3ನೇ ಅವಧಿಗೆ ಏಶ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರಾಗಿ ಜಯ್ ಶಾ ಪುನರಾಯ್ಕೆ
ಮುಂಬೈ: ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಬುಧವಾರ ನಡೆದ ವಾರ್ಷಿಕ ಮಹಾ ಸಭೆಯಲ್ಲಿ ಏಶ್ಯನ್ ಕ್ರಿಕೆಟ್ ಕೌನ್ಸಿಲ್(ಎಸಿಸಿ)ಅಧ್ಯಕ್ಷರಾಗಿ ಮೂರನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಶಾ ಅವರ ಅಧಿಕಾರದ ಅವಧಿಯ ವಿಸ್ತರಣೆಯನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ(ಎಸ್ಎಲ್ಸಿ) ಅಧ್ಯಕ್ಷ ಶಮ್ಮಿ ಸಿಲ್ವ ಅವರು 2ನೇ ಬಾರಿ ಪ್ರಸ್ತಾಪಿಸಿದ್ದಾರೆ. ಎಸಿಸಿಯ ಎಲ್ಲ ಸದಸ್ಯರು ನಾಮನಿರ್ದೇಶನವನ್ನು ಸರ್ವಾನುಮತದಿಂದ ಬೆಂಬಲಿಸಿದ್ದಾರೆ.
ಶಾ 2021ರ ಜನವರಿಯಲ್ಲಿ ಬಾಂಗ್ಲಾದೇಶದ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾದ ನಝ್ಮುಲ್ ಹಸನ್ ಅವರಿಂದ ಎಸಿಸಿ ಚುಕ್ಕಾಣಿ ಹಿಡಿದಿದ್ದರು. ಎಸಿಸಿ ಅಧ್ಯಕ್ಷರಾಗಿ ಮರು ನೇಮಕಗೊಂಡ ಅತ್ಯಂತ ಕಿರಿಯ ವಯಸ್ಸಿನ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಶಾ ಪಾತ್ರರಾಗಿದ್ದಾರೆ.
ಶಾ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಏಶ್ಯದ ಪ್ರದೇಶದಾದ್ಯಂತ ಕ್ರಿಕೆಟ್ ಅನ್ನು ಉತ್ತೇಜಿಸುವಲ್ಲಿ ಹಾಗೂ ಅಭಿವೃದ್ದಿಪಡಿಸುವಲ್ಲಿ ಎಸಿಸಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ.
ಏಶ್ಯನ್ ಕ್ರಿಕೆಟ್ ಕೌನ್ಸಿಲ್(ಎಸಿಸಿ) 2022ರಲ್ಲಿ ಟಿ-20 ಮಾದರಿಯಲ್ಲಿ ಹಾಗೂ 2023ರಲ್ಲಿ ಏಕದಿನ ಸ್ವರೂಪದಲ್ಲಿ ಏಶ್ಯಕಪ್ ಟೂರ್ನಿಯನ್ನು ಯಶಸ್ವಿಯಾಗಿ ಆಯೋಜಿಸಿತ್ತು. ಇದು ಪ್ರಮುಖ ಕ್ರಿಕೆಟ್ ಸ್ಫರ್ಧೆಗಳನ್ನು ಆಯೋಜಿಸುವಲ್ಲಿ ಏಶ್ಯದ ಸಾಮರ್ಥ್ಯವನ್ನು ತೋರಿಸುತ್ತದೆ.