ವಿಶ್ವಕಪ್‌ಗೆ ಲಂಕಾ ತಂಡ ಘೋಷಣೆ
ಕೊಲಂಬೊ: ಭಾರತದಲ್ಲಿ ನಡೆಯಲಿರುವ ಮುಂಬರುವ ಏಕದಿನ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಮಂಗಳವಾರ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಆದರೆ ಗಾಯದಿಂದ ಬಳಲುತ್ತಿರುವ ತಂಡದ ಪ್ರಮುಖ ಆಟಗಾರರಾದ ವನಿಂಡು ಹಸರಂಗ ಮತ್ತು ದುಶ್ಮಂತ ಚಮೀರರನ್ನು ತಂಡದಿಂದ ಕೈಬಿಡಲಾಗಿದೆ.
ದಸುನ್ ಶನಕ ತಂಡದ ನೇತೃತ್ವವನ್ನು ವಹಿಸಲಿದ್ದಾರೆ ಎಂದು ಮಂಡಳಿಯು ಘೋಷಿಸಿದೆ. ಅದೇ ವೇಳೆ, ವೇಗದ ಬೌಲರ್ ಚಮೀರ ಮತ್ತು ಆಲ್‌ರೌಂಡರ್ ಹಸರಂಗ ಗಾಯಗಳಿಂದ ಇನ್ನೂ ಚೇತರಿಸಿಕೊಂಡಿಲ್ಲ ಎಂದು ತಿಳಿಸಿದೆ.
ಕುಸಾಲ್ ಮೆಂಡಿಸ್ ತಂಡದ ಉಪನಾಯಕರಾಗಿರುತ್ತಾರೆ. ಚಮೀರ ಕಳೆದ ತಿಂಗಳು ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಎದೆಯ ಸ್ನಾಯು ಗಾಯಕ್ಕೆ ಒಳಗಾಗಿದ್ದರು ಹಾಗೂ ಹಸರಂಗ ಮಂಡಿರಜ್ಜು ಗಾಯಕ್ಕೆ ಒಳಗಾಗಿದ್ದರು. ಗಾಯದಿಂದಾಗಿ ಹಸರಂಗ ಏಶ್ಯ ಕಪ್‌ನಿಂದ ಹೊರಗಿದ್ದರು. ಏಶ್ಯ ಕಪ್ ಫೈನಲ್‌ನಲ್ಲಿ ಭಾರತವು ಶ್ರೀಲಂಕಾವನ್ನು ಸೋಲಿಸಿ ಪ್ರಶಸ್ತಿ ಗೆದ್ದಿದೆ.
‘‘ವನಿಂಡು ಹಸರಂಗರನ್ನು 15 ಸದಸ್ಯರ ತಂಡಕ್ಕೆ ಸೇರಿಸಿಕೊಳ್ಳಲಾಗಿಲ್ಲ. ಅವರು ಗಾಯವೊಂದರಿಂದ ಇನ್ನೂ ಚೇತರಿಸಿಕೊಂಡಿಲ್ಲ’’ ಎಂದು ಹೇಳಿಕೆಯೊಂದರಲ್ಲಿ ಶ್ರೀಲಂಕಾ ಕ್ರಿಕೆಟ್ ಹೇಳಿದೆ.
‘‘ಅವರ ಚೇತರಿಕೆಯ ಮೇಲೆ ಗಮನವಿಡಲಾಗುತ್ತಿದೆ. ಅವರು ಆಡಲು ಅರ್ಹರಾದರೆ, ಪಂದ್ಯಾವಳಿಯ ವೇಳೆ ತಂಡದ ಯಾರಾದರೂ ಆಟಗಾರರು ಗಾಯಗೊಂಡರೆ ಅವರ ಸ್ಥಾನದಲ್ಲಿ ಬದಲಿ ಆಟಗಾರನಾಗಿ ತರಲಾಗುವುದು’’ ಎಂದು ಅದು ತಿಳಿಸಿದೆ.
1996ರ ವಿಶ್ವಕಪ್ ವಿಜೇತ ತಂಡಕ್ಕೆ ಹಸರಂಗರ ಅನುಪಸ್ಥಿತಿಯು ದೊಡ್ಡ ಹೊಡೆತವಾಗಿದೆ. 26 ವರ್ಷದ ಹಸರಂಗ ಕಳೆದ ಎರಡು ಟಿ20 ವಿಶ್ವಕಪ್‌ಗಳಲ್ಲಿ ತಂಡದ ಗರಿಷ್ಠ ವಿಕೆಟ್ ಗಳಿಕೆದಾರರಾಗಿದ್ದರು.
ತಂಡ: ದಸುನ್ ಶನಕ (ನಾಯಕ), ಕುಸಾಲ್ ಮೆಂಡಿಸ್, ಕುಸಾಲ್ ಪೆರೇರ, ಪತುಮ್ ನಿಸ್ಸಂಕ, ದಿಮುತ್ ಕರುಣಾರತ್ನೆ, ಸದೀರ ಸಮರವಿಕ್ರಮ, ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ದುಶನ್ ಹೇಮಂತ, ಮಹೀಶ್ ತೀಕ್ಷಣ, ದುನಿತ್ ವೆಲ್ಲಾಲಗೆ, ಕಸುನ್ ರಜಿತ, ಮತೀಶ ಪತಿರಣ, ಲಹಿರು ಕುಮಾರ, ದಿಲ್ಶನ್ ಮದುಶಂಕ.