ರೋಹನ್ ಬೋಪಣ್ಣ ಸೆಮಿ ಫೈನಲ್ ಗೆ: ಡಬಲ್ಸ್ ನಲ್ಲಿ ವಿಶ್ವದ ನಂ.1 ಸ್ಥಾನ ಖಚಿತ

Update: 2024-01-24 16:25 GMT

ರೋಹನ್ ಬೋಪಣ್ಣ | Photo : NDTV  

ಮೆಲ್ಬರ್ನ್: ಭಾರತದ ಹಿರಿಯ ಟೆನಿಸ್ ಸ್ಟಾರ್ ರೋಹನ್ ಬೋಪಣ್ಣ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಆಸ್ಟ್ರೇಲಿಯದ ಜೊತೆಗಾರ ಮ್ಯಾಥ್ಯೂ ಎಬ್ಡೆನ್ ಜೊತೆಗೂಡಿ ಪುರುಷರ ಡಬಲ್ಸ್ ವಿಭಾಗದಲ್ಲಿ ಸೆಮಿ ಫೈನಲ್ ಗೆ ಪ್ರವೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪುರುಷರ ಡಬಲ್ಸ್ ನಲ್ಲಿ ವಿಶ್ವದ ನಂ.1 ರ್ಯಾಂ ಕ್ ತಲುಪಿದ ಅತ್ಯಂತ ಹಿರಿಯ ಆಟಗಾರನಾಗಿ ಇತಿಹಾಸ ನಿರ್ಮಿಸುವುದಕ್ಕೆ ಸಜ್ಜಾಗಿದ್ದಾರೆ. ಈ ಕುರಿತು ಸೋಮವಾರ ಅಧಿಕೃತ ಪ್ರಕಟನೆ ಹೊರಬರಲಿದೆ.

43ರ ಹರೆಯದ ಬೋಪಣ್ಣ ಹಾಗೂ ಎಬ್ಡೆನ್ ಬುಧವಾರ ನಡೆದ ಪುರುಷರ ಡಬಲ್ಸ್ ಕ್ವಾರ್ಟರ್ ಫೈನಲ್ ನಲ್ಲಿ ಆರನೇ ಶ್ರೇಯಾಂಕದ ಅರ್ಜೆಂಟೀನದ ಜೋಡಿ ಮ್ಯಾಕ್ಸಿಮೊ ಗೊಂಝಾಲೆಝ್ ಹಾಗೂ ಆಂಡ್ರೆಸ್ ಮೊಲ್ಟೆನಿ ಅವರನ್ನು 6-4, 7-(5) ಸೆಟ್ ಗಳ ಅಂತರದಿಂದ ಮಣಿಸಿದರು.

ವಿಶ್ವದ ನಂ.3ನೇ ರ್ಯಾಂ ಕಿನ ಆಟಗಾರನಾಗಿ ಟೂರ್ನಮೆಂಟ್ ಪ್ರವೇಶಿಸಿದ್ದ ಬೋಪಣ್ಣ ಹಾಗೂ ಎಬ್ಡೆನ್ ಸೆಮಿ ಫೈನಲ್ ನಲ್ಲಿ ಶ್ರೇಯಾಂಕರಹಿತ ಜೋಡಿ ಥಾಮಸ್ ಮಾಚಾಕ್ ಹಾಗೂ ಝಿಚೆನ್ ಝಾಂಗ್ರನ್ನು ಎದುರಿಸಲಿದ್ದಾರೆ.

ಪುರುಷರ ಡಬಲ್ಸ್ ನಲ್ಲಿ ವಿಶ್ವದ ನಂ.1 ರ್ಯಾಂ ಕ್ ಗೆ ಏರಲಿರುವ ಬೋಪಣ್ಣ ಅಮೆರಿಕದ ರಾಜೀವ್ ರಾಮ್ ನಿರ್ಮಿಸಿರುವ ದಾಖಲೆಯನ್ನು ಮುರಿಯಲಿದ್ದಾರೆ. ರಾಮ್ ತನ್ನ 38ನೇ ವಯಸ್ಸಿನಲ್ಲಿ 2022ರ ಅಕ್ಟೋಬರ್ ನಲ್ಲಿ ಡಬಲ್ಸ್ ವಿಭಾಗದ ರ್ಯಾಂಕಿಂಗ್ನಲ್ಲಿ ನಂ.1 ಸ್ಥಾನಕ್ಕೇರಿದ್ದರು.

ಟೂರ್ನಮೆಂಟ್ ಮುಕ್ತಾಯದ ನಂತರ ಸೋಮವಾರ ಬೋಪಣ್ಣ ಅವರು ವಿಶ್ವದ ನಂ.1 ಡಬಲ್ಸ್ ಆಟಗಾರನಾಗಿ ಹೊರಹೊಮ್ಮಲಿದ್ದಾರೆ.

ಬೋಪಣ್ಣ 2013ರಲ್ಲಿ ವೃತ್ತಿಜೀವನದಲ್ಲಿ ಮೊದಲ ಬಾರಿ ವಿಶ್ವ ರ್ಯಾಂ ಕಿಂಗ್ ನಲ್ಲಿ 3ನೇ ಸ್ಥಾನಕ್ಕೇರಿದ್ದರು. ಇದೀಗ ಭಾರತದ ಟೆನಿಸ್ ಆಟಗಾರರಾದ ಲಿಯಾಂಡರ್ ಪೇಸ್, ಮಹೇಶ್ ಭೂಪತಿ ಹಾಗೂ ಸಾನಿಯಾ ಮಿರ್ಝಾ ಅವರನ್ನೊಳಗೊಂಡ ಎಲೈಟ್ ಕ್ಲಬ್ ಗೆ ಸೇರಲು ಸಜ್ಜಾಗಿದ್ದಾರೆ. ಇವರೆಲ್ಲರೂ ಈ ಹಿಂದೆ ಡಬಲ್ಸ್ ನಲ್ಲಿ ವಿಶ್ವದ ನಂ.1 ಆಟಗಾರರಾಗಿದ್ದರು.

ಬೋಪಣ್ಣ ಅವರು ಅಮೆರಿಕದ ಆಸ್ಟಿನ್ ಕ್ರಾಜಿಸೆಕ್ರಿಂದ ಅಗ್ರ ಸ್ಥಾನ ಪಡೆಯಲಿದ್ದಾರೆ. ಕ್ರಾಜಿಸೆಕ್ ಅವರು ಕ್ರೊಯೇಶಿಯದ ಜೊತೆಗಾರ ಇವಾನ್ ಡೊಡಿಗ್ರೊಂದಿಗೆ ಟೂರ್ನಮೆಂಟ್ ನ ದ್ವಿತೀಯ ಸುತ್ತಿನಲ್ಲಿ ಸೋತು ಹೊರ ನಡೆದಿದ್ದಾರೆ.

ಕೊಡಗಿನ ಕುವರ ಬೋಪಣ್ಣ 2017ರಲ್ಲಿ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಮಿಕ್ಸೆಡ್ ಡಬಲ್ಸ್ ಪ್ರಶಸ್ತಿ ಜಯಿಸಿದ್ದರು. ಆದರೆ ಪುರುಷರ ಡಬಲ್ಸ್ ಪ್ರಶಸ್ತಿಯನ್ನು ಈ ತನಕ ಗೆದ್ದುಕೊಂಡಿಲ್ಲ. ಕಳೆದ ವರ್ಷ ಯು.ಎಸ್. ಓಪನ್ ಟೂರ್ನಿಯಲ್ಲಿ ಫೈನಲ್ ತಲುಪಿದ ಹಿರಿಯ ಆಟಗಾರ ಎನಿಸಿಕೊಳ್ಳುವ ಮೂಲಕ ಬೋಪಣ್ಣ ಇತಿಹಾಸ ಬರೆದಿದ್ದರು.

ಮಾಸ್ಟರ್ಸ್ 1000 ಟೂರ್ನಿಯಲ್ಲಿ ಪುರುಷರ ಡಬಲ್ಸ್ ಪ್ರಶಸ್ತಿ ಜಯಿಸಿದ ಹಿರಿಯ ವಯಸ್ಸಿನ ಆಟಗಾರನೆಂಬ ದಾಖಲೆ ಬೋಪಣ್ಣ ಅವರ ಹೆಸರಲ್ಲಿದೆ. ಕಳೆದ ವರ್ಷ ಎಬ್ಡೆನ್ ಜೊತೆಗೂಡಿ ಪ್ರತಿಷ್ಠಿತ ಇಂಡಿಯನ್ ವೆಲ್ಸ್ ಟೂರ್ನಮೆಂಟ್ ಜಯಿಸುವ ಮೂಲಕ ಬೋಪಣ್ಣ ಈ ಸಾಧನೆ ಮಾಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News