ಪಾಕಿಸ್ತಾನಿ ಕ್ರಿಕೆಟ್‌ನಲ್ಲಿ ಮತ್ತೆ ಮ್ಯಾಚ್‌ಫಿಕ್ಸಿಂಗ್ ನೆರಳು | ಮಾಜಿ ಕ್ರಿಕೆಟಿಗ ಬಾಸಿತ್ ಅಲಿ ಹೊಸ ಆರೋಪ
ಲಾಹೋರ್ : ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರು ಸದಾ ಒಂದಿಲ್ಲೊಂದು ವಿವಾದದಲ್ಲಿ ಸಿಲುಕುತ್ತಾ ಇರುತ್ತಾರೆ. ಅವರ ವಿರುದ್ಧ ಮ್ಯಾಚ್‌ಫಿಕ್ಸಿಂಗ್ ಅಥವಾ ಸ್ಪಾಟ್ ಫಿಕ್ಸಿಂಗ್ ಆರೋಪಗಳು ಸಾಮಾನ್ಯವಾಗಿ ಕೇಳಿಬರುತ್ತಿರುತ್ತವೆ. ತಂಡವು ಪಂದ್ಯವೊಂದರಲ್ಲಿ ಸೋತಾಗ ಅಭಿಮಾನಿಗಳು ಮತ್ತು ಮಾಜಿ ಕ್ರಿಕೆಟಿಗರು ಇಂಥ ಆರೋಪಗಳನ್ನು ಮಾಡುತ್ತಾರೆ.
ಹಿಂದೆ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಶಾಮೀಲಾಗಿರುವ ಆರೋಪದಲ್ಲಿ ಮುಹಮ್ಮದ್ ಆಮಿರ್, ಮುಹಮ್ಮದ್ ಆಸಿಫ್ ಮತ್ತು ಸಲ್ಮಾನ್ ಭಟ್ ಮುಂತಾದ ಆಟಗಾರರನ್ನು ನಿಷೇಧಿಸಲಾಗಿತ್ತು.
ಈಗ ಹೊಸದಾಗಿ ಮಾಜಿ ಬ್ಯಾಟರ್ ಬಾಸಿತ್ ಅಲಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
‘‘ದೇಶದ ಬಗ್ಗೆ ಯೋಚಿಸದ ವ್ಯಕ್ತಿಯನ್ನು ನೇಮಕ ಮಾಡಬಾರದು. ತಾನು ಪಂದ್ಯವೊಂದರಲ್ಲಿ ಉದ್ದೇಶಪೂರ್ವಕವಾಗಿ ಸೋತಿದ್ದೇನೆ ಎಂದು ಒಪ್ಪಿಕೊಂಡವರು ಮಾರ್ಗದರ್ಶಿ ಆಗಬಾರದು. ನಿಮಗೆ ಪುರಾವೆ ಬೇಕಾದರೆ ನಾನು ಕೊಡುತ್ತೇನೆ. ರಮೀಝ್ ರಾಜ ಸಾಹೇಬರು ಶುಐಬ್ ಮಲಿಕ್‌ರನ್ನು ಸಂದರ್ಶನ ಮಾಡಿದ್ದಾರೆ. ಅವರು ಏನು ಹೇಳಿದರು?’’ ಎಂದು ವೀಡಿಯೊ ಒಂದರಲ್ಲಿ 53 ವರ್ಷದ ಬಾಸಿತ್ ಅಲಿ ಹೇಳಿದ್ದಾರೆ. ಆದರೆ, ಅವರು ಯಾರ ವಿರುದ್ಧವೂ ನೇರ ಆರೋಪ ಮಾಡಿಲ್ಲ. ಅವರ ವೀಡಿಯೊ ಈಗ ಸಾಮಾಜಿಕ ಮಾಧ್ಯಮಗಳಲಿ ವೈರಲ್ ಆಗಿದೆ.