ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿ : ಕ್ಲೀನ್‌ಸ್ವೀಪ್ ಸಾಧಿಸಿದ ಭಾರತ

Update: 2024-10-01 15:31 GMT

PC : PTI 

ಕಾನ್ಪುರ : ರವಿಚಂದ್ರನ್ ಅಶ್ವಿನ್(3-50), ಜಸ್‌ಪ್ರಿತ್ ಬುಮ್ರಾ(3-17) ಹಾಗೂ ರವೀಂದ್ರ ಜಡೇಜ(3-34) ಅವರ ಸಂಘಟಿತ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ಕ್ರಿಕೆಟ್ ತಂಡ ಬಾಂಗ್ಲಾದೇಶ ವಿರುದ್ಧದ 2ನೇ ಟೆಸ್ಟ್ ಪಂದ್ಯವನ್ನು 7 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ ಸ್ವದೇಶದಲ್ಲಿ ದಾಖಲೆಯ 18ನೇ ಸರಣಿಯನ್ನು ಜಯಿಸಿ ತನ್ನ ಶ್ರೇಷ್ಠ ಪ್ರದರ್ಶನ ಮುಂದುವರಿಸಿದೆ.

ಎರಡು ದಿನಗಳ ಆಟವು ಸಂಪೂರ್ಣ ಮಳೆಗಾಹುತಿಯಾದ ನಂತರ 200ಕ್ಕೂ ಅಧಿಕ ಓವರ್‌ಗಳು ನಷ್ಟವಾದ ಹೊರತಾಗಿಯೂ ಭಾರತೀಯ ಕ್ರಿಕೆಟ್ ತಂಡ ಅಮೋಘ ಪ್ರದರ್ಶನ ನೀಡಿ ಗೆಲುವು ತನ್ನದಾಗಿಸಿಕೊಂಡಿದೆ.

ಭರ್ಜರಿ ಗೆಲುವು ದಾಖಲಿಸಿರುವ ರೋಹಿತ್ ಬಳಗ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಪಟ್ಟಿ(ಡಬ್ಲ್ಯುಟಿಸಿ)ಯಲ್ಲಿ 74.24 ಶೇ. ಅಂಕದೊಂದಿಗೆ ಅಗ್ರ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

ಪಂದ್ಯವನ್ನು ಡ್ರಾನಲ್ಲಿ ಕೊನೆಗೊಳಿಸಲು ಬಾಂಗ್ಲಾದೇಶವು 5ನೇ ಹಾಗೂ ಕೊನೆಯ ದಿನವಾದ ಮಂಗಳವಾರ ತೀವ್ರ ಪ್ರತಿ ಹೋರಾಟ ನೀಡುವ ಅಗತ್ಯವಿತ್ತು. 2 ವಿಕೆಟ್ ನಷ್ಟಕ್ಕೆ 26 ರನ್‌ನಿಂದ ತನ್ನ 2ನೇ ಇನಿಂಗ್ಸ್ ಮುಂದುವರಿಸಿದ ಬಾಂಗ್ಲಾದೇಶ 146 ರನ್‌ಗೆ ಸರ್ವಪತನ ಕಂಡಿತು. ಬುಮ್ರಾ(10 ಓವರ್‌ಗಳಲ್ಲಿ 3-17), ಅಶ್ವಿನ್(15 ಓವರ್‌ಗಳಲ್ಲಿ 3-50) ಹಾಗೂ ಜಡೇಜ(10 ಓವರ್‌ಗಳಲ್ಲಿ 3-34)ಬಾಂಗ್ಲಾದೇಶದ ಬ್ಯಾಟರ್‌ಗಳಿಗೆ ಸಿಂಹಸ್ವಪ್ನರಾದರು.

ಗೆಲ್ಲಲು 95 ರನ್ ಗುರಿ ಪಡೆದ ಭಾರತವು 17.2 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 98 ರನ್ ಗಳಿಸಿತು. ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಪಂದ್ಯದಲ್ಲಿ ಸತತ ಎರಡನೇ ಅರ್ಧಶತಕವನ್ನು(51 ರನ್, 45 ಎಸೆತ, 8 ಬೌಂಡರಿ, 1 ಸಿಕ್ಸರ್)ಗಳಿಸುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಬಾಂಗ್ಲಾದೇಶದ ಪರ 2ನೇ ಇನಿಂಗ್ಸ್‌ನಲ್ಲಿ ಆರಂಭಿಕ ಆಟಗಾರ ಶಾದ್‌ಮಾನ್ ಇಸ್ಲಾಮ್(50 ರನ್)ಹಾಗೂ ಮಾಜಿ ನಾಯಕ ಮುಶ್ಫಿಕುರ್ರಹೀಂ(37 ರನ್)ಒಂದಷ್ಟು ಪ್ರತಿರೋಧ ಒಡ್ಡಿದರು. ಆದರೆ ಉಳಿದ ಆಟಗಾರರು ಭಾರತದ ಬೌಲರ್‌ಗಳ ಒತ್ತಡವನ್ನು ಎದುರಿಸಲಾಗದೆ ಕಳಪೆ ಬ್ಯಾಟಿಂಗ್ ಮಾಡಿದರು.

ಬಾಂಗ್ಲಾದೇಶದ ನಾಯಕ ನಜ್ಮುಲ್ ಹುಸೈನ್ ಶಾಂಟೊ(19 ರನ್)ರವೀಂದ್ರ ಜಡೇಜಗೆ ಕ್ಲೀನ್‌ಬೌಲ್ಡ್ ಆಗಿ ಭಾರೀ ನಿರಾಸೆಗೊಳಿಸಿದರು.

ಅಶ್ವಿನ್ ಅವರು ಮೊದಲ ಇನಿಂಗ್ಸ್‌ನ ಶತಕವೀರ ಮೂಮಿನುಲ್ ಹಕ್(2 ರನ್)ವಿಕೆಟನ್ನು ಬೇಗನೆ ಉರುಳಿಸಿದರು. ಜಡೇಜ ಶ್ರೇಷ್ಠ ಪ್ರದರ್ಶನದ ಮೂಲಕ ಬಾಂಗ್ಲಾದೇಶದ ಮಧ್ಯಮ ಸರದಿಗೆ ಸವಾಲಾದರು. ಬುಮ್ರಾ ಅವರು ಮೂರು ವಿಕೆಟ್‌ಗಳನ್ನು ಪಡೆದು ಭಾರತದ ಗೆಲುವಿಗೆ ಕೊಡುಗೆ ನೀಡಿದರು.

ಮೊದಲ ಇನಿಂಗ್ಸ್‌ನಲ್ಲಿ 52 ರನ್ ಮುನ್ನಡೆ ಪಡೆದಿದ್ದ ಟೀಮ್ ಇಂಡಿಯಾವು ರನ್ ಚೇಸ್ ವೇಳೆ ರೋಹಿತ್ ಶರ್ಮಾ(8 ರನ್)ಹಾಗೂ ಶುಭಮನ್ ಗಿಲ್(6 ರನ್)ರನ್ನು ಆಫ್ ಸ್ಪಿನ್ನರ್ ಮೆಹದಿ ಹಸನ್‌ಗೆ ಕಳೆದುಕೊಂಡಿದ್ದರೂ 17.2 ಓವರ್‌ಗಳಲ್ಲಿ ಗೆಲುವಿನ ರನ್ ಗಳಿಸಿತು.

ಜೈಸ್ವಾಲ್ ಹಾಗೂ ವಿರಾಟ್ ಕೊಹ್ಲಿ (ಔಟಾಗದೆ 29)ಮೂರನೇ ವಿಕೆಟ್‌ಗೆ 58 ರನ್ ಜೊತೆಯಾಟ ನಡೆಸಿ ಗೆಲುವು ಖಚಿತಪಡಿಸಿದರು.

ಪ್ರಬುದ್ಧತೆಯಿಂದ ಬ್ಯಾಟಿಂಗ್ ಮಾಡಿದ ಜೈಸ್ವಾಲ್ ಸತತ ಎರಡನೇ ಅರ್ಧಶತಕ ಗಳಿಸಿದರು. ಗೆಲ್ಲಲು 3 ರನ್ ಅಗತ್ಯವಿದ್ದಾಗ ಜೈಸ್ವಾಲ್ ಅವರು ತೈಜುಲ್ ಇಸ್ಲಾಮ್‌ಗೆ ವಿಕೆಟ್ ಒಪ್ಪಿಸಿದರು. ತೈಜುಲ್ ಎಸೆತವನ್ನು ಬೌಂಡರಿ ಗೆರೆ ದಾಟಿಸುವ ಮೂಲಕ ರಿಷಭ್ ಪಂತ್(4 ರನ್)ತನ್ನದೇ ಶೈಲಿಯಲ್ಲಿ ಪಂದ್ಯವನ್ನು ಕೊನೆಗೊಳಿಸಿದರು.

ಭಾರತವು ಟೆಸ್ಟ್ ಕ್ರಿಕೆಟ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಪಂದ್ಯವನ್ನು ಸೋತಿಲ್ಲ. ಎರಡು ಸಂಪೂರ್ಣ ದಿನದಾಟವು ಮಳೆಯಿಂದಾಗಿ ರದ್ದಾದ ನಂತರ ಭಾರತವು ಕೇವಲ ಆರು ಸೆಶನ್‌ನಲ್ಲಿ ಈ ಪಂದ್ಯವನ್ನು ಗೆದ್ದುಕೊಂಡಿದೆ.

ಬಾಂಗ್ಲಾದೇಶ ತಂಡವು ಮೊದಲ ಇನಿಂಗ್ಸ್‌ನಲ್ಲಿ ಔಟಾಗದೆ 107 ರನ್ ಗಳಿಸಿದ್ದ ಮೂಮಿನುಲ್ ಹಕ್ ವಿಕೆಟನ್ನು ಬೇಗನೆ ಕಳೆದುಕೊಂಡಿತು. ಶಾದ್‌ಮಾನ್ ಇಸ್ಲಾಮ್(50 ರನ್, 101 ಎಸೆತ, 10 ಬೌಂಡರಿ)ಹೋರಾಟಕಾರಿ ಇನಿಂಗ್ಸ್ ಆಡಿದರು. ಶಾದ್‌ಮಾನ್ ತನ್ನ ನಾಯಕ ನಜ್ಮುಲ್ ಹುಸೈನ್‌ರೊಂದಿಗೆ 4ನೇ ವಿಕೆಟ್‌ಗೆ 55 ರನ್ ಜೊತೆಯಾಟ ನಡೆಸಿದ್ದಾರೆ. ಆದರೆ ಹುಸೈನ್ ಕಳಪೆ ಹೊಡೆತಕ್ಕೆ ಕೈಹಾಕಿ ಕೈಸುಟ್ಟುಕೊಂಡರು. ಜಡೇಜರ ಬೌಲಿಂಗ್‌ನಲ್ಲಿ ರಿವರ್ಸ್ ಸ್ವೀಪ್‌ಗೆ ಮುಂದಾಗ ಹುಸೈನ್ ಕ್ಲೀನ್‌ಬೌಲ್ಡಾದರು. 2ನೇ ಇನಿಂಗ್ಸ್‌ನಲ್ಲಿ ಬಾಂಗ್ಲಾದೇಶದ ಪರ ಗರಿಷ್ಠ ಸ್ಕೋರ್ ಗಳಿಸಿದ ಶಾದ್‌ಮಾನ್(50 ರನ್)ವೇಗಿ ಆಕಾಶ್‌ದೀಪ್ ಬೌಲಿಂಗ್‌ನಲ್ಲಿ ಜೈಸ್ವಾಲ್‌ಗೆ ಕ್ಯಾಚ್ ನೀಡಿದರು.

ಶಾದ್‌ಮಾನ್ ಔಟಾದ ನಂತರ ಬಾಂಗ್ಲಾದೇಶದ ಬ್ಯಾಟಿಂಗ್ ಕುಸಿತ ಕಂಡಿತು. ಎಡಗೈ ಸ್ಪಿನ್ನರ್ ಜಡೇಜ ಅವರು ನಜ್ಮುಲ್ ಹುಸೈನ್, ಲಿಟನ್ ದಾಸ್(1ರನ್)ಹಾಗೂ ಶಾಕಿಬ್ ಅಲ್ ಹಸನ್(0)ವಿಕೆಟ್‌ಗಳನ್ನು ಉರುಳಿಸುವ ಮೂಲಕ ಬಾಂಗ್ಲಾದೇಶದ ಮಧ್ಯಮ ಸರದಿಯನ್ನು ಭೇದಿಸಿದರು.

ತನ್ನ ಕೊನೆಯ ಟೆಸ್ಟ್ ಇನಿಂಗ್ಸ್ ಆಡಿದ ಶಾಕಿಬ್ ರನ್‌ಖಾತೆ ತೆರೆಯುವ ಮೊದಲೇ ಜಡೇಜಗೆ ರಿಟರ್ನ್ ಕ್ಯಾಚ್ ನೀಡಿದರು. ಮಿರಾಝ್(9) ಹಾಗೂ ತೈಜುಲ್ ಇಸ್ಲಾಮ್(0)ವಿಕೆಟ್‌ಗಳನ್ನು ಉರುಳಿಸಿದ ಬುಮ್ರಾ ಅವರು ಬಾಂಗ್ಲಾದೇಶದ ಸಂಕಷ್ಟ ಹೆಚ್ಚಿಸಿದರು. ಮುಶ್ಫಿಕುರಹೀಂ(37ರನ್, 63 ಎಸೆತ)ವಿಕೆಟ್‌ನ್ನು ಪಡೆದ ಬುಮ್ರಾ ಬಾಂಗ್ಲಾದೇಶದ ಇನಿಂಗ್ಸ್‌ಗೆ ತೆರೆ ಎಳೆದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News