ಅಭಿನವ್ ಬಿಂದ್ರಾಗೆ ಒಲಿಂಪಿಕ್ಸ್ ಆರ್ಡರ್ ಪ್ರಶಸ್ತಿ ಪ್ರಕಟ

Update: 2024-07-23 18:30 GMT

ಅಭಿನವ್ ಬಿಂದ್ರಾ | PC : NDTV 


ಹೊಸದಿಲ್ಲಿ: ಒಲಿಂಪಿಕ್ಸ್ ಆಂದೋಲನಕ್ಕೆ ಸಲ್ಲಿಸಿದ ಅತ್ಯುತ್ತಮ ಸೇವೆಗಳಿಗಾಗಿ ಅಂತರ್‌ರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯು(ಐಒಸಿ)ಭಾರತದ ಶೂಟಿಂಗ್ ದಂತಕತೆ ಅಭಿನವ್ ಬಿಂದ್ರಾಗೆ ಒಲಿಂಪಿಕ್ಸ್ ಆರ್ಡರ್ ಪ್ರಶಸ್ತಿ ಪ್ರಕಟಿಸಿದೆ.

ಪ್ರಶಸ್ತಿ ಪ್ರದಾನ ಸಮಾರಂಭವು ಒಲಿಂಪಿಕ್ಸ್ ಸಮಾರೋಪ ಸಮಾರಂಭದ ಮುನ್ನಾ ದಿನವಾದ ಆಗಸ್ಟ್ 10ರಂದು ಪ್ಯಾರಿಸ್‌ನಲ್ಲಿ ನಡೆಯುವ 142ನೇ ಐಒಸಿ ಅಧಿವೇಶನದಲ್ಲಿ ನಡೆಯಲಿದೆ.

ಒಲಿಂಪಿಕ್ಸ್ ಆರ್ಡರ್ ಐಒಸಿಯ ಅತ್ಯುನ್ನತ ಪ್ರಶಸ್ತಿಯಾಗಿದ್ದು, ಒಲಿಂಪಿಕ್ಸ್ ಆಂದೋಲನಕ್ಕೆ ನೀಡಿದ ಕೊಡುಗೆಗಾಗಿ ಈ ಪ್ರಶಸ್ತಿ ನೀಡಲಾಗುತ್ತದೆ. ಬಿಂದ್ರಾ ಈ ಪ್ರಶಸ್ತಿ ಸ್ವೀಕರಿಸಲಿರುವ ಮೊದಲ ಭಾರತೀಯನಾಗಿದ್ದಾರೆ. ಪ್ಯಾರಿಸ್‌ನಲ್ಲಿ ಶನಿವಾರ ನಡೆದ ಐಒಸಿ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಬಿಂದ್ರಾಗೆ ಪ್ರಶಸ್ತಿ ನೀಡುವ ನಿರ್ಧಾರ ಕೈಗೊಳ್ಳಲಾಗಿತ್ತು.

ಬಿಂದ್ರಾ 2008ರ ಬೀಜಿಂಗ್ ಒಲಿಂಪಿಕ್ಸ್ನಲ್ಲಿ ಪುರುಷರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಜಯ ಸಾಧಿಸುವ ಮೂಲಕ ಒಲಿಂಪಿಕ್ಸ್ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ ಭಾರತದ ಮೊದಲ ಅತ್ಲೀಟ್ ಎನಿಸಿಕೊಂಡಿದ್ದರು.

40ರ ಹರೆಯದ ಬಿಂದ್ರಾ ಇಂಟರ್‌ನ್ಯಾಶನಲ್ ಶೂಟಿಂಗ್ ಸ್ಪೋಟ್ಸ್ ಫೆಡರೇಶನ್‌ನ(ಐಎಸ್‌ಎಸ್‌ಎಫ್) ಅತ್ಲೀಟ್ ಸಮಿತಿಯ ಸದಸ್ಯರಾಗಿ 2010ರಿಂದ 2020ರ ತನಕ ಕಾರ್ಯನಿರ್ವಹಿಸಿದ್ದರು. 2014ರಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 2018ರಿಂದ ಐಒಸಿ ಅತ್ಲೀಟ್ ಕಮಿಶನ್‌ನ ಸದಸ್ಯರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News