2024ರ ಟ್ವೆಂಟಿ-20 ವಿಶ್ವಕಪ್‌ಗೆ ಅರ್ಹತೆ ಪಡೆದ ನೇಪಾಳ, ಒಮಾನ್
ಹೊಸದಿಲ್ಲಿ: ನೇಪಾಳದಲ್ಲಿ ಶುಕ್ರವಾರ ಏಶ್ಯನ್ ಕ್ವಾಲಿಫೈಯರ್ ಫೈನಲ್‌ಗೆ ತಲುಪಿರುವ ನೇಪಾಳ ಹಾಗೂ ಒಮಾನ್ ತಂಡಗಳು ಐಸಿಸಿ ಪುರುಷರ ಟ್ವೆಂಟಿ-20 ವಿಶ್ವಕಪ್-2024ಕ್ಕೆ ಅರ್ಹತೆ ಪಡೆದಿವೆ.
ಆತಿಥೇಯ ನೇಪಾಳ ತಂಡವು ಯುನೈಟೆಡ್ ಅರಬ್ ಎಮಿರೇಟ್ಸ್ ತಂಡವನ್ನು ಸೆಮಿ ಫೈನಲ್‌ನಲ್ಲಿ 8 ವಿಕೆಟ್‌ಗಳಿಂದ ಮಣಿಸಿದರೆ, ಒಮಾನ್ ತಂಡ ಬಹರೈನ್ ತಂಡವನ್ನು 10 ವಿಕೆಟ್‌ಗಳ ಅಂತರದಿಂದ ಸೋಲಿಸಿತು.
ನೇಪಾಳ ಇದೇ ಮೊದಲ ಬಾರಿ ವಿಶ್ವಕಪ್ ಟೂರ್ನಿಯಲ್ಲಿ ಕಾಣಿಸಿಕೊಳ್ಳಲಿದೆ. 2024ರ ಟಿ-20 ವಿಶ್ವಕಪ್ ಟೂರ್ನಿಯು ಮುಂದಿನ ವರ್ಷ ಅಮೆರಿಕ ಹಾಗೂ ವೆಸ್ಟ್‌ಇಂಡೀಸ್ ಆತಿಥ್ಯದಲ್ಲಿ ನಡೆಯಲಿದೆ. ಒಮಾನ್ ತಂಡ ಕೂಡ ಟೂರ್ನಮೆಂಟ್‌ನಲ್ಲಿ ಮೊದಲ ಬಾರಿ ಭಾಗವಹಿಸುತ್ತಿದೆ.
2007ರಲ್ಲಿ ಟಿ-20 ವಿಶ್ವಕಪ್ ಟೂರ್ನಿ ಆರಂಭವಾಗಿದ್ದು, ಮುಂಬರುವ 9ನೇ ಆವೃತ್ತಿಯ ಟೂರ್ನಿಯಲ್ಲಿ ಮೊದಲ ಬಾರಿ 20 ತಂಡಗಳು ಭಾಗವಹಿಸುತ್ತಿವೆ. ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಭಜಿಸಲಾಗುತ್ತದೆ. ಪ್ರತಿ ಗುಂಪಿನಲ್ಲಿ 5 ತಂಡಗಳು ಇರುತ್ತವೆ. ನಾಲ್ಕು ಗುಂಪಿನ ಅಗ್ರ-2 ತಂಡಗಳು ಸೂಪರ್-8ಕ್ಕೆ ಅರ್ಹತೆ ಪಡೆಯುತ್ತವೆ.
ಟೂರ್ನಮೆಂಟ್‌ನಲ್ಲಿ ಈತನಕ 18 ತಂಡಗಳು ಅರ್ಹತೆ ಪಡೆದಿವೆ. ಆಫ್ರಿಕಾ ಕ್ವಾಲಿಫೈಯರ್‌ನಿಂದ ಕೊನೆಯ ಎರಡು ಸ್ಥಾನಗಳನ್ನು ನಿರ್ಧರಿಸಲಾಗುತ್ತದೆ. ಆಫ್ರಿಕಾ ಕ್ವಾಲಿಫೈಯರ್ ನಮೀಬಿಯಾದಲ್ಲಿ ನ.22ರಿಂದ 30ರ ತನಕ ನಡೆಯಲಿದೆ.
2024ರ ಟಿ-20 ವಿಶ್ವಕಪ್ ಫೈನಲ್ ಪಂದ್ಯವು 2024ರ ಜೂನ್ 30ರಂದು ನಡೆಯಲಿದೆ.
2024ರ ಟಿ-20 ವಿಶ್ವಕಪ್‌ಗೆ ಅರ್ಹತೆ ಪಡೆದಿರುವ ತಂಡಗಳು
ಆಸ್ಟ್ರೇಲಿಯ, ಇಂಗ್ಲೆಂಡ್, ಭಾರತ, ನೆದರ್‌ಲ್ಯಾಂಡ್ಸ್, ನ್ಯೂಝಿಲ್ಯಾಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಐರ್‌ಲ್ಯಾಂಡ್,ಸ್ಕಾಟ್‌ಲ್ಯಾಂಡ್, ವೆಸ್ಟ್‌ಇಂಡೀಸ್(ಆತಿಥೇಯ), ಅಮೆರಿಕ(ಆತಿಥೇಯ), ಪಪುವಾ ನ್ಯೂ ಗಿನಿ, ಕೆನಡ, ನೇಪಾಳ ಹಾಗೂ ಒಮಾನ್.