ಪ್ಯಾರಿಸ್ ಒಲಿಂಪಿಕ್ಸ್ | 100 ಮೀಟರ್ ಪುರುಷರ ಓಟದ ಸ್ಪರ್ಧೆಯಲ್ಲಿ ಕೂದಲೆಳೆಯ ಅಂತರದಲ್ಲಿ ಚಿನ್ನ ಮುಡಿಗೇರಿಸಿಕೊಂಡ ಅಮೆರಿಕದ ನೋವಾ ಲೈಲ್ಸ್

Update: 2024-08-05 11:36 IST
ಪ್ಯಾರಿಸ್ ಒಲಿಂಪಿಕ್ಸ್ | 100 ಮೀಟರ್ ಪುರುಷರ ಓಟದ ಸ್ಪರ್ಧೆಯಲ್ಲಿ ಕೂದಲೆಳೆಯ ಅಂತರದಲ್ಲಿ ಚಿನ್ನ ಮುಡಿಗೇರಿಸಿಕೊಂಡ ಅಮೆರಿಕದ ನೋವಾ ಲೈಲ್ಸ್

ನೋವಾ ಲೈಲ್ಸ್ (Photo credit:X/@LylesNoah)

  • whatsapp icon

ಪ್ಯಾರಿಸ್: ಸ್ಟೇಡ್ ಡಿ ಫ್ರಾನ್ಸ್ ಕ್ರೀಡಾಂಗಣದಲ್ಲಿ ನಡೆದ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಅಮೆರಿಕದ ನೋವಾ ಲೈಲ್ಸ್ ಕೂದಲೆಳೆಯ ಅಂತರದಲ್ಲಿ ಗೆಲುವಿನ ಗೆರೆ ದಾಟುವ ಮೂಲಕ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.

ಜಮೈಕಾ ಓಟಗಾರ ಕಿಶೇನ್ ಥಾಂಪ್ಸನ್ ಕೇವಲ ಕೂದಲೆಳೆಯಷ್ಟು ಹಿಂದೆ ಬೀಳುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಳ್ಳುವಂತಾಯಿತು. ನೋವಾ ಲೈಲ್ ಹಾಗೂ ಕಿಶೇನ್ ಥಾಂಪ್ಸನ್ ಇಬ್ಬರೂ 9.79 ಸೆಕೆಂಡ್ ಗಳಲ್ಲಿ ಗುರಿ ಮುಟ್ಟಿದರಾದರೂ, ನೋವಾ ಲೈಲ್ ಕೂದಲೆಳೆ ಅಂತರದಷ್ಟು ಮುಂದಿರುವ ಮೂಲಕ ಮೊದಲಿಗರಾಗಿ ಹೊರ ಹೊಮ್ಮಿದರು. ಇವರಿಬ್ಬರಿಗೂ ನಿಕಟ ಪೈಪೋಟಿ ನೀಡಿದ ಅಮೆರಿಕದವರೇ ಆದ ಫ್ರೆಡ್ ಕೆರ್ಲಿ 9.81 ಸೆಕೆಂಡ್ ಗಳಲ್ಲಿ ಗುರಿ ಮುಟ್ಟುವ ಮೂಲಕ ಕಂಚಿನ ಪದಕಕ್ಕೆ ಭಾಜನರಾದರು.

2004ರಲ್ಲಿ ಜಸ್ಟಿನ್ ಗ್ಯಾಟ್ಲಿನ್ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ ನಂತರ, ಇದೇ ಪ್ರಥಮ ಬಾರಿಗೆ ಅಮೆರಿಕ ಓಟಗಾರರೊಬ್ಬರು ಒಲಿಂಪಿಕ್ಸ್ ಚಿನ್ನದ ಪದಕವನ್ನು ಜಯಿಸಿದ್ದಾರೆ.

ಕೊಂಚ ನಿಧಾನವಾಗಿಯೇ ತಮ್ಮ ಓಟವನ್ನು ಪ್ರಾರಂಭಿಸಿದ ನೋವಾ ಲೈಲ್, ಅಂತಿಮ ಘಟ್ಟದಲ್ಲಿ ತನ್ನ ಓಟದ ವೇಗವನ್ನು ಚುರುಕುಗೊಳಿಸುವ ಮೂಲಕ ಗೆಲುವಿನ ಗೆರೆ ದಾಟಿದರು. ಅವರೊಂದಿಗೆ ಕಿಶೇನ್ ಥಾಂಪ್ಸನ್ ಕೂಡಾ ನಿಗದಿತ ಗುರಿ ದಾಟಿದರು. ಆದರೆ, ಅವರು ನೋವಾ ಲೈಲ್ ಗಿಂತ ಒಂದು ಸೆಕೆಂಡ್ ನಲ್ಲಿ 5000ದಷ್ಟು ಭಾಗ ಹಿಂದೆ ಬಿದ್ದಿದ್ದರಿಂದ, ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಳ್ಳುವಂತಾಯಿತು.

ಈ ಸ್ಪರ್ಧೆಯಲ್ಲಿ ಅಮೆರಿಕದ ಓರ್ವ ಸ್ಪರ್ಧಿ ಚಿನ್ನದ ಪದಕ ಹಾಗೂ ಮತ್ತೊಬ್ಬ ಸ್ಪರ್ಧಿ ಕಂಚಿನ ಪದಕ ಜಯಿಸಿದ್ದು ಗಮನ ಸೆಳೆಯಿತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News