ಕಪಿಲ್ ದೇವ್ ದಾಖಲೆ ಮುರಿದ ಜಸ್‌ಪ್ರಿತ್ ಬುಮ್ರಾ

Update: 2024-12-15 16:14 GMT

ಜಸ್‌ಪ್ರಿತ್ ಬುಮ್ರಾ | PC : X/@mufaddal_vohra

ಬ್ರಿಸ್ಬೇನ್: ಜಸ್‌ಪ್ರಿತ್ ಬುಮ್ರಾ ಈ ವರ್ಷ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತನ್ನ ಶ್ರೇಷ್ಠ ಪ್ರದರ್ಶನವನ್ನು ಮುಂದುವರಿಸಿದ್ದು,ಎರಡು ಪ್ರಮುಖ ಬೌಲಿಂಗ್ ಮೈಲಿಗಲ್ಲುಗಳ ಮೂಲಕ ಲೆಜೆಂಡರಿ ಆಲ್‌ರೌಂಡರ್ ಕಪಿಲ್ ದೇವ್ ಅವರ ದಾಖಲೆಯನ್ನು ಮುರಿದು ವಿದೇಶಿ ನೆಲದಲ್ಲಿ ಭಾರತದ ಶ್ರೇಷ್ಠ ವೇಗದ ಬೌಲರ್ ಎಂಬ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿಕೊಂಡರು.

ಆಸ್ಟ್ರೇಲಿಯ ವಿರುದ್ಧದ 3ನೇ ಟೆಸ್ಟ್‌ನ ಎರಡನೇ ದಿನವಾದ ರವಿವಾರ ಸ್ಟೀವ್ ಸ್ಮಿತ್ ಹಾಗೂ ಟ್ರಾವಿಸ್ ಹೆಡ್ ನಿರ್ಣಾಯಕ ದ್ವಿಶತಕ ಜೊತೆಯಾಟ ನಡೆಸಿ ತಂಡವನ್ನು ಕಾಡಿದಾಗ ಆತಿಥೇಯರ ಬ್ಯಾಟಿಂಗ್ ಸರದಿಯನ್ನು ಬೇಧಿಸಿದ ಬುಮ್ರಾ ಬೌಲಿಂಗ್‌ನಲ್ಲಿ ಭಾರತದ ಏಕೈಕ ಶಕ್ತಿಯಾಗಿ ಕಂಡುಬಂದರು.

ಬುಮ್ರಾ ಅವರು ಶತಕವೀರರಾದ ಸ್ಮಿತ್ ಹಾಗೂ ಹೆಡ್ ವಿಕೆಟ್‌ಗಳ ಸಹಿತ 25 ಓವರ್‌ಗಳಲ್ಲಿ 2.90ರ ಇಕಾನಮಿ ರೇಟ್‌ನಲ್ಲಿ 72 ರನ್‌ಗೆ ಐದು ವಿಕೆಟ್‌ಗಳನ್ನು ಕೆಡವಿದರು.

ಬುಮ್ರಾ ಅವರು ಉಸ್ಮಾನ್ ಖ್ವಾಜಾ, ನಾಥನ್ ಮೆಕ್‌ಸ್ವೀನಿ ಹಾಗೂ ಮಿಚೆಲ್ ಮಾರ್ಷ್ ವಿಕೆಟ್‌ಗಳನ್ನು ಕೆಡವಿದರು.

ಏಶ್ಯದ ಹೊರಗೆ 10ನೇ ಬಾರಿ ಐದು ವಿಕೆಟ್ ಗೊಂಚಲು ಕಬಳಿಸಿದ ಬುಮ್ರಾ ಅವರು ಕಪಿಲ್‌ದೇವ್ ಅವರ ದಾಖಲೆ(9)ಯನ್ನು ಮುರಿದರು. ಈ ಮೂಲಕ ಏಶ್ಯದ ಹೊರಗೆ ಈ ಸಾಧನೆ ಮಾಡಿದ ಮೊದಲ ಭಾರತೀಯ ಬೌಲರ್ ಎನಿಸಿಕೊಂಡರು.

ಬುಮ್ರಾ ಅವರು ಇದೀಗ ಆಸ್ಟ್ರೇಲಿಯ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ತಲಾ 3 ಬಾರಿ ಐದು ವಿಕೆಟ್ ಗೊಂಚಲನ್ನು ಪಡೆದರೆ, ವೆಸ್ಟ್‌ಇಂಡೀಸ್ ಹಾಗೂ ಇಂಗ್ಲೆಂಡ್ ವಿರುದ್ಧ ತಲಾ 2 ಬಾರಿ ಈ ಸಾಧನೆ ಮಾಡಿದ್ದಾರೆ. ಕಪಿಲ್ ದೇವ್ ಅವರು ಆಸ್ಟ್ರೇಲಿಯದಲ್ಲಿ 5 ಬಾರಿ, ಇಂಗ್ಲೆಂಡ್ ಹಾಗೂ ವೆಸ್ಟ್‌ಇಂಡೀಸ್ ವಿರುದ್ಧ ತಲಾ 2 ಬಾರಿ ಐದು ವಿಕೆಟ್ ಗೊಂಚಲು ಪಡೆದಿದ್ದಾರೆ.

ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಝಿಲ್ಯಾಂಡ್ ಹಾಗೂ ಆಸ್ಟ್ರೇಲಿಯದ ವಾತಾವರಣಗಳಲ್ಲಿ ಬುಮ್ರಾ ಅವರು ಕಪಿಲ್‌ದೇವ್ ಅವರ ದಾಖಲೆಯನ್ನು ಮುರಿದರು. ಈ ನಾಲ್ಕು ಪ್ರದೇಶಗಳಲ್ಲಿ 8 ಬಾರಿ ಐದು ವಿಕೆಟ್‌ಗಳ ಗೊಂಚಲು ಪಡೆದಿದ್ದಾರೆ. ಕಪಿಲ್ ದೇವ್ 7 ಬಾರಿ ಈ ಸಾಧನೆ ಮಾಡಿದ್ದರು.

ಬುಮ್ರಾ ಈ ಹೊಸ ಸಾಧನೆಯ ಮೂಲಕ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಮೂರನೇ ಗರಿಷ್ಠ ಐದು ವಿಕೆಟ್ ಗೊಂಚಲು ಕಬಳಿಸಿ ಆಸ್ಟ್ರೇಲಿಯದ ಪ್ಯಾಟ್ ಕಮಿನ್ಸ್ ದಾಖಲೆ ಸರಿಗಟ್ಟಿದರು. ಈ ಇಬ್ಬರು ತಲಾ 9 ಬಾರಿ ಈ ಸಾಧನೆ ಮಾಡಿದ್ದಾರೆ. ನಾಥನ್ ಲಿಯೊನ್(10)ಹಾಗೂ ಆರ್.ಅಶ್ವಿನ್(11) ಈ ಇಬ್ಬರಿಗಿಂತ ಮುಂದಿದ್ದಾರೆ.

2024ರ ಕ್ಯಾಲೆಂಡರ್ ವರ್ಷ ಬುಮ್ರಾ ಪಾಲಿಗೆ ಅಸಾಧಾರಣವಾಗಿದೆ. ಕೇವಲ 20 ಪಂದ್ಯಗಳಲ್ಲಿ 13.78ರ ಸರಾಸರಿಯಲ್ಲಿ 73 ವಿಕೆಟ್‌ಗಳನ್ನು ಪಡೆದು ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಸರದಾರನಾಗಿದ್ದಾರೆ. ಇದರಲ್ಲಿ 12 ಟೆಸ್ಟ್ ಪಂದ್ಯಗಳಲ್ಲಿ 58 ವಿಕೆಟ್‌ಗಳು ಸೇರಿದೆ.

ಈ ವರ್ಷ ಬುಮ್ರಾ ಕಬಳಿಸಿರುವ ಎಲ್ಲ 4 ಐದು ವಿಕೆಟ್ ಗೊಂಚಲುಗಳು ಟೆಸ್ಟ್ ಕ್ರಿಕೆಟ್‌ನಲ್ಲಿ ಬಂದಿದ್ದು, ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಪ್ರಾಬಲ್ಯವನ್ನು ತೋರಿಸುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News