ರೋಹನ್ ಬೋಪಣ್ಣರನ್ನು ಅಭಿನಂದಿಸಿದ ರಫೇಲ್ ನಡಾಲ್
ಬಾರ್ಸಿಲೋನ: ಮ್ಯಾಥ್ಯೂ ಎಬ್ಡೆನ್ ಜೊತೆಗೆ ಆಸ್ಟ್ರೇಲಿಯನ್ ಓಪನ್ ಪುರುಷರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದಿರುವ ರೋಹನ್ ಬೋಪಣ್ಣರನ್ನು ಖ್ಯಾತ ಟೆನಿಸ್ ಆಟಗಾರ ರಫೇಲ್ ನಡಾಲ್ ಅಭಿನಂದಿಸಿದ್ದಾರೆ.
ಬೋಪಣ್ಣ ಕಳೆದ ವಾರ ತನ್ನ ಚೊಚ್ಚಲ ಪುರುಷರ ಡಬಲ್ಸ್ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅದೂ ಅಲ್ಲದೆ, ಈ ಸಾಧನೆಗೈದ ಅತಿ ಹಿರಿಯ ಆಟಗಾರನಾಗಿಯೂ ಅವರು ದಾಖಲೆ ನಿರ್ಮಿಸಿದ್ದಾರೆ.
ನಡಾಲ್ ಇನ್ಸ್ಟಾಗ್ರಾಮ್ನಲ್ಲಿ 43 ವರ್ಷದ ರೋಹನ್ ಬೋಪಣ್ಣರನ್ನು ಅಭಿನಂದಿಸಿದ್ದಾರೆ. ‘‘ಅದ್ಭುತ ಹಾಗೂ ವಿಶಿಷ್ಟ ಸಾಧನೆಗೈದಿರುವ ರೋಹನ್ ಗೆ ಅಭಿನಂದನೆಗಳು’’ ಎಂಬುದಾಗಿ ಅವರು ಬರೆದಿದ್ದಾರೆ.
ಶನಿವಾರ ನಡೆದ ಪುರುಷರ ಡಬಲ್ಸ್ ಫೈನಲ್ನಲ್ಲಿ, ಬೋಪಣ್ಣ ಮತ್ತು ಮ್ಯಾಥ್ಯೂ ಎಬ್ಡೆನ್ ಒಂದು ಗಂಟೆ 40 ನಿಮಿಷಗಳ ಕಾಲ ಟೆನಿಸ್ ಅಂಗಣದಲ್ಲಿ ಪ್ರಾಬಲ್ಯ ಸಾಧಿಸಿ ಇಟಲಿಯ ಸಿಮೋನ್ ಬೊಲೇಲಿ ಮತ್ತು ಆ್ಯಂಡ್ರೀ ವವಸೋರಿ ಜೋಡಿಯನ್ನು 7-6, 7-5 ನೇರ ಸೆಟ್ಗಳಿಂದ ಸೋಲಿಸಿದರು.
ತನ್ನ 17ನೇ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಾ ಬೋಪಣ್ಣ ಈ ಸಾಧನೆ ಮಾಡಿದ್ದಾರೆ.
ಗ್ರ್ಯಾನ್ ಸ್ಲಾಮ್ ಪಂದ್ಯವೊಂದರಲ್ಲಿ ಪುರುಷರ ಡಬಲ್ಸ್ನಲ್ಲಿ ಪ್ರಶಸ್ತಿ ಗೆದ್ದ ಮೂರನೇ ಭಾರತೀಯ ಆಟಗಾರ ಬೋಪಣ್ಣ ಆದರು. ಇದಕ್ಕೂ ಮುನ್ನ ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಈ ಸಾಧನೆ ಮಾಡಿದ್ದಾರೆ.
ಇದು ಬೋಪಣ್ಣರ ಎರಡನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯಾಗಿದೆ. ಇದಕ್ಕೂ ಮುನ್ನ ಅವರು 2017ರ ಫ್ರೆಂಚ್ ಓಪನ್ನಲ್ಲಿ ಮಿಶ್ರ ಡಬಲ್ಸ್ನಲ್ಲಿ ಕೆನಡದ ಗ್ಯಾಬ್ರಿಯೇಲಾ ಡಬ್ರೊವಸ್ಕಿ ಜೊತೆಗೆ ಪ್ರಶಸ್ತಿ ಗೆದ್ದಿದ್ದರು.