ಭಾರತದ ಮತ್ತೊಂದು ವಿಶ್ವಕಪ್ ಕನಸು ಈಡೇರಿಕೆಗೆ ಇನ್ನೊಂದೇ ಮೆಟ್ಟಿಲು ಬಾಕಿ

Update: 2023-11-18 17:37 GMT

Photo: PTI 

ಅಹ್ಮದಾಬಾದ್: ಎರಡು ಬಾರಿಯ ಚಾಂಪಿಯನ್ ಭಾರತ ಮತ್ತೊಮ್ಮೆ ಏಕದಿನ ವಿಶ್ವಕಪ್ ಎತ್ತಿಹಿಡಿಯುವ ತನ್ನ ಕನಸನ್ನು ಈಡೇರಿಸಿಕೊಳ್ಳಲು ಇನ್ನು ಒಂದೇ ಹೆಜ್ಜೆ ಹಿಂದಿದೆ. ಟೂರ್ನಮೆಂಟ್ ನಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದಿರುವ ಭಾರತ ಬ್ಯಾಟಿಂಗ್ ಹಾಗೂ ಬೌಲಿಂಗ್ ಮೂಲಕ ಎದುರಾಳಿ ತಂಡಗಳನ್ನು ಸುಲಭವಾಗಿ ಮಣಿಸಿದೆ. ರೋಹಿತ್ ಶರ್ಮಾ ಬಳಗ ರವಿವಾರ ನಡೆಯುವ ಫೈನಲ್ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯವನ್ನು ಎದುರಿಸಲಿದೆ. 1,30,000 ಪ್ರೇಕ್ಷಕರ ಸಮ್ಮುಖದಲ್ಲಿ ಮೂರನೇ ಬಾರಿ ವಿಶ್ವಕಪ್ ಗೆ ಮುತ್ತಿಡುವ ವಿಶ್ವಾಸದಲ್ಲಿದೆ. 2003ರಲ್ಲಿ ಕೊನೆಯ ಬಾರಿ ವಿಶ್ವಕಪ್ ಫೈನಲ್ ನಲ್ಲಿ ಮುಖಾಮುಖಿಯಾಗಿದ್ದ ಉಭಯ ತಂಡಗಳು 20 ವರ್ಷಗಳ ನಂತರ ಪ್ರಶಸ್ತಿಗಾಗಿ ಹೋರಾಡುತ್ತಿವೆ.

ಚೆನ್ನೈನಲ್ಲಿ ಟೂರ್ನಿಯಲ್ಲಿ ತಾನಾಡಿದ ಆರಂಭಿಕ ಪಂದ್ಯದಲ್ಲಿ ಭಾರತವು ಆಸ್ಟ್ರೇಲಿಯವನ್ನು ಮಣಿಸಿತ್ತು. ಆ ನಂತರ ಹಿಂದಿರುಗಿ ನೋಡದ ಭಾರತವ ಸತತ 10 ಪಂದ್ಯಗಳಲ್ಲಿ ಜಯ ಸಾಧಿಸಿ ಟೂರ್ನಿಯಲ್ಲಿ ಸೋಲಿಲ್ಲದ ಸರದಾರನಾಗಿದೆ. ಪ್ರತಿಷ್ಠಿತ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡವಾಗಿ ಹೊರಹೊಮ್ಮಿದೆ.

ರೋಹಿತ್ ಬಳಗ 2011ರ ನಂತರ ತವರು ಮೈದಾನದಲ್ಲಿ ಪ್ರಶಸ್ತಿ ಗೆಲ್ಲುವ ಗುರಿ ಇಟ್ಟುಕೊಂಡಿದೆ. 13 ರ್ಷಗಳ ಹಿಂದೆ ಎಂ.ಎಸ್. ಧೋನಿ ನೇತೃತ್ವದಲ್ಲಿ ಭಾರತ ತಂಡ ಫೈನಲ್ ನಲ್ಲಿ ಶ್ರೀಲಂಕಾವನ್ನು ಮಣಿಸಿತ್ತು. 28 ವರ್ಷಗಳ ನಂತರ ಭಾರತಕ್ಕೆ 2ನೇ ಪ್ರಶಸ್ತಿ ಗೆದ್ದುಕೊಟ್ಟಿತ್ತು.

ಟೀಮ್ ಇಂಡಿಯಾದ ಸಾಮರ್ಥ್ಯ

ನಾಯಕ ರೋಹಿತ್ ಶರ್ಮಾ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ತಂಡಕ್ಕೆ ಬಿರುಸಿನ ಆರಂಭ ಒದಗಿಸುತ್ತಿದ್ದಾರೆ. ಈ ತನಕ ಒಟ್ಟು 550 ರನ್ ಗಳಿಸಿದ್ದಾರೆ. ರೋಹಿತ್ ಅವರ ಚಾಣಾಕ್ಷ ನಾಯಕತ್ವ ಹಾಗೂ ಬೌಲರ್ಗಳ ರೊಟೇಶನ್ ಮಾಡುವ ವಿಧಾನದಿಂದ ಭಾರತವು ಲೀಗ್ ಹಂತದಲ್ಲಿ ಅಜೇಯವಾಗುಳಿದ ಏಕೈಕ ತಂಡವಾಗಿತ್ತು. ಇತರ ಬ್ಯಾಟರ್ಗಳು ಭಾರತದ ಪ್ರಾಬಲ್ಯಕ್ಕೆ ಕಾಣಿಕೆ ನೀಡಿದ್ದಾರೆ. ವಿರಾಟ್ ಕೊಹ್ಲಿ(711 ರನ್, ಟೂರ್ನಿಯ ಟಾಪ್ ರನ್ ಸ್ಕೋರರ್ ), ಶುಭಮನ್ ಗಿಲ್(346 ರನ್), ಶ್ರೇಯಸ್ ಅಯ್ಯರ್(526 ರನ್) ಹಾಗೂ ಕೆ.ಎಲ್.ರಾಹುಲ್(386 ರನ್)ಬ್ಯಾಟಿಂಗ್ನಲ್ಲಿ ಮಹತ್ವದ ಕೊಡುಗೆ ನೀಡುತ್ತಿದ್ದಾರೆ.

ಬೌಲಿಂಗ್ ವಿಭಾಗದಲ್ಲೂ ಭಾರತದ ಪ್ರದರ್ಶನ ಶ್ಲಾಘನಾರ್ಹವಾಗಿದೆ. ಮುಹಮ್ಮದ್ ಶಮಿ ಎದುರಾಳಿ ಬ್ಯಾಟರ್ಗಳ ಎದೆ ನಡುಗಿಸುವ ಮೂಲಕ ಟೂರ್ನಿಯಲ್ಲಿ ಗರಿಷ್ಠ ವಿಕೆಟ್(23) ಪಡೆದಿದಾರೆ. ಭಾರತದ ಬೌಲಿಂಗ್ ದಾಳಿಗೆ ಜಸ್ಟ್ರೀತ್ ಬುಮ್ರಾ(18), ರವೀಂದ್ರ ಜಡೇಜ(16), ಕುಲದೀಪ್ ಯಾದವ್(15) ಹಾಗೂ ಮುಹಮ್ಮದ್ ಸಿರಾಜ್(13)ಉತ್ತಮ ಬೆಂಬಲ ನೀಡುತ್ತಿದ್ದಾರೆ. ಭಾರತದ ಎರಡನೇ ಗರಿಷ್ಠ ಮೊತ್ತ(410/4)ಭಾರತದ ಹೆಸರಲ್ಲಿದೆ. ಪಂದ್ಯಾವಳಿಯಲ್ಲಿ ಎರಡನೇ ಗರಿಷ್ಠ ಅಂತರದ (302 ರನ್)ಗೆಲುವು ಸಾಧಿಸಿದ ಶ್ರೇಯಸ್ಸು ಭಾರತಕ್ಕೆ ಸಲ್ಲುತ್ತದೆ.

ಟೀಮ್ ಇಂಡಿಯಾದ ದೌರ್ಬಲ್ಯ

ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಭಾರತವು ಪ್ರಮುಖವಾಗಿ ಐವರು ಬೌಲರ್ಗಳನ್ನು ಆಡಿಸುತ್ತಿದೆ. ನೆದರ್ಲ್ಯಾಂಡ್ಸ್ ವಿರುದ್ಧ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ರೋಹಿತ್, ಕೊಹ್ಲಿ, ಗಿಲ್ ಹಾಗೂ ಸೂರ್ಯಕುಮಾರ ಯಾದವ್ ಬೌಲಿಂಗ್ ಅಭ್ಯಾಸ ನಡೆಸಿದ್ದರು. ಒಂದು ವೇಳೆ ಓರ್ವ ಬೌಲರ್ ರನ್ ಸೋರಿಕೆ ಮಾಡಲಾರಂಭಿಸಿದರೆ ರನ್ ಗೆ ಕಡಿವಾಣ ಹಾಕುವ ಹಲವು ಆಯ್ಕೆಗಳು ಭಾರತದ ಮುಂದಿಲ್ಲ. ಆಸ್ಟ್ರೇಲಿಯದ ಬೌಲಿಂಗ್ ಟೀಮ್ ಉನ್ನತ ಫಾರ್ಮ್ ನಲ್ಲಿದೆ. ಭಾರತದ ಬ್ಯಾಟಿಂಗ್ ಸರದಿ ಇದರಿಂದ ಚಿಂತಿತವಾಗಿದೆ. ಚೆನ್ನೈನಲ್ಲಿ ನಡೆದಿದ್ದ ಟೂರ್ನಮೆಂಟ್ನ ಆರಂಭಿಕ ಪಂದ್ಯದಲ್ಲಿ ಭಾರತವು 2 ರನ್ ಗೆ 3 ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಆಗ ಕೊಹ್ಲಿ (85 ರನ್) ಹಾಗೂ ರಾಹುಲ್(ಔಟಾಗದೆ 97 ರನ್) ತಂಡವನ್ನು ದೊಡ್ಡ ಅಪಾಯದಿಂದ ರಕ್ಷಿಸಿದ್ದರು. ಫೈನಲಿನಲ್ಲಿ ಇಂತಹ ಪರಿಸ್ಥಿತಿ ಎದುರಾಗದಂತೆ ಎಚ್ಚರಿಕೆ ವಹಿಸುವ ಅಗತ್ಯವಿದೆ.

ರೋಹಿತ್ ಬಳಗಕ್ಕೆ ಬಹುದೊಡ್ಡ ಅವಕಾಶ

ರೋಹಿತ್ ಬಳಗ ಟ್ರೋಫಿ ಗೆಲ್ಲುವ ಉತ್ತಮ ಅವಕಾಶ ಹೊಂದಿದೆ. ಹಿಂದಿನ 3 ಆವೃತ್ತಿಯ ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಆತಿಥೇಯ ದೇಶ ಚಾಂಪಿಯನ್ ಪಟ್ಟಕ್ಕೇರಿದೆ. ಸದ್ಯ ಭರ್ಜರಿ ಫಾರ್ಮ್ನಲ್ಲಿರುವ ತವರಿನ ವಾತಾವರಣವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುವ, ಅಭಿಮಾನಿಗಳ ಭಾರೀ ಬೆಂಬಲ ಹೊಂದಿರುವ ರೋಹಿತ್ ಬಳಗಕ್ಕೆ 10 ವರ್ಷಗಳ ಪ್ರಶಸ್ತಿ ಬರ ನೀಗಿಸಿಕೊಳ್ಳಲು ಅದ್ಭುತ ಅವಕಾಶ ಒದಗಿಬಂದಿದೆ. 2011ರ ವಿಶ್ವಕಪ್ ವಿಜೇತ ತಂಡದ ಸದಸ್ಯನಾಗುವುದರಿಂದ ವಂಚಿತರಾಗಿದ್ದ ರೋಹಿತ್ 2023ರ ವಿಶ್ವಕಪ್ ಪ್ರಶಸ್ತಿ ಜಯಿಸಿದರೆ ಅದ್ಭುತ ಸಾಧನೆ ಮಾಡಲಿದ್ದಾರೆ. ಕೊಹ್ಲಿ ಸಹಿತ ಇತರ ಆಟಗಾರರಿಗೆ ಇದೊಂದು ಹಲವು ವರ್ಷಗಳ ಕಾಲ ನೆನಪಿನಲ್ಲಿ ಉಳಿಯುವ ಕ್ಷಣವಾಗಲಿದೆ.

ರೋಹಿತ್ ಬಳಗದ ಪರಿಪೂರ್ಣ ಪ್ರದರ್ಶನ

ರೋಹಿತ್ ಬಳಗ ಟೂರ್ನಿಯುದ್ದಕ್ಕೂ ಪರಿಪೂರ್ಣ ಪ್ರದರ್ಶನ ನೀಡಿದೆ. ಎರಡು ಬಾರಿ ಎದುರಾಳಿ ತಂಡವನ್ನು 80 ರನ್ನೊಳಗೆ ಆಲೌಟ್ ಮಾಡಿದೆ. ಐದು ಬಾರಿ ಮೊದಲು ಬ್ಯಾಟಿಂಗ್ ಮಾಡಿದ್ದು, ಮೂರು ಬಾರಿ 350ಕ್ಕೂ ಅಧಿಕ ರನ್ ಗಳಿಸಿದೆ. ಅಗ್ರ ಸರದಿಯ ಐವರು ಬ್ಯಾಟರ್ಗಳ ಪೈಕಿ ನಾಲ್ವರು ಶತಕ ಗಳಿಸಿದ್ದಾರೆ.

ಭಾರತದ ಅಗ್ರ ಸರದಿಯ ಬ್ಯಾಟಿಂಗ್ನಲ್ಲಿ ಎಡಗೈ ಆಟಗಾರರ ಅನುಪಸ್ಥಿತಿ

ಒಂದು ವೇಳೆ ಭಾರತವು ಫೈನಲ್ ಪಂದ್ಯ ಜಯಿಸಿದರೆ ಆಡುವ 11ರ ಬಳಗದ ಅಗ್ರ-6 ಕ್ರಮಾಂಕದಲ್ಲಿ ಎಡಗೈ ಬ್ಯಾಟರ್ಗಳಿಲ್ಲದೆ ವಿಶ್ವಕಪ್ ಜಯಿಸಿ ತನ್ನದೇ ಸಾಧನೆಯನ್ನು ಸರಿಗಟ್ಟಲಿದೆ. 1983ರ ವಿಶ್ವಕಪ್ನಲ್ಲಿ ಭಾರತ ಈ ಸಾಧನೆ ಮಾಡಿತ್ತು. ಈ ಬಾರಿ ಆಸ್ಟ್ರೇಲಿಯ ತಂಡದ ಅಗ್ರ ಕ್ರಮಾಂಕದಲ್ಲಿ ಇಬ್ಬರು ಎಡಗೈ ಬ್ಯಾಟರ್ ಗಳಾದ ಡೇವಿಡ್ ವಾರ್ನರ್ ಹಾಗೂ ಟ್ರಾವಿಸ್ ಹೆಡ್ರನ್ನು ಹೊಂದಿದೆ. 2003 ಹಾಗೂ 2007ರ ವಿಶ್ವಕಪ್ನಲ್ಲಿ ಮ್ಯಾಥ್ಯೂ ಹೇಡನ್ ಹಾಗೂ ಆಡಮ್ ಗಿಲ್ ಕ್ರಿಸ್ಟ್ ಎಡಗೈ ಆರಂಭಿಕ ಬ್ಯಾಟರ್ಗಳಾಗಿದ್ದರು.

ಭಾರತದ ಗೆಲುವಿನ ಓಟಕ್ಕೆ ಕಾಂಗರೂ ಪಡೆ ಕಡಿವಾಣ ಹಾಕುವುದೇ?

ಭಾರತವು 2011ರಲ್ಲಿ ಕೋಲ್ಕತಾದಲ್ಲಿ ಆಸ್ಟ್ರೇಲಿಯದ ಸತತ 16 ಟೆಸ್ಟ್ ಪಂದ್ಯಗಳ ಗೆಲುವಿನ ಓಟಕ್ಕೆ ಕಡಿವಾಣ ಹಾಕಿತ್ತು. 2011ರ ಆವೃತ್ತಿಯ ವಿಶ್ವಕಪ್ ನಲ್ಲಿ ಕ್ವಾರ್ಟರ್ ಫೈನಲ್ ನಲ್ಲಿ ಆಸೀಸ್ ಮಣಿಸಿ ವಿಶ್ವಕಪ್ ಗೆಲುವಿನ ವೇಗಕ್ಕೆ ಕಡಿವಾಣ ತೊಡಿಸಿತ್ತು. ಇದೀಗ ಆಸ್ಟ್ರೇಲಿಯಕ್ಕೆ ಭಾರತದ ಸತತ 10 ಗೆಲುವಿನ ಓಟಕ್ಕೆ ಬ್ರೇಕ್ ಹಾಕುವ ಅವಕಾಶ ಒದಗಿಬಂದಿದೆ.

ಆತಿಥೇಯ ದೇಶಗಳೇ ಫೇವರಿಟ್

1996ರ ತನಕ ಆತಿಥೇಯ ದೇಶ ವಿಶ್ವಕಪ್ ಜಯಿಸಿರಲಿಲ್ಲ. 1996ರಲ್ಲಿ ಸಹ ಆತಿಥ್ಯ ರಾಷ್ಟ್ರವಾಗಿ ವಿಶ್ವಕಪ್ ಜಯಿಸಿತ್ತು. ಒಂದು ವೇಳೆ ರವಿವಾರ ಭಾರತ ವಿಶ್ವಕಪ್ಜಯಿಸಿದರೆ ಆತಿಥೇಯ ದೇಶ ಸತತ 4ನೇ ಬಾರಿ ಪ್ರಶಸ್ತಿ ಜಯಿಸಿ ಅಮೋಘ ಸಾಧನೆ ಮಾಡಿದಂತಾಗುತ್ತದೆ. 2011ರಲ್ಲಿ ಭಾರತ, 2015ರಲ್ಲಿ ಆಸ್ಟ್ರೇಲಿಯ ಹಾಗೂ 2019ರಲ್ಲಿ ಇಂಗ್ಲೆಂಡ್ ವಿಶ್ವಕಪ್ ಮುಡಿಗೇರಿಸಿಕೊಂಡಿದ್ದವು.

ಟೀಮ್ ಇಂಡಿಯಾಕ್ಕೆ ಭೀತಿ

ಚೆನ್ನೈನಲ್ಲಿ ಪಂದ್ಯಾವಳಿಯ ಆರಂಭದಲ್ಲಿ ಆಸ್ಟ್ರೇಲಿಯ ತಂಡವನ್ನು ಮಣಿಸಿದ್ದ ಭಾರತಕ್ಕೆ ಫೈನಲ್ನಲ್ಲಿ ಕಠಿಣ ಸವಾಲಿದೆ. ಆಸ್ಟ್ರೇಲಿಯ ಇದೀಗ ನಿರಾಳವಾಗಿದ್ದು ಸತತ 8ನೇ ಗೆಲುವಿನ ಮೂಲಕ ಫೈನಲ್ ಪಂದ್ಯಕ್ಕೆ ಸಜ್ಜಾಗಿದೆ. ನಾಕೌಟ್ ಹಂತದಲ್ಲಿ ಕಾಂಗರೂ ಪಡೆ ಯಾವಾಗಲೂ ವಿಭಿನ್ನವಾಗಿ ಆಡುತ್ತದೆ. ಸೆಮಿ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ಇದಕ್ಕೆ ಸಾಕ್ಷಿಯಾಗಿದೆ. ಗ್ರೂಪ್ ಹಂತದಲ್ಲಿ ಹರಿಣ ಪಡೆಗೆ ಹೀನಾಯವಾಗಿ ಸೋತಿದ್ದ ಕಮಿನ್ಸ್ ಪಡೆ ಅಂತಿಮ-4ರ ಸುತ್ತಿನಲ್ಲಿ 3 ವಿಕೆಟ್ನಿಂದ ರೋಚಕ ಜಯ ಸಾಧಿಸಿತ್ತು. ಸ್ಪಿನ್ನರ್ ಆಡಮ್ ಝಾಂಪ ಒಟ್ಟು 22 ವಿಕೆಟ್ಗಳನ್ನು ಕಬಳಿಸಿದ್ದಾರೆ. ಡೇವಿಡ್ ವಾರ್ನರ್(528 ರನ್), ಮಿಚೆಲ್ ಮಾರ್ಷ್(426 ರನ್) ಹಾಗೂ ಗ್ಲೆನ್ ಮ್ಯಾಕ್ಸ್ವೆಲ್(398 ರನ್)ಉತ್ತಮ ಫಾರ್ಮ್ನಲ್ಲಿದ್ದಾರೆ. ಮಿಚೆಲ್ ಸ್ಟಾರ್ಕ್ ನೇತೃತ್ವದ ವೇಗದ ಬೌಲಿಂಗ್ ದಾಳಿಯು ಅ.8ರಂದು ಭಾರತಕ್ಕೆ ಭೀತಿ ಹುಟ್ಟಿಸಿದ್ದನ್ನು ಮರೆಯುವಂತಿಲ್ಲ.


ಎರಡು ಸೋಲಿನಿಂದ ಮೇಲೆದ್ದ ಆಸೀಸ್

ಆಸ್ಟ್ರೇಲಿಯವು ಟೂರ್ನಿಯಲ್ಲಿ ಆಡಿದ್ದ ಮೊದಲ ಎರಡು ಪಂದ್ಯಗಳಲ್ಲಿ ಸೋತಿತ್ತು. ಆ ನಂತರ ಸತತ 7 ಪಂದ್ಯಗಳಲ್ಲಿ ಜಯಭೇರಿ ಬಾರಿಸಿ ಸೆಮಿ ಫೈನಲ್ ತಲುಪಿತ್ತು. ಸೆಮಿ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾದ ಸ್ಪಿನ್ನರ್ಗಳ ಪರೀಕ್ಷೆ ಎದುರಿಸಿದ್ದ ಆಸ್ಟ್ರೇಲಿಯವು 3 ವಿಕೆಟ್ಗಳ ಜಯ ಸಾಧಿಸಿ ಭಾರತ ವಿರುದ್ಧ ಫೈನಲ್ ಪಂದ್ಯಕ್ಕೆ ಸಜ್ಜಾಗಿದೆ.

ಆಸ್ಟ್ರೇಲಿಯದ ಫೈನಲ್ ಪಂದ್ಯಗಳನ್ನು ನಿಭಾಯಿಸಿರುವ ಅನುಭವ ಹಾಗೂ ಹಿನ್ನಡೆಯಿಂದ ಪುಟಿದೇಳುವ ಸಾಮರ್ಥ್ಯವನ್ನು ಪರಿಗಣಿಸಿದರೆ ಟೂರ್ನಮೆಂಟ್ನ ಅತ್ಯಂತ ಪ್ರಮುಖ ಪಂದ್ಯದಲ್ಲಿ ಭಾರತಕ್ಕೆ ಕಠಿಣ ಸವಾಲು ಇದೆ.

ಏಕದಿನ ಟೂರ್ನಿಯ ಫೈನಲ್ನಲ್ಲಿ ಆಸ್ಟ್ರೇಲಿಯ ಮೇಲುಗೈ

ಪ್ರಶಸ್ತಿ ಸುತ್ತಿನ ಪಂದ್ಯಗಳಲ್ಲಿ ಆಸ್ಟ್ರೇಲಿಯ ತಂಡ ಭಾರತ ವಿರುದ್ಧ ಮೇಲುಗೈ ಹೊಂದಿದೆ. ಉಭಯ ತಂಡಗಳು 1985ರಿಂದ 9 ಏಕದಿನ ಟೂರ್ನಮೆಂಟ್ ಫೈನಲ್ಳಲ್ಲಿ ಮುಖಾಮುಖಿಯಾಗಿವೆ. ಆಸ್ಟ್ರೇಲಿಯವು 6 ಬಾರಿ ಜಯಭೇರಿ ಬಾರಿಸಿದೆ.

2008ರಿಂದ ಎರಡೂ ತಂಡಗಳು ಏಕದಿನ ಟೂರ್ನಿಯ ಫೈನಲ್ಲ್ಲಿ ಸೆಣಸಾಡಿಲ್ಲ. ಆದರೆ ಎಲ್ಲ ಐಸಿಸಿ ಟೂರ್ನಮೆಂಟ್ಗಳನ್ನು ಗಣನೆಗೆ ತೆಗೆದುಕೊಂಡರೆ ಆಸ್ಟ್ರೇಲಿಯ ಮತ್ತೊಮ್ಮೆ ಶ್ರೇಷ್ಠ ತಂಡವೆನ್ನುವುದು ಸಾಬೀತಾಗುತ್ತದೆ. ಭಾರತ-ಆಸ್ಟ್ರೇಲಿಯ ನಡುವೆ ಈ ವರ್ಷಾರಂಭದಲ್ಲಿ ನಡೆದಿದ್ದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಲ್ಲಿ ಆಸ್ಟ್ರೇಲಿಯ ಜಯ ಸಾಧಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News