ಸೌದಿ ಅರೇಬಿಯಾದ ಅಲ್ ಹಿಲಾಲ್ ಜತೆ ಒಪ್ಪಂದ ಮಾಡಿಕೊಳ್ಳುವ ಸಲುವಾಗಿ ಪಿಎಸ್ ಜಿ ತೊರೆದ ನೇಮರ್
ರಿಯಾದ್: ಫ್ರೆಂಚ್ ಚಾಂಪಿಯನ್ ಪ್ಯಾರೀಸ್ ಸೈಂಟ್-ಜರ್ಮೇನ್ ಕ್ಲಬ್ ಜತೆಗಿನ ಆರು ಸೀಸನ್ ಗಳ ಒಡನಾಟವನ್ನು ತೊರೆದ ಬ್ರೆಜಿಲ್ ನ ಖ್ಯಾತ ಮುನ್ನಡೆ ಆಟಗಾರ ನೇಮರ್ ಸೌದಿ ಅರೇಬಿಯಾದ ಅಲ್ ಹಿಲಾಲ್ ತಂಡದ ಜತೆ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ.
ಕ್ರಿಸ್ಟಿಯಾನೊ ರೊನಾಲ್ಡೊ ಹಾಗೂ ಕರೀಮ್ ಬೆನ್ಝೇಮಾ ಅವರು ಈಗಾಗಲೇ ಈ ತೈಲಸಮೃದ್ಧ ಗಲ್ಫ್ ರಾಷ್ಟ್ರವನ್ನು ಸೇರಿದ್ದರು.
31 ವರ್ಷ ವಯಸ್ಸಿನ ನೇಮರ್ ಆರು ವರ್ಷಗಳ ಕಾಲ ಪಿಎಸ್ ಜಿಯಲ್ಲಿದ್ದ ವೇಳೆ 173 ಪಂದ್ಯಗಳಲ್ಲಿ 118 ಗೋಲುಗಳನ್ನು ಗಳಿಸಿದ್ದರು. ಅವರು ಐದು ಲೀಗ್ 1 ಪ್ರಶಸ್ತಿಗಳನ್ನು, ಮೂರು ಫ್ರೆಂಚ್ ಕಪ್ ಗಳನ್ನು ಜಯಿಸಿದ್ದರು. ಆದರೆ ಇವರ ನೇತೃತ್ವದ ಪಿಎಸ್ಜಿ ತಂಡ 2020ರ ಚಾಂಪಿಯನ್ಸ್ ಲೀಗ್ ಫೈನಲ್ ನಲ್ಲಿ ಬಯೇರ್ನ್ ಮ್ಯೂನಿಚ್ ವಿರುದ್ಧ ಸೋಲು ಅನುಭವಿಸಬೇಕಾಯಿತು.
"ನಾನು ಸೌದಿ ಅರೇಬಿಯಾಕ್ಕೆ ಬಂದಿದ್ದೇನೆ. ನಾನು ಈಗ ಹಿಲಾಲಿ.." ಎಂದು ಹಿಲಾಲ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಮಾಡಿದ ವಿಡಿಯೊದಲ್ಲಿ ನೇಮರ್ ಹೇಳಿದ್ದಾರೆ.
"ವಿಶ್ವದ ಅಗ್ರಗಣ್ಯ ಆಟಗಾರರಲ್ಲಿ ಒಬ್ಬರಾದ ನೇಮರ್ ಅವರಂಥ ಅದ್ಭುತ ಆಟಗಾರನಿಗೆ ಗುಡ್ ಬೈ ಹೇಳುವುದು ಕಷ್ಟಸಾಧ್ಯ" ಎಂದು ಪಿಎಸ್ ಜಿ ಅಧ್ಯಕ್ಷ ನಸರ್ ಅಲ್- ಖಿಲಾಫಿ ಹೇಳಿದ್ದಾರೆ. ನೇಮರ್ ನಮ್ಮ ಇತಿಹಾಸದ ದೊಡ್ಡ ಭಾಗ ಎಂದು ಅವರು ಬಣ್ಣಿಸಿದ್ದಾರೆ.