ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲದಿರುವುದಕ್ಕೆ ಕ್ಷಮೆ ಕೋರಿದ ನೀರಜ್ ಚೋಪ್ರಾ

Update: 2024-08-11 15:29 GMT

ನೀರಜ್ ಚೋಪ್ರಾ | PC : PTI 

ಹೊಸದಿಲ್ಲಿ : ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಮೊತ್ತ ಮೊದಲ ಬಾರಿ ಚಿನ್ನದ ಪದಕ ಗೆದ್ದುಕೊಟ್ಟಿರುವ ನೀರಜ್ ಚೋಪ್ರಾ ದೇಶ ಕಂಡ ಓರ್ವ ಶ್ರೇಷ್ಠ ಕ್ರೀಡಾಪಟುವಾಗಿದ್ದಾರೆ. ಆದರೆ ಚೋಪ್ರಾ ಅವರು ಎಂದಿನಂತೆ ವಿನಮ್ರ ಹಾಗೂ ಸರಳ ವ್ಯಕ್ತಿಯಾಗಿ ಉಳಿದಿದ್ದಾರೆ.

ಪ್ಯಾರಿಸ್‌ ನಲ್ಲಿ ಜಾವೆಲಿನ್ ಎಸೆತದ ಫೈನಲ್‌ನಲ್ಲಿ 2ನೇ ಸ್ಥಾನ ಪಡೆದು ಟೋಕಿಯೊ ಗೇಮ್ಸ್‌ ನಲ್ಲಿ ಗೆದ್ದಿರುವ ಚಿನ್ನದ ಪದಕವನ್ನು ಉಳಿಸಿಕೊಳ್ಳಲು ವಿಫಲವಾಗಿದ್ದರೂ ತನ್ನ ಸಾಂಪ್ರದಾಯಿಕ ಎದುರಾಳಿ ಹಾಗೂ ಗಡಿಯಾಚೆಗಿನ ಸ್ನೇಹಿತ ಪಾಕಿಸ್ತಾನದ ಅರ್ಷದ್ ನದೀಮ್‌ ರನ್ನು ಅಭಿನಂದಿಸಲು ಮರೆಯಲಿಲ್ಲ.

ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಚೋಪ್ರಾ, ಪ್ಯಾರಿಸ್‌ನಲ್ಲಿ ತನ್ನ ಪ್ರದರ್ಶನದ ಕುರಿತಂತೆ ಕ್ಷಮೆ ಕೋರಿರುವ ವೀಡಿಯೊ ಇದೀಗ ಅಂತರ್ಜಾಲದಲ್ಲಿ ವೈರಲ್ ಆಗಿದೆ.

ಹೆಚ್ಚು ಹೇಳಲು ಏನೂ ಇಲ್ಲ, ಆದರೆ ನಾನು ನಿಮಗೆಲ್ಲರಿಗೂ ತೋರಿಸಲು ಬೆಳ್ಳಿ ಪದಕ ತಂದಿರುವೆ. ಕಳೆದ ಬಾರಿಯಂತೆ ಈ ಬಾರಿ ಪದಕ ಗೆದ್ದಾಗ ರಾಷ್ಟ್ರಗೀತೆಯನ್ನು ನುಡಿಸಲಿಲ್ಲ, ನಾನು ಅಂದುಕೊಂಡಂತೆ ಆಗಲಿಲ್ಲ. ಆದರೆ ಚಿನ್ನವಾಗಲಿ, ಬೆಳ್ಳಿಯಾಗಲಿ ಪದಕ ಅಂದರೆ ಪದಕವೇ. ದೇಶಕ್ಕಾಗಿ ಪದಕ ಗೆಲ್ಲಲು ಕಷ್ಟಪಟ್ಟು ಕೆಲಸ ಮಾಡಿದ್ದೇನೆ. ದೇಶಕ್ಕಾಗಿ ಪದಕ ಗೆಲ್ಲುವುದು ಹಾಗೂ ರಾಷ್ಟ್ರಧ್ವಜದೊಂದಿಗೆ ಟ್ರ್ಯಾಕ್‌ ನಲ್ಲಿ ಹೆಜ್ಜೆ ಇಡುವುದು ವಿಭಿನ್ನ ಅನುಭವವಾಗಿದೆ ಎಂದು ಚೋಪ್ರಾ ಹೇಳಿದ್ದಾರೆ.

ನೀರಜ್ ಅವರು ಈ ಋತುವಿನಲ್ಲಿ ಶ್ರೇಷ್ಠ ಪ್ರದರ್ಶನ(89.45 ಮೀ.)ನೀಡಿ ಪ್ಯಾರಿಸ್ ಗೇಮ್ಸ್‌ನಲಿ ಭಾರತಕ್ಕೆ ಏಕೈಕ ಬೆಳ್ಳಿ ಪದಕ ಗೆದ್ದುಕೊಟ್ಟಿದ್ದರು. ಜಾವೆಲಿನ್ ಫೈನಲ್‌ನಲ್ಲಿ ಪ್ರಾಬಲ್ಯ ಮೆರೆದಿದ್ದ ಪಾಕಿಸ್ತಾನದ ಅರ್ಷದ್ ನದೀಮ್ 92.97 ಮೀ. ದೂರಕ್ಕೆ ಜಾವೆಲಿನ್ ಎಸೆದು ಒಲಿಂಪಿಕ್ಸ್ ದಾಖಲೆಯೊಂದಿಗೆ ಚಿನ್ನ ಗೆದ್ದಿದ್ದರು. 1992ರ ನಂತರ ಒಲಿಂಪಿಕ್ಸ್‌ನಲ್ಲಿ ಪಾಕಿಸ್ತಾನಕ್ಕೆ ಮೊದಲ ಪದಕ ಗೆದ್ದುಕೊಟ್ಟಿದ್ದರು.

►ಭಾರತದ ಪ್ರದರ್ಶನಕ್ಕೆ ಅಭಿನವ್ ಬಿಂದ್ರಾ ಶ್ಲಾಘನೆ

ಭಾರತೀಯ ಅಥ್ಲೆಟಿಕ್ಸ್ ತಂಡ ಪ್ಯಾರಿಸ್‌ನಲ್ಲಿ ಶ್ಲಾಘನೀಯ ಪ್ರದರ್ಶನ ನೀಡಿರುವುದಕ್ಕೆ ಭಾರತದ ಮೊದಲ ವೈಯಕ್ತಿಕ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ ಶ್ಲಾಘಿಸಿದರು.

ಇದು ಉತ್ಸಾಹಭರಿತ ಪ್ರದರ್ಶನ ಎಂದು ನಾನು ಭಾವಿಸುತ್ತೇನೆ. ನಮ್ಮ ಎಲ್ಲ ಕ್ರೀಡಾಪಟುಗಳು ಉನ್ನತ ಮಟ್ಟದಲ್ಲಿ ಪ್ರದರ್ಶನ ನೀಡಿದ್ದಾರೆ. ನಮ್ಮ ಪಟ್ಟಿಯಲ್ಲಿ ನಾವು 6 ಪದಕ ಗೆದ್ದಿರಬಹುದು. ಆದರೆ ನಮ್ಮ ಕ್ರೀಡಾಪಟುಗಳು ಎಲ್ಲ ವಿಭಾಗಗಳಲ್ಲಿ ತುಂಬಾ ಸ್ಪರ್ಧೆಯೊಡಿದ್ದರು. ಹೆಚ್ಚಿನ ಸ್ಪರ್ಧೆಗಳಲ್ಲಿ ನಿಕಟ ಪೈಪೋಟಿ ನೀಡಿದ್ದರು ಎಂದು ಬಿಂದ್ರಾ ಹೇಳಿದ್ದಾರೆ.

ಪ್ಯಾರಿಸ್‌ನಲ್ಲಿ ಭಾರತವು ಕೆಲವು ಸ್ಪರ್ಧೆಗಳಲ್ಲಿ ಕೂದಲೆಳೆ ಅಂತರದಿಂದ ಪದಕದಿಂದ ವಂಚಿತವಾಗಿದ್ದು ನಿಜ. ವಿನೇಶ್ ಅನರ್ಹರಾಗಿದ್ದಲ್ಲದೆ ಹಲವು ಸ್ಪರ್ಧೆಗಳಲ್ಲಿ ಆರು, 4ನೇ ಸ್ಥಾನ ಪಡೆದಿದ್ದೇವೆ. ಈ ಬಾರಿಯೂ ಇನ್ನೂ 7 ಪದಕಗಳು ಭಾರತೀಯ ಅಥ್ಲೀಟ್‌ ಗಳ ಕೈ ತಪ್ಪಿಹೋಗಿದೆ ಎಂದು ಬಿಂದ್ರಾ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News