ಪ್ಯಾರಾಲಿಂಪಿಕ್ಸ್ ಶಾಟ್‌ಪುಟ್: ವಿಶ್ವ ಚಾಂಪಿಯನ್ ಸಚಿನ್ ಖ್ಹಿಲಾರಿಗೆ ಬೆಳ್ಳಿ

Update: 2024-09-04 14:53 GMT

ಸಚಿನ್ ಖ್ಹಿಲಾರಿ | PC : NDTV 

ಪ್ಯಾರಿಸ್ : ಏಶ್ಯನ್ ದಾಖಲೆ ನಿರ್ಮಿಸುವ ಮೂಲಕ ವಿಶ್ವ ಚಾಂಪಿಯನ್ ಸಚಿನ್ ಸರ್ಗೆೆರಾವ್ ಖ್ಹಿಲಾರಿ ಪ್ಯಾರಾಲಿಂಪಿಕ್ ಗೇಮ್ಸ್‌ನಲ್ಲಿ ಬುಧವಾರ ನಡೆದ ಪುರುಷರ ಶಾಟ್‌ಪುಟ್ ಎಫ್‌46 ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ.

16.32 ಮೀ.ದೂರಕ್ಕೆ ಶಾಟ್‌ಪುಟ್ ಎಸೆಯುವ ಮೂಲಕ ಸಚಿನ್ ಎರಡನೇ ಸ್ಥಾನ ಪಡೆದರು. 34 ರ ಹರೆಯದ ಸಚಿನ್ ತನ್ನ ಎರಡನೇ ಪ್ರಯತ್ನದಲ್ಲಿ ವೈಯಕ್ತಿಕ ಶ್ರೇಷ್ಠ ಪ್ರದರ್ಶನ ನೀಡಿದರು. ಮೇನಲ್ಲಿ ಜಪಾನ್‌ನಲ್ಲಿ ನಡೆದಿದ್ದ ವರ್ಲ್ಡ್ ಪ್ಯಾರಾ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಹಾದಿಯಲ್ಲಿ ನಿರ್ಮಿಸಿದ್ದ ತನ್ನದೇ ಏಶ್ಯನ್ ದಾಖಲೆ(16.30ಮೀ.)ಯನ್ನು ಮುರಿದರು.

ಸಚಿನ್ ತನ್ನ ಶ್ರೇಷ್ಠ ಪ್ರದರ್ಶನ ನೀಡಿದರೂ ಅಗ್ರ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. ಹಾಲಿ ಚಾಂಪಿಯನ್ ಕೆನಡಾದ ಗ್ರೆಗ್ ಸ್ಟೀವರ್ಟ್ 16.38 ಮೀ.ದೂರಕ್ಕೆ ಡಿಸ್ಕಸ್ ಎಸೆದು ಸತತ ಎರಡನೇ ಚಿನ್ನದ ಪದಕ ಜಯಿಸಿದರು. ಟೋಕಿಯೊ ಗೇಮ್ಸ್‌ನಲ್ಲೂ ಸ್ಟೀವರ್ಟ್ ಚಿನ್ನ ಜಯಿಸಿದ್ದರು. ಕ್ರೊಯೇಶಿಯದ ಲುಕಾ ಬಾಕೊವಿಕ್(16.27 ಮೀ.)ಕಂಚಿನ ಪದಕ ಜಯಿಸಿದರು.

ಸಚಿನ್ ಜಯಿಸಿರುವ ಬೆಳ್ಳಿ ಪದಕವು ಪ್ರಸಕ್ತ ಗೇಮ್ಸ್‌ನಲ್ಲಿ ಪ್ಯಾರಾ-ಅತ್ಲೆಟಿಕ್ಸ್ ವಿಭಾಗದಲ್ಲಿ ಗೆದ್ದಿರುವ 11ನೇ ಪದಕವಾಗಿದೆ. ಒಟ್ಟಾರೆ ಭಾರತ ತಂಡವು ಮೂರು ಚಿನ್ನ ಸಹಿತ ಒಟ್ಟು 21 ಪದಕಗಳನ್ನು ಜಯಿಸಿದೆ.

ಮೆಕ್ಯಾನಿಕಲ್ ಇಂಜಿನಿಯರ್ ಆಗಿರುವ ಸಚಿನ್ ಬುಧವಾರ ಎರಡನೇ ಸುತ್ತಿನ ಅಂತ್ಯಕ್ಕೆ ಅಗ್ರಸ್ಥಾನದಲ್ಲಿದ್ದರು. ಆದರೆ ಸ್ಟೀವರ್ಟ್ ತನ್ನ 3ನೇ ಎಸೆತದಲ್ಲಿ 16.34 ಮೀ.ದೂರಕ್ಕೆ ಡಿಸ್ಕಸ್ ಎಸೆದು ಮೊದಲ ಸ್ಥಾನಕ್ಕೇರಿದರು. ತನ್ನ 5ನೇ ಎಸೆತದಲ್ಲಿ 16.38 ಮೀ.ದೂರ ಡಿಸ್ಕಸ್ ಎಸೆದು ತನ್ನ ಪ್ರದರ್ಶನ ಉತ್ತಮಪಡಿಸಿಕೊಂಡರು.

ಸ್ಪರ್ಧೆಯಲ್ಲಿದ್ದ ಭಾರತದ ಇನ್ನಿಬ್ಬರು ಡಿಸ್ಕಸ್ ಪಟುಗಳಾದ ಮುಹಮ್ಮದ್ ಯಾಸಿರ್(14.21ಮೀ.) ಹಾಗೂ ರೋಹಿತ್ ಕುಮಾರ್(14.10 ಮೀ.)ಕ್ರಮವಾಗಿ 8ನೇ ಹಾಗೂ 9ನೇ ಸ್ಥಾನ ಪಡೆದಿದ್ದಾರೆ. ಅಮೆರಿಕದ ವಿಶ್ವ ದಾಖಲೆ ವೀರ ಜೊಶುವಾ ಸಿನ್ನ್ನಾಮಾ(15.66ಮೀ.)4ನೇ ಸ್ಥಾನ ಪಡೆದರು.

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕರಗಾನಿ ಗ್ರಾಮದ ಕೃಷಿ ಕುಟುಂಬದಿಂದ ಬಂದಿರುವ ಸಚಿನ್ ಅವರು ತನ್ನ ಶಾಲಾ ದಿನಗಳಲ್ಲಿ ಅಪಘಾತಕ್ಕೀಡಾಗಿದ್ದರು. ಇದರ ಪರಿಣಾಮವಾಗಿ ಅವರ ಮೊಣಕೈಯಲ್ಲಿ ಚರ್ಮದ ಗ್ಯಾಂಗ್ರೀನ್ ಹಾಗೂ ಸ್ನಾಯು ಕ್ಷೀಣತೆ ಉಂಟಾಗಿತ್ತು. ಹಲವಾರು ಶಸ್ತ್ರಚಿಕಿತ್ಸೆಗೆ ಒಳಗಾದರೂ ಅವರು ಸಂಪೂರ್ಣ ಚೇತರಿಸಿಕೊಳ್ಳಲಿಲ್ಲ. ಸಚಿನ್ ಅವರು ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನೂ ಕಳೆದುಕೊಂಡರು. ಈ ಎಲ್ಲ ಸಮಸ್ಯೆಗಳ ಹೊರತಾಗಿಯೂ ಸಚಿನ್ ಅವರು ಇಂಜಿನಿಯರ್ ಓದುತ್ತಿದ್ದಾಗ ಜಾವೆಲಿನ್‌ನತ್ತ ಒಲವು ತೋರಿದರು. ಆದರೆ ಸ್ಪರ್ಧೆಯ ಸಮಯದಲ್ಲಿ ಉಂಟಾದ ಭುಜದ ನೋವು ಶಾಟ್‌ಪುಟ್‌ನತ್ತ ತನ್ನ ಆಸಕ್ತಿ ಬದಲಾಯಿಸಲು ಕಾರಣವಾಯಿತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News