ಕೇರಳದಲ್ಲಿ ಸೌಹಾರ್ದ ಪಂದ್ಯವಾಡಲು ಬರಲಿದೆ ಅರ್ಜೆಂಟೀನ ಫುಟ್ಬಾಲ್ ತಂಡ!

Update: 2024-01-19 15:51 GMT

ಸಾಂದರ್ಭಿಕ ಚಿತ್ರ | Photo: X

ಕೊಚ್ಚಿ: ಅರ್ಜೆಂಟೀನ ಫುಟ್ಬಾಲ್ ಅಸೋಸಿಯೇಶನ್(ಎಎಫ್ಎ) ಕೇರಳದಲ್ಲಿ ಕೆಲವು ಸೌಹಾರ್ದ ಪಂದ್ಯಗಳನ್ನು ಆಡಲು ತನ್ನ ರಾಷ್ಟ್ರೀಯ ಫುಟ್ಬಾಲ್ ತಂಡವನ್ನು ಕಳುಹಿಸಿಕೊಡಲು ಆಸಕ್ತಿ ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ.

ಗುರುವಾರ ಎಎಫ್ಎ ಅಧಿಕಾರಿಗಳೊಂದಿಗೆ ಆನ್ಲೈನ್ ಸಭೆಯಲ್ಲಿ ಭಾಗವಹಿಸಿದ ನಂತರ ಮಾತನಾಡಿದ ರಾಜ್ಯ ಕ್ರೀಡಾ ಸಚಿವ ಅಬ್ದುರಹಿಮಾನ್, 2025ರ ಅಕ್ಟೋಬರ್ನಲ್ಲಿ ರಾಜ್ಯದಲ್ಲಿ ಅರ್ಜೆಂಟೀನ ಪಂದ್ಯಗಳನ್ನು ಆಯೋಜಿಸುವ ಸಾಧ್ಯತೆಯ ಕುರಿತು ಚಿಂತಿಸುತ್ತಿದ್ದೇವೆ ಎಂದರು.

ಈ ವರ್ಷ ಜೂನ್ ನಲ್ಲಿ ಪಂದ್ಯಗಳನ್ನು ಆಯೋಜಿಸುವುದು ಆರಂಭಿಕ ಯೋಜನೆಯಾಗಿದ್ದರೂ, ಮಳೆಗಾಲದ ಹಿನ್ನೆಲೆಯಲ್ಲಿ ಫುಟ್ಬಾಲ್ ಗೆ ಸಮಯ ಅನುಕೂಲಕರವಾಗಿಲ್ಲದ ಕಾರಣ ಅದನ್ನು ಮುಂದೂಡಬೇಕಾಗಿದೆ ಎಂದು ಸಚಿವರು ಹೇಳಿದರು.

ಈ ಸೌಹಾರ್ದ ಪಂದ್ಯ ಆಯೋಜನೆ ಸುಲಭವಲ್ಲ. ಆದರೆ ಇದು ಕೇರಳದ ಫುಟ್ಬಾಲ್ ಪ್ರೇಮಿಗಳಿಗೆ ಉತ್ತಮ ಕೊಡುಗೆಯಾಗಲಿದೆ. ಕೇರಳದಲ್ಲಿ ಅರ್ಜೆಂಟೀನ ತಂಡ ಆಡುವುದನ್ನು ನೋಡಲು ನಮ್ಮ ಜನರು ತೋರುತ್ತಿರುವ ಉತ್ಸಾಹ ನಮ್ಮನ್ನು ಈ ನಿಟ್ಟಿನಲ್ಲಿ ಮುನ್ನಡೆಯಲು ಪ್ರೇರೇಪಿಸುತ್ತಿದೆ ಎಂದು ಸಚಿವರು ಹೇಳಿದ್ದಾರೆ.

ತಮ್ಮ ರಾಷ್ಟ್ರೀಯ ತಂಡದ ಎದುರು ಆಡಬಹುದಾದ ಎದುರಾಳಿಗಳ ಪಟ್ಟಿಯನ್ನು ನೀಡುವಂತೆ ಎಎಫ್ಎ ಅಧಿಕಾರಿಗಳು ರಾಜ್ಯ ಸರಕಾರವನ್ನು ಕೇಳಿದ್ದಾರೆ. ಪಟ್ಟಿಯನ್ನು ಸಲ್ಲಿಸಿದ ನಂತರ ಎಎಫ್ಎ ತನ್ನ ಪ್ರತಿಸ್ಪರ್ಧಿಗಳನ್ನು ಆಯ್ಕೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

ಅರ್ಜೆಂಟೀನ ತಂಡ ಹಾಗೂ ಅದರ ಪ್ರತಿಸ್ಪರ್ಧಿಗಳ ವೆಚ್ಚವನ್ನು ರಾಜ್ಯವು ಭರಿಸಬೇಕಾಗುತ್ತದೆ. ಒಂದು ವೇಳೆ ಅರ್ಜೆಂಟೀನ ತಂಡ ನಮ್ಮ ರಾಷ್ಟ್ರೀಯ ತಂಡದ ವಿರುದ್ದ ಆಡಲು ಒಪ್ಪಿದರೆ ಅದೊಂದು ದೊಡ್ಡ ಉತ್ತೇಜನವಾಗಲಿದೆ. ಆದರೆ, ತನ್ನ ಫಿಫಾ ಶ್ರೇಯಾಂಕಕ್ಕಿಂತ ಕೆಳಗಿರುವ ಭಾರತ ತಂಡದ ಎದುರು ಆಡಲು ವಿಶ್ವ ಚಾಂಪಿಯನ್ ತಂಡ ಒಪ್ಪಿಕೊಳ್ಳುವ ಸಾಧ್ಯತೆಯಿಲ್ಲ ಎಂದು ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News