ಸೌರಾಷ್ಟ್ರದ ಬ್ಯಾಟರ್ ಜಾಕ್ಸನ್ ವೃತ್ತಿಪರ ಕ್ರಿಕೆಟ್‌ನಿಂದ ನಿವೃತ್ತಿ

Update: 2025-02-11 20:51 IST
Saurashtra

PC : PTI 

  • whatsapp icon

ಹೊಸದಿಲ್ಲಿ: ಸೌರಾಷ್ಟ್ರದ ಬ್ಯಾಟಿಂಗ್ ದಿಗ್ಗಜ ಶೆಲ್ಡನ್ ಜಾಕ್ಸನ್ ಮಂಗಳವಾರ ತಮ್ಮ 15 ವರ್ಷಗಳ ವೃತ್ತಿಪರ ಕ್ರಿಕೆಟ್ ಜೀವನದಿಂದ ನಿವೃತ್ತಿ ಪ್ರಕಟಿಸಿದರು.

ಜಾಕ್ಸನ್ ಗುಜರಾತ್ ವಿರುದ್ಧ ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲ್‌ನಲ್ಲಿ ತನ್ನ ಕೊನೆಯ ಪಂದ್ಯ ಆಡಿದ್ದಾರೆ.

38ರ ಹರೆಯದ ಜಾಕ್ಸನ್ 105 ಪ್ರಥಮ ದರ್ಜೆ ಪಂದ್ಯಗಳಲ್ಲಿ 7,200 ರನ್ ಗಳಿಸಿದ್ದರು. ಇದರಲ್ಲಿ 12 ಶತಕಗಳು ಹಾಗೂ 39 ಅರ್ಧಶತಕಗಳಿದ್ದವು. 186 ಗರಿಷ್ಠ ವೈಯಕ್ತಿಕ ಮೊತ್ತವಾಗಿತ್ತು.

ಜಾಕ್ಸನ್ ದೇಶೀಯ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನದ ಮೂಲಕ ತನ್ನ ವೃತ್ತಿಜೀವನದುದ್ದಕ್ಕೂ 45ಕ್ಕೂ ಅಧಿಕ ಸರಾಸರಿಯನ್ನು ಕಾಯ್ದುಕೊಂಡಿದ್ದಾರೆ.

ಸೀಮಿತ ಓವರ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸೌರಾಷ್ಟ್ರದ ಪರ ವಿಕೆಟ್‌ಕೀಪರ್ ಕೂಡ ಆಗಿದ್ದರು. ತನ್ನ ಕೊನೆಯ ಪಂದ್ಯದಲ್ಲಿ ಜಾಕ್ಸನ್ ಅವರು 14 ಹಾಗೂ 27 ರನ್ ಗಳಿಸಿದ್ದರು. ಗುಜರಾತ್ ಈ ಪಂದ್ಯವನ್ನು ಇನಿಂಗ್ಸ್ ಹಾಗೂ 98 ರನ್‌ಗಳಿಂದ ಗೆದ್ದುಕೊಂಡಿದೆ.

ಬಂಗಾಳದ ಮಾಜಿ ಆಟಗಾರ ಜಯ್‌ದೀಪ್ ಮುಖರ್ಜಿಯ ಕಣ್ಣಿಗೆ ಬಿದ್ದ ಜಾಕ್ಸನ್ ಕೋಲ್ಕತಾ ನೈಟ್ ರೈಡರ್ಸ್‌ನ ಮೂಲಕ ತನ್ನ ವೃತ್ತಿಬದುಕು ಆರಂಭಿಸಿದರು. 2011ರಲ್ಲಿ ಸೌರಾಷ್ಟ್ರ ತಂಡದ ಪರ ಮೊದಲ ಪಂದ್ಯ ಆಡಿದ್ದರು. 2012-13ರ ರಣಜಿ ಋತುವಿನಲ್ಲಿ 4 ಅರ್ಧಶತಕ ಹಾಗೂ 3 ಶತಕಗಳನ್ನು ಗಳಿಸಿದ್ದರು. ಕರ್ನಾಟಕ ಹಾಗೂ ಪಂಜಾಬ್ ವಿರುದ್ದ ಕ್ವಾರ್ಟರ್ ಫೈನಲ್ ಹಾಗೂ ಸೆಮಿ ಫೈನಲ್‌ನಲ್ಲಿ ಶತಕ ಗಳಿಸಿದ್ದ ಜಾಕ್ಸನ್, ಸೌರಾಷ್ಟ್ರ ತಂಡವು ಮೊದಲ ಬಾರಿ ಫೈನಲ್ ತಲುಪುವಲ್ಲಿ ನೆರವಾಗಿದ್ದರು.

2015-16ರಲ್ಲಿ ಸೌರಾಷ್ಟ್ರ ತಂಡವು ತನ್ನ 2ನೇ ರಣಜಿ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಜಾಕ್ಸನ್ ಕಳೆದ ವರ್ಷ ಸೀಮಿತ ಓವರ್ ಕ್ರಿಕೆಟ್ ವೃತ್ತಿಜೀವನಕ್ಕೆ ತೆರೆ ಎಳೆದಿದ್ದರು. 84 ಇನಿಂಗ್ಸ್‌ಗಳಲ್ಲಿ 9 ಶತಕ ಹಾಗೂ 14 ಅರ್ಧಶತಕಗಳ ಸಹಿತ 2,792 ರನ್ ಗಳಿಸಿದ್ದರು. 2022ರ ವಿಜಯ್ ಹಝಾರೆ ಟ್ರೋಫಿಯಲ್ಲಿ ಔಟಾಗದೆ 133 ರನ್ ಗಳಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News