ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನು ಜಯ್ ಶಾ ನಡೆಸುತ್ತಿದ್ದಾರೆ: ಮಾಜಿ ಕ್ರಿಕೆಟಿಗ ಅರ್ಜುನ್ ರಣತುಂಗ ಆರೋಪ
ಕೊಲಂಬೊ: ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ನಡೆಸುತ್ತಿದ್ದಾರೆ ಎಂದು ದೇಶದ 1996ರ ವಿಶ್ವಕಪ್ ವಿಜೇತ ತಂಡದ ನಾಯಕ ಅರ್ಜುನ್ ರಣತುಂಗ ಆರೋಪ ಮಾಡಿದ್ದಾರೆ.
ಲಂಕಾ ಕ್ರಿಕೆಟ್ ಆಡಳಿತ ಮಂಡಳಿಯಲ್ಲಿನ ಭ್ರಷ್ಟಾಚಾರ, ಅವ್ಯವಸ್ಥೆ ಹಾಗೂ ಇತ್ತೀಚಿನ ಬೆಳವಣಿಗೆಗಳಿಗೆ ಜಯ್ ಶಾ ನೇರ ಕಾರಣ ಎಂದು ಅವರು ಹೇಳಿದ್ದಾರೆ.
ಶ್ರೀಲಂಕಾ ಕ್ರಿಕೆಟ್ ಅಧಿಕಾರಿಗಳು ಬಿಸಿಸಿಐಗೆ ವಿಧೇಯರಾಗಿರುವಂಥ ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ ಎಂದು ಅರ್ಜುನ ರಣತುಂಗ ಹೇಳಿದ್ದಾರೆ.
"ಮಂಡಳಿಯ ಅಧಿಕಾರಿಗಳು ಮತ್ತು ಜಯ್ ಶಾ ನಡುವಿನ ಸಂಪರ್ಕದಿಂದಾಗಿ, ತಾನು ಲಂಕಾ ಮಂಡಳಿಯನ್ನು ನಿಯಂತ್ರಿಸಬಹುದು ಎಂಬುದಾಗಿ ಅವರು ಭಾವಿಸಿದ್ದಾರೆ" ಎಂದು ಅರ್ಜುನ ರಣತುಂಗ ಹೇಳಿದ್ದಾಗಿ ಶ್ರೀಲಂಕಾದ ದಿನಪತ್ರಿಕೆ ‘Daily Mirror’ ವರದಿ ಮಾಡಿದೆ.
“ಶ್ರೀಲಂಕಾ ಕ್ರಿಕೆಟನ್ನು ಜಯ್ ಶಾ ನಡೆಸುತ್ತಿದ್ದಾರೆ. ಜಯ್ ಶಾ ಅವರ ಒತ್ತಡದಿಂದಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ಹಾಳಾಗುತ್ತಿದೆ. ಭಾರತದ ಒಬ್ಬ ವ್ಯಕ್ತಿ ಶ್ರೀಲಂಕಾ ಕ್ರಿಕೆಟನ್ನು ಹಾಳುಮಾಡುತ್ತಿದ್ದಾರೆ” ಎಂದು ರಣತುಂಗ ಆರೋಪಿಸಿದ್ದಾರೆ.
“ಅವರ ತಂದೆ ಭಾರತದ ಗೃಹ ಸಚಿವ. ಆ ಕಾರಣಕ್ಕಾಗಿ ಮಾತ್ರ ಅವರು ಪ್ರಭಾವಶಾಲಿಯಾಗಿದ್ದಾರೆ’’ ಎಂದು ರಣತುಂಗ ಹೇಳಿದ್ದಾರೆ.
ಲಂಕಾ ಕ್ರಿಕೆಟ್ ಮಂಡಳಿಯ ಆಡಳಿತದಲ್ಲಿನ ಅವ್ಯವಸ್ಥೆ ಹಾಗೂ ಸರ್ಕಾರದ ತೀವ್ರ ಹಸ್ತಕ್ಷೇಪದ ಹಿನ್ನೆಲೆಯಲ್ಲಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನು ಇತ್ತೀಚಿಗೆ ಐಸಿಸಿ ಅಮಾನತುಗೊಳಿಸಿತ್ತು. ಇದಕ್ಕೂ ಮುನ್ನಾ ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ತಂಡದ ಕಳಪೆ ಪ್ರದರ್ಶನದ ಬಳಿಕ ಅಲ್ಲಿನ ಸರ್ಕಾರ ಕ್ರಿಕೆಟ್ ಮಂಡಳಿಯನ್ನು ವಜಾ ಮಾಡಿತ್ತು. ಬಳಿಕ ಕ್ರಿಕೆಟ್ ಮಂಡಳಿಯನ್ನು ನಡೆಸಲು ಅರ್ಜುನ್ ರಣತುಂಗ ನೇತೃತ್ವದಲ್ಲಿ ತಾತ್ಕಾಲಿಕ ಮಂಡಳಿಯೊಂದನ್ನು ಸರಕಾರ ನೇಮಿಸಿತ್ತು. ಈ ಏಳು ಸದಸ್ಯರ ಸಮಿತಿಯಲ್ಲಿ ಸುಪ್ರೀಂಕೋರ್ಟ್‍ನ ಇಬ್ಬರು ನಿವೃತ್ತ ನ್ಯಾಯಾಧೀಶರೂ ಇದ್ದಾರೆ.