ಪ್ಯಾರಿಸ್ ಒಲಿಂಪಿಕ್ಸ್ ಹಾಕಿ | ಕಂಚಿನ ಅಂಗಳಕ್ಕೆ ಗೋಲ್ ಹೊಡೆದ ಭಾರತ

Photo : PTI
ಪ್ಯಾರಿಸ್ : ಒಲಿಂಪಿಕ್ಸ್ ನಲ್ಲಿ ಗುರುವಾರ ನಡೆದ ಪ್ಲೇ ಆಫ್ ಪಂದ್ಯದಲ್ಲಿ ಸ್ಪೇನ್ ತಂಡವನ್ನು 2-1 ಅಂಕಗಳಿಂದ ಸೋಲಿಸಿ ಭಾರತ ಹಾಕಿ ತಂಡವು ಕಂಚಿನ ಪದಕಕ್ಕೆ ಕೊರಳೊಡ್ಡಿತು.
ಸ್ಪೇನ್ ನಾಯಕ ಮಾರ್ಕ್ ಮಿರಾಲ್ಲೆಸ್ ಅವರು ಮೊದಲು ಗೋಲ್ ಬಾರಿಸುವ ಮೂಲಕ ಸ್ಪೇನ್ ಗೆ ಮುನ್ನಡೆ ತಂದು ಕೊಟ್ಟರು. ಆ ಬಳಿಕ ಭಾರತದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಎರಡು ಗೋಲುಗಳನ್ನು ಬಾರಿಸಿ ಭಾರತಕ್ಕೆ ಮತ್ತೊಂದು ಕಂಚಿನ ಪದಕವನ್ನು ತಂದುಕೊಟ್ಟರು.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ತಂಡವು ಕಂಚಿನ ಪದಕ ಜಯಿಸಿತ್ತು. ಈಗ ಟೊಕಿಯೊದ ಸಾಧನೆಯನ್ನು ಮತ್ತೆ ಪುನರಾವರ್ತಿಸಿದೆ. ಇದರೊಂದಿಗೆ ಹಾಕಿ ದಿಗ್ಗಜ ಗೋಲ್ ಕೀಪರ್ ಪಿ.ಆರ್. ಶ್ರೀಜೇಶ್ ಅವರು ಗೆಲುವಿನೊಂದಿಗೆ ಅಂತರರಾಷ್ಟ್ರೀಯ ಹಾಕಿಗೆ ವಿದಾಯ ಹೇಳಿದ್ದಾರೆ.
ಒಲಿಂಪಿಕ್ಸ್ ನ ಹಾಕಿ ಸೆಮಿಫೈನಲ್‌ನಲ್ಲಿ ಹರ್ಮನ್‌ಪ್ರೀತ್ ಸಿಂಗ್ ನಾಯಕತ್ವದ ಭಾರತ ತಂಡವು ಜರ್ಮನಿಯ ವಿರುದ್ಧ ಸೋಲನುಭವಿಸಿತ್ತು.
ಒಲಿಂಪಿಕ್ಸ್ ನಲ್ಲಿ ಭಾರತ ಪುರುಷರ ಹಾಕಿ ತಂಡವು ಅತ್ಯಂತ ಯಶಸ್ವಿ ತಂಡವಾಗಿದ್ದು, ಈವರೆಗೆ 1928, 1932, 1936, 1948, 1952, 1956, 1964, 1980ರಲ್ಲಿ ಒಟ್ಟು 8 ಬಾರಿ ಚಿನ್ನದ ಪದಕ ಜಯಿಸಿದೆ.
ಹಾಕಿಯಲ್ಲಿ ಪಡೆದ ಕಂಚಿನ ಪದಕಗಳೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ತಂಡವು ಪಡೆದ ಪದಕಗಳ ಸಂಖ್ಯೆ 4 ಆಗಿದೆ. ಇದುವರೆಗೆ ಭಾರತ ಪಡೆದ ಎಲ್ಲಾ 4 ಪದಕಗಳೂ, ಕಂಚಿನ ಪದಕಗಳಾಗಿವೆ.