ವಿದಾಯದ ವಿಶ್ವಕಪ್‌ಗೆ ಸಜ್ಜಾಗಿರುವ ಆಟಗಾರರು

Update: 2023-10-02 16:59 GMT

ಹೊಸದಿಲ್ಲಿ : ಭಾರತದ ಸಂಪೂರ್ಣ ಆತಿಥ್ಯದಲ್ಲಿ ಇದೇ ಮೊದಲ ಬಾರಿ ನಡೆಯುತ್ತಿರುವ ಏಕದಿನ ವಿಶ್ವಕಪ್ ಆರಂಭಕ್ಕೆ ಇನ್ನು ಬೆರಳೆಣಿಕೆಯ ದಿನಗಳಿವೆ. ಭಾರತವು ಜಾಗತಿಕ ಕ್ರಿಕೆಟ್ ನಲ್ಲಿ ಮೂರನೇ ಬಾರಿ ವಿಶ್ವಕಪ್ ಗೆಲ್ಲುವ ಗುರಿ ಇಟ್ಟುಕೊಂಡಿದೆ. ಟೂರ್ನಿಯಲ್ಲಿ 10 ದೇಶಗಳು 10 ವಿವಿಧ ಸ್ಥಳಗಳಲ್ಲಿ 46 ದಿನಗಳ ಕಾಲ ಒಟ್ಟು 48 ಪಂದ್ಯಗಳನ್ನಾಡಲಿವೆ. ಅಹಮದಾಬಾದ್ ನಲ್ಲಿ ಗುರುವಾರ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ರನ್ನರ್ಸ್ ಅಪ್ ನ್ಯೂಝಿಲ್ಯಾಂಡ್ ಸೆಣಸಾಡಲಿವೆ. ಈ ಟೂರ್ನಿಯ ಮೂಲಕ ವಿದಾಯದ ವಿಶ್ವಕಪ್ ಆಡಲಿರುವ ಪ್ರಮುಖ ಆಟಗಾರರತ್ತ ಒಂದು ನೋಟ..

ಡೇವಿಡ್ ವಾರ್ನರ್: ಆಸ್ಟ್ರೇಲಿಯದ ಪ್ರಮುಖ ರನ್ ಸ್ಕೋರರ್ ಆಗಿರುವ ಡೇವಿಡ್ ವಾರ್ನರ್ 2015 ಹಾಗೂ 2019ರ ವಿಶ್ವಕಪ್ ಗಳಲ್ಲಿ ಆಸ್ಟ್ರೇಲಿಯವನ್ನು ಪ್ರತಿನಿಧಿಸಿದ್ದರು. 2019ರ ವಿಶ್ವಕಪ್ ನಲ್ಲಿ ಆಸ್ಟ್ರೇಲಿಯದ ಪರ ಗರಿಷ್ಠ ರನ್ ಗಳಿಸಿದ್ದರು. ರೋಹಿತ್ ಬಳಿಕ ಟೂರ್ನಿಯಲ್ಲಿ 2ನೇ ಗರಿಷ್ಠ ಸ್ಕೋರ್ ಗಳಿಸಿದ ಸಾಧನೆ ಮಾಡಿದ್ದರು. ತಾನು ನಿವೃತ್ತಿಯಾಗುವುದಾಗಿ ಈ ವರ್ಷಾರಂಭದಲ್ಲಿ ಸುಳಿವು ನೀಡಿದ್ದರು.

ರವಿಚಂದ್ರನ್ ಅಶ್ವಿನ್: ಆಲ್ ರೌಂಡರ್ ಅಕ್ಷರ್ ಪಟೇಲ್ ಗಾಯದ ಸಮಸ್ಯೆಯ ಕಾರಣಕ್ಕೆ ಅಲಭ್ಯರಾದ ಕಾರಣ ಅನಿರೀಕ್ಷಿತವಾಗಿ ರವಿಚಂದ್ರನ್ ಅಶ್ವಿನ್ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 3 ತಿಂಗಳ ಹಿಂದೆ ಅಶ್ವಿನ್ ವಿಶ್ವಕಪ್ ತಂಡದಲ್ಲಿರುತ್ತಾರೆಂದು ಯಾರೂ ಊಹಿಸಿಯೇ ಇರಲಿಲ್ಲ. ಅವರು ದೀರ್ಘ ಸಮಯದ ನಂತರ ಇತ್ತೀಚೆಗೆ ಆಸ್ಟ್ರೇಲಿಯ ವಿರುದ್ಧ ಏಕದಿನ ಸರಣಿಗೆ ಆಯ್ಕೆಯಾಗಿದ್ದರು. ಅಶ್ವಿನ್ 2011 ಹಾಗೂ 2015ರ ವಿಶ್ವಕಪ್ ನ ಭಾಗವಾಗಿದ್ದಾರೆ. ಆದರೆ 2019ರ ವಿಶ್ವಕಪ್ ನಲ್ಲಿ ಆಡುವ ಅವಕಾಶ ಪಡೆದಿರಲಿಲ್ಲ. ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ವಿಶ್ವಕಪ್ ಅಭ್ಯಾಸಕ್ಕೆ ಮೊದಲು ತಾನು ಕೊನೆಯ ವಿಶ್ವಕಪ್ ಆಡುತ್ತಿರುವುದಾಗಿ ಸುಳಿವು ನೀಡಿದ್ದರು.

ಶಾಕಿಬ್ ಅಲ್ ಹಸನ್: ಬಾಂಗ್ಲಾದೇಶದ ನಾಯಕ ಶಾಕಿಬ್ ಅಲ್ ಹಸನ್ 2023ರಲ್ಲಿ ಐದನೇ ವಿಶ್ವಕಪ್ ಆಡಲಿದ್ದಾರೆ. 2007, 2011, 2015 ಹಾಗೂ 2019ರ ವಿಶ್ವಕಪ್ ಗಳಲ್ಲಿ ಶಾಕಿಬ್ ಭಾಗವಹಿಸಿದ್ದರು. 2011ರ ವಿಶ್ವಕಪ್ ನಲ್ಲಿ ತಂಡವನ್ನು ಮುನ್ನಡೆಸಿದ್ದ ಶಾಕಿಬ್ 2023ರಲ್ಲಿ ಮತ್ತೊಮ್ಮೆ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿರುವ ಏಕೈಕ ಆಟಗಾರನಾಗಿದ್ದಾರೆ. ಶಾಕಿಬ್ ಇತ್ತೀಚೆಗಷ್ಟೇ ನಿವೃತ್ತಿಯ ಸುಳಿವು ನೀಡಿದ್ದಾರೆ.

ಬೆನ್ ಸ್ಟೋಕ್ಸ್: 2019ರ ವಿಶ್ವಕಪ್ ಫೈನಲ್ ನ ಹೀರೊ ಬೆನ್ ಸ್ಟೋಕ್ಸ್ ಇಂಗ್ಲೆಂಡ್ ತಂಡ ಚೊಚ್ಚಲ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಸ್ಟೋಕ್ಸ್ ವಿಶ್ವಕಪ್ ಗೋಸ್ಕರ ಇಂಗ್ಲೆಂಡ್ ಕ್ರಿಕೆಟ್ ತಂಡದ ಕೋರಿಕೆಯ ಮೇರೆಗೆ ಕ್ರಿಕೆಟ್ ನಿಂದ ನಿವೃತ್ತಿಯಾಗುವ ನಿರ್ಧಾರದಿಂದ ಹೊರ ಬಂದಿದ್ದರು. ಸ್ಟೋಕ್ಸ್ ಈ ವರ್ಷದ ವಿಶ್ವಕಪ್ ನಂತರ ಮತ್ತೊಮ್ಮೆ ನಿವೃತ್ತಿಯಾಗುವ ಸಾಧ್ಯತೆಯಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News