಂಪಿಯಾಡ್ ಕಂಚಿನ ಪದಕ ಗೆದ್ದಿತ್ತು.