ವಿರಾಟ್ ಕೊಹ್ಲಿ ಕಾರಣಕ್ಕೆ ಉತ್ತುಂಗಕ್ಕೇರಿದೆ: ಫಿಟ್ನೆಸ್ ಗುರು ಕೊಹ್ಲಿಗೆ ಧನ್ಯವಾದ ಅರ್ಪಿಸಿದ ಹರ್ಭಜನ್ ಸಿಂಗ್

Update: 2024-02-20 16:36 GMT

ವಿರಾಟ್ ಕೊಹ್ಲಿ | Photo: @ImTanujSingh

ಹೊಸದಿಲ್ಲಿ: ನಾನು ದೈಹಿಕವಾಗಿ ಸಮರ್ಥನಾಗಿರಲು ವಿರಾಟ್ ಕೊಹ್ಲಿ ಕಾರಣ ಎಂದು ಐಪಿಎಲ್ 2024 ಪ್ರಾರಂಭವಾಗುವುದಕ್ಕೂ ಮುನ್ನ ಟರ್ಬನೇಟರ್ ಖ್ಯಾತಿಯ ಹರ್ಭಜನ್ ಸಿಂಗ್ ಹೇಳಿದ್ದಾರೆ. Star Sports ಕ್ರೀಡಾ ವಾಹಿನಿಯೊಂದಿಗೆ ಮಾತನಾಡಿರುವ ಅವರು, ವಿರಾಟ್ ಕೊಹ್ಲಿ ನನ್ನ ಪಾಲಿನ ಫಿಟ್ನೆಸ್ ಗುರು ಎಂದು ಪ್ರಶಂಸಿದ್ದಾರೆ.

ಐಪಿಎಲ್ ಕ್ರೀಡಾಕೂಟದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ಪರವಾಗಿ ಆಟವಾಡಿದ್ದ ಹರ್ಭಜನ್ ಸಿಂಗ್, ವಿರಾಟ್ ಕೊಹ್ಲಿ ಭಾರತ ತಂಡದ ಫಿಟ್ನೆಸ್ ಗುರು ಎಂದು ಕೊಂಡಾಡಿದ್ದಾರೆ. "ಖಂಡಿತ, ನಾವು ಫಿಟ್ನೆಸ್ ಕುರಿತು ಮಾತನಾಡುವಾಗ, ನೀವು ನಿಮ್ಮನ್ನು ಕನ್ನಡಿಯಲ್ಲಿ ನೋಡಿಕೊಂಡಾಗ ಖಂಡಿತ ಇದು ಸರಿಯಿಲ್ಲ ಎಂಬ ಸಂಗತಿ ಅರಿವಾಗುತ್ತದೆ ಹಾಗೂ ನೀವು ಏನಾದರೂ ಮಾಡಲೇ ಬೇಕಾಗುತ್ತದೆ. ಆದರೆ, ಆ ವ್ಯಕ್ತಿ ನಾಲ್ಕು ಜನರ ಊಟವನ್ನು ಒಬ್ಬನೇ ಸೇವಿಸಬಲ್ಲವನಾಗಿದ್ದ. ಯಾವಾಗಲೂ ಆಹಾರದ ಬಗ್ಗೆಯೇ ಮಾತನಾಡುತ್ತಿದ್ದ. ಪಾಜಿ! ನಾನು ಇದನ್ನು ಆರ್ಡರ್ ಮಾಡಲಾ? ಎಂದು ಪ್ರಶ್ನಿಸುತ್ತಿದ್ದ ಆತ, ಆಹಾರದ ವ್ಯಾಮೋಹಿಯಾಗಿದ್ದ" ಎಂದು ಅವರು ಹೇಳಿದ್ದಾರೆ.

"ನಾನು ಆತನಲ್ಲಿ ಬದಲಾವಣೆಗಳನ್ನು ಗಮನಿಸಿದಾಗ, "ಇಷ್ಟೊಂದು ನಿಯಂತ್ರಣವೆ?" ಎಂದು ಆತನನ್ನು ಪ್ರಶ್ನಿಸಿದ್ದೆ.‌ ಆತ ನಿರ್ದಿಷ್ಟ ಆಹಾರವನ್ನು, ನಿರ್ದಿಷ್ಟ ಪ್ರಮಾಣದಲ್ಲಿ ಹಾಗೂ ಅದಕ್ಕಿಂತ ಹೆಚ್ಚಿಲ್ಲದೆ ಸರಿಯಾದ ಸಮಯಕ್ಕೆ ಸೇವಿಸುತ್ತಿದ್ದ. ಆತ ತನ್ನೊಳಗೆ ಶಿಸ್ತು ರೂಢಿಸಿಕೊಂಡಿದ್ದ. ಆತ ನನ್ನಲ್ಲೂ ಶಿಸ್ತು ಮೂಡಿಸಲು ಯತ್ನಿಸಿದ. ಆ ಎರಡು ವರ್ಷ ನನ್ನ ಪಾಲಿಗೆ ತುಂಬಾ ಚೆನ್ನಾಗಿತ್ತು ಹಾಗೂ ನಾನು ವಿರಾಟ್ ಕೊಹ್ಲಿಯ ಕಾರಣಕ್ಕೆ ದೈಹಿಕ ಸಾಮರ್ಥ್ಯದಲ್ಲಿ ಉತ್ತುಂಗಕ್ಕೆ ತಲುಪಿದೆ. ಆತ ನನ್ನನ್ನು ಜಿಮ್‌ಗೆ ಕರೆದೊಯ್ಯಲು ಪ್ರಾರಂಭಿಸಿದ. ನಾನು ಆತನನ್ನು ಫಿಟ್ನೆಸ್ ಗುರು ಎಂದು ಕರೆಯುತ್ತೇನೆ. ಭಾರತ ತಂಡದಲ್ಲಿ ಫಿಟ್ನೆಸ್ ಮಾದರಿಯನ್ನು ಮುಂದಿಟ್ಟಿರುವ ವ್ಯಕ್ತಿ ವಿರಾಟ್ ಕೊಹ್ಲಿ" ಎಂದು ಸ್ಮರಿಸಿಕೊಂಡಿದ್ದಾರೆ.

ಐಪಿಎಲ್ 2024 ಮಾರ್ಚ್ 22ರಿಂದ ಪ್ರಾರಂಭಗೊಳ್ಳಲಿದ್ದು, ವಿರಾಟ್ ಕೊಹ್ಲಿ ಎಂದಿನಂತೆ ಆರ್‌ಸಿಬಿ ತಂಡವನ್ನು ಪ್ರತಿನಿಧಿಸುತ್ತಿದ್ದರೆ, ಹರ್ಭಜನ್ ಸಿಂಗ್ ವೀಕ್ಷಕ ವಿವರಣೆಗಾರರಾಗಿ ಈ ಕ್ರೀಡಾಕೂಟದಲ್ಲಿ ಭಾಗಿಯಾಗಲಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News