ವಿಶ್ವಕಪ್: ಬಾಂಗ್ಲಾ ವಿರುದ್ಧ ಪ್ರಾಬಲ್ಯ ಮೆರೆದ ಪಾಕಿಸ್ತಾನ; 7 ವಿಕೆಟ್ ಜಯ

Update: 2023-10-31 15:11 GMT

Photo credit: cricketworldcup.com

ಕಲ್ಕತ್ತಾ: ಇಲ್ಲಿನ ಈಡನ್ ಗಾರ್ಡನ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಪಾಕಿಸ್ತಾನ 7 ವಿಕೆಟ್ ಗಳಿಂದ ಜಯ ಸಾಧಿಸಿದೆ.

ಫಖರ್ ಝಮಾನ್ ಹಾಗೂ ಅಬ್ದುಲ್ಲಾ ಶಫೀಕ್ ಆಕರ್ಷಕ ಅರ್ಧಶತಕ ನೆರವಿಂದ ಪಾಕ್ ತಂಡ ಏಕಪಕ್ಷೀಯವಾಗಿ ಬಾಂಗ್ಲಾ ವಿರುದ್ಧ ಪ್ರಾಬಲ್ಯ ಮೆರೆಯಿತು. ಪರಿಣಾಮ 33.3 ಓವರ್ ನಲ್ಲಿಯೇ 3 ವಿಕೆಟ್ ಕಳೆದುಕೊಂಡು ಪಾಕ್ ಗುರಿ ತಲುಪಿತು.

ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಪಾಕಿಸ್ತಾನ ತನ್ನ ಸೇಮೀಸ್ ಆಸೆಯನ್ನು ಜೀವಂತವಾಗಿರಿಸಿಕೊಂಡರೂ ಅದು ಇತರೆ ತಂಡಗಳ ಫಲಿತಾಂಶ ಆದರಿಸಿಕೊಂಡಿದೆ. ಆದರೆ ಈ ಹೀನಾಯ ಸೋಲಿನ ಬಳಿಕ ಬಾಂಗ್ಲಾದೇಶ ತಾನಾಡಿದ 7 ಪಂದ್ಯಗಳಲ್ಲಿ 6 ಸೋತು ಬಹುತೇಕ ಟೂರ್ನಿಯಿಂದ ಹೊರಬಿದ್ದಿದೆ.

ಬಾಂಗ್ಲಾ ನೀಡಿದ್ದ 205 ಸಾಧಾರಣ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡಕ್ಕೆ ಆರಂಭಿಕರು ಭರ್ಜರಿ ಆರಂಭ ಒದಗಿಸಿದರು. ಅಬ್ದುಲ್ಲಾ ಶಫೀಕ್ ಹಾಗೂ ಫಖರ್ ಝಮಾನ್ ಜೋಡಿ ಮೊದಲ ವಿಕೆಟ್ ಪತನಕ್ಕೆ 128 ರನ್ ಜೊತೆಯಾಟ ನಿಭಾಯಿಸಿದರು. ತಂಡದ ಪರ 9 ಬೌಂಡರಿ 2 ಸಿಕ್ಸರ್ ಸಹಿತ 68 ರನ್ ಬಾರಿಸಿ ಅಬ್ದುಲ್ಲಾ ಶಫೀಕ್, 21.1 ಓವರ್ ನ ಮೆಹಿದಿ ಹಸನ್ ಬೌಲಿಂಗ್ ನಲ್ಲಿ ಎಲ್ ಬಿಡಬ್ಲ್ಯೂ ಬಲೆಗೆ ಬಿದ್ದರು. 7 ಭರ್ಜರಿ ಸಿಕ್ಸರ್ ಸಹಿತ ಫಖರ್ ಝಮಾನ್ . ಸ್ಟೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಪಾಕ್ ಗೆಲುವಿನ ರುವಾರಿಯಾದ ಫಖರ್ 3 ಬೌಂಡರಿ 7 ಸಿಕ್ಸರ್ ಸಹಿತ 81 ರನ್ ಬಾರಿಸಿ ಮೆಹಿದಿ ಹಸನ್ ಬೌಲಿಂಗ್ ನಲ್ಲಿ ದೊಡ್ಡ ಮೊತ್ತ ಬಾರಿಸುವ ಅವಸರದಲ್ಲಿ ತೌಹೀದ್ ಗೆ ಕ್ಯಾಚಿತ್ತು ಶತಕದ ಹೊಸ್ತಿಲಲ್ಲಿ ಎಡವಿದರು. ಬಳಿಕ ತಂಡವನ್ನು ಗುರಿ ಸೇರಿಸಿದ ಮುಹಮ್ಮದ್ ರಿಝ್ವಾನ್ 26 ರನ್ ಗಳಿಸಿದರೆ ಇಫ್ತಿಕಾರ್ ಅಹ್ಮದ್ 17 ರನ್ ಕೊಡುಗೆ ನೀಡಿದರು.

ಬಾಂಗ್ಲಾದೇಶ ಪರ ಮೆಹಿದಿ ಹಸನ್ ಮಿರಾಝ್ 3 ವಿಕೆಟ್ ಪಡೆದು ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು.

ಈ ಮೊದಲು ಸೆಮೀಸ್ ಗೆ ಅರ್ಹತೆ ಪಡೆಯುವಲ್ಲಿ ಇತ್ತಂಡಗಳಿಗೂ ಪ್ರಮುಖವೆನಿಸಿರುವ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲದೇಶ ತನ್ನ ರನ್ ರೇಟ್ ಉತ್ತಮ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ತನ್ನ ಉದ್ದೇಶಕ್ಕೆ ತದ್ವಿರುದ್ಧವಾಗಿ ಬ್ಯಾಟ್ ಬೀಸಿದ ಬಾಂಗ್ಲಾದೇಶ ಕಳಪೆ ಆರಂಭ ಪಡೆದುಕೊಂಡಿತು. ಓಪನರ್ ತಂಝಿದ್ ಹಸನ್ ಶೂನ್ಯಕ್ಕೆ ಶಾಹೀನ್ ಅಫ್ರಿದಿ ಬೌಲಿಂಗ್ ನಲ್ಲಿ ಮೊದಲ ಓವರ್ ನಲ್ಲಿಯೇ ವಿಕೆಟ್ ಕಳೆದುಕೊಂಡರೆ , ನಜ್ಮುಲ್ ಹುಸೈನ್ ಶಾಂಟೊ 2.4 ಓವರ್ ನಲ್ಲಿಯೇ 4 ರನ್ ಗೆ ಮತ್ತೆ ಶಾಹೀನ್ ಅಫ್ರಿದಿ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು. ಬಳಿಕ ಬ್ಯಾಟಿಂಗ್ ಬಂದ ಮುಶ್ಪಿಕುರ್ ರಹೀಮ್ 4 ರನ್ ಗೆ ಹಾರೀಸ್ ರವೂಫ್ ಬೌಲಿಂಗ್ ನಲ್ಲಿ ಔಟ್ ಆದರು. ಹೀಗೆ ತನ್ನ 6 ಓವರ್ ಮುಗಿಸುವಷ್ಟರಲ್ಲಿಯೇ ಬಾಂಗ್ಲಾ ತನ್ನ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿತು. ಆರಂಭಿಕ ವಿಕೆಟ್ ಪತನ ಗಳ ನಡುವೆಯೂ 45 ರನ್ ಗಳಿಸಿ ಬ್ಯಾಟ್ ಬೀಸಿದ್ದ ಲಿಟನ್ ದಾಸ್ ಇಫ್ತಿಕಾರ್ ಅಹ್ಮದ್ ಬೌಲಿಂಗ್ ನಲ್ಲಿ ವಿಕೆಟ್ ಕಳೆದುಕೊಂಡು ಅರ್ಧಶತಕ ವಂಚಿತರಾದರು. ತಂಡದ ಪರ ಜವಾಬ್ದಾರಿಯುತ ಇನ್ನಿಂಗ್ಸ್ ನಿರ್ವಹಿಸಿದ ಮಾಜಿ ನಾಯಕ ಮುಹಮ್ಮದುಲ್ಲಾ 6 ಬೌಂಡರಿ 1 ಸಿಕ್ಸರ್ ಸಹಿತ 56 ರನ್ ಗಳಿಸಿ ಶಾಹೀನ್ ಅಫ್ರಿದಿಗೆ ಬೌಲ್ಡ್ ಆದರು. ಮುಹಮ್ಮದುಲ್ಲಾ ವಿಕೆಟ್ ಪತನ ಬಳಿಕ ತಂಡಕ್ಕೆ ಸ್ಪರ್ದಾತ್ಮಕ ರನ್ ಜೋಡಿಸುವ ಜವಾಬ್ದಾರಿ ಹೊತ್ತಿದ್ದ ನಾಯಕ ಶಾಕಿಬ್ ಉಲ್ ಹಸನ್ 43 ರನ್ ಗಳಿಸಿ ಹಾರೀಸ್ ರವೂಫ್ ಗೆ ವಿಕೆಟ್ ಒಪ್ಪಿಸಿ ನಿರ್ಗಮಿಸಿದರು. ಕಡೆಯಲ್ಲಿ ಬಾಂಗ್ಲಾ ಪರ ತೌಹೀದ್ ಹೃದೋಯ್ 7 ,ಮೆಹಿದಿ ಹಸನ್ 25 ,ತಸ್ಕಿನ್ ಅಹ್ಮದ್ 6 ರನ್ ಗಳಿಸಿದರು.

ಪಾಕಿಸ್ತಾನ ಪರ ಶಾಹೀನ್ ಅಫ್ರಿದಿ , ಮುಹಮ್ಮದ್ ವಾಸಿಮ್ 3 ವಿಕೆಟ್ ಪಡೆದುಕೊಂಡು ಬಾಂಗ್ಲಾವನ್ನು ಕಟ್ಟಿ ಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರೆ . ಹಾರೀಸ್ ರವೂಫ್ 2 ವಿಕೆಟ್ ಹಾಗೂ ಇಫ್ತಿಕಾರ್ ಅಹ್ಮದ್ , ಉಸಾಮ ಮಿರ್ ತಲಾ ಒಂದು ವಿಕೆಟ್ ಪಡೆದುಕೊಂಡರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News