ಎಪ್ರಿಲ್ ಅಂತ್ಯಕ್ಕೆ ಪಾಕಿಸ್ತಾನ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಯ್ಕೆ
ಕರಾಚಿ: ಈ ತಿಂಗಳಾಂತ್ಯದಲ್ಲಿ ಟೆಸ್ಟ್ ಹಾಗೂ ಸೀಮಿತ ಓವರ್ ಕ್ರಿಕೆಟಿಗೆ ನೂತನ ಕೋಚಿಂಗ್ ಸಿಬ್ಬಂದಿಯನ್ನು ನೇಮಿಸಲು ಪಾಕಿಸ್ತಾನ ಸಜ್ಜಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಅಧಿಕಾರಿಗಳು ಲಾಹೋರ್ನಲ್ಲಿ ತಿಳಿಸಿದ್ದಾರೆ.
ಎಪ್ರಿಲ್ 15ರ ಗಡುವಿನೊಳಗೆ ದಕ್ಷಿಣ ಆಫ್ರಿಕಾದಿಂದ ಗ್ಯಾರಿ ಕರ್ಸ್ಟನ್ ಹಾಗೂ ಆಸ್ಟ್ರೇಲಿಯದಿಂದ ಜೇಸನ್ ಗಿಲೆಸ್ಪಿ ಸೇರಿದಂತೆ ಪ್ರಮುಖ ಕೋಚ್ಗಳಿಂದ ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಪಿಸಿಬಿ ತಿಳಿಸಿದೆ.
ಕರ್ಸ್ಟನ್ ಹಾಗೂ ಗಿಲೆಸ್ಪಿ ಪ್ರಬಲ ಸ್ಪರ್ಧಿಗಳಾಗಿದ್ದು, ಇತರ ಅರ್ಜಿದಾರರನ್ನು ಕೋಚಿಂಗ್ ಹುದ್ದೆಗಳಿಗೆ ಪರಿಗಣಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಿಸಿಬಿಯ ನಿರ್ಧಾರ ಅತ್ಯಂತ ಮಹತ್ವದ್ದಾಗಿದ್ದು, ಇದು ಅಂತರ್ರಾಷ್ಟ್ರೀಯ ಕ್ರಿಕೆಟ್ ನಲ್ಲಿ ರಾಷ್ಟ್ರೀಯ ತಂಡದ ಪ್ರದರ್ಶನದ ಭವಿಷ್ಯವನ್ನು ರೂಪಿಸಲಿದೆ. ಪಾಕಿಸ್ತಾನದ ಮುಂಬರುವ ಕ್ರಿಕೆಟ್ ಸರಣಿಗೆ ಪಿಸಿಬಿಯ ಕೋಚ್ಗಳ ಆಯ್ಕೆಯು ಅತ್ಯಂತ ನಿರ್ಣಾಯಕವಾಗಿದೆ.
ಪಿಸಿಬಿ 2019ರಲ್ಲಿ ಕೋಚ್ ಗಳನ್ನು ಆಯ್ಕೆ ಮಾಡುವಾಗ ಸರಿಯಾದ ಪ್ರಕ್ರಿಯೆಯನ್ನು ಅನುಸರಿಸಿತ್ತು. ಆಗ ಮಿಸ್ಬಾವುಲ್ ಹಕ್ರನ್ನು ಪಾಕ್ ತಂಡದ ಮುಖ್ಯ ಕೋಚ್ ಹಾಗೂ ಆಯ್ಕೆ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸಲಾಗಿತ್ತು. ಆ ನಂತರದ ನೇಮಕಾತಿ ತಾತ್ಕಾಲಿಕವಾಗಿತ್ತು.
ಸಹಾಯಕ ಕೋಚ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಪಿಸಿಬಿ ಎಪ್ರಿಲ್ 20ರಂದು ಗಡುವು ನೀಡಿದೆ.
ಅಝರ್ ಮಹಮೂದ್ ಕೂಡ ಕೋಚ್ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ. ಪ್ರಸ್ತುತ ಅವರನ್ನು ನ್ಯೂಝಿಲ್ಯಾಂಡ್ ಸರಣಿಗೆ ಮುಖ್ಯ ಕೋಚ್ರನ್ನಾಗಿ ನೇಮಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.