ಆಟಗಾರರ ವಿಶ್ವಾಸದ ವಿಚಾರ | ಹಾರ್ದಿಕ್ ಪಾಂಡ್ಯಾಗಿಂತ ಸೂರ್ಯಕುಮಾರ್ ಪರ ಒಲವು

Update: 2024-07-19 16:00 GMT

ಹಾರ್ದಿಕ್ ಪಾಂಡ್ಯಾ, ಸೂರ್ಯಕುಮಾರ್| PC : PTI 

ಮುಂಬೈ : ಭಾರತೀಯ ಕ್ರಿಕೆಟ್ ತಂಡವು ಈ ತಿಂಗಳ ಕೊನೆಯಲ್ಲಿ ಆರಂಭಗೊಳ್ಳುವ ಪ್ರವಾಸದ ವೇಳೆ ಶ್ರೀಲಂಕಾ ವಿರುದ್ಧ ಟಿ20 ಮತ್ತು ಏಕದಿನ ಸರಣಿಗಳನ್ನು ಆಡಲಿದೆ. ಇದು ಭಾರತೀಯ ಕ್ರಿಕೆಟ್‌ನಲ್ಲಿ ನೂತನ ಅಧ್ಯಾಯವೊಂದರ ಆರಂಭವಾಗಿದೆ. ಈ ಸರಣಿಯೊಂದಿಗೆ, ನೂತನವಾಗಿ ನೇಮಕಗೊಂಡಿರುವ ತಂಡದ ನೂತನ ಪ್ರಧಾನ ಕೋಚ್‌ರ ಅವಧಿ ಆರಂಭಗೊಳ್ಳುತ್ತದೆ. ನೂತನ ಕೋಚ್‌ರ ಮಾರ್ಗದರ್ಶನದಲ್ಲಿ ಹೊಸ ಸಾಧನೆಗಳನ್ನು ಮಾಡುವುದನ್ನು ತಂಡವು ಎದುರು ನೋಡುತ್ತಿದೆ.

ಟಿ20 ಮತ್ತು ಏಕದಿನ ಸರಣಿಗಳಿಗೆ ಆಯ್ಕೆ ಮಾಡಲಾಗಿರುವ ತಂಡಗಳು ಅಚ್ಚರಿಗೆ ಕಾರಣವಾಗಿವೆ. ಅದರಲ್ಲೂ ಟಿ20 ತಂಡದ ನಾಯಕನ ಆಯ್ಕೆಯಂತೂ ದೊಡ್ಡ ಅಚ್ಚರಿಯಾಗಿದೆ. ಟಿ20 ವಿಶ್ವಕಪ್ 2024ರಲ್ಲಿ ಪ್ರಶಸ್ತಿ ಗೆದ್ದ ಬಳಿಕ, ರೋಹಿತ್ ಶರ್ಮ ಟಿ20 ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಟಿ20 ತಂಡದ ಉಪನಾಯಕನಾಗಿದ್ದ ಹಾರ್ದಿಕ್ ಪಾಂಡ್ಯರನ್ನು ನಾಯಕನಾಗಿ ಮಾಡಲಾಗುವುದು ಎಂಬುದಾಗಿ ವ್ಯಾಪಕವಾಗಿ ನಿರೀಕ್ಷಿಸಲಾಗಿತ್ತು.

ಆದರೆ, ಎಲ್ಲರ ನಿರೀಕ್ಷೆಗೆ ವ್ಯತಿರಿಕ್ತವಾಗಿ ಸೂರ್ಯಕುಮಾರ್ ಯಾದವ್‌ರನ್ನು ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಭಾರತೀಯ ತಂಡದ ನಾಯಕನಾಗಿ ನೇಮಿಸಲಾಗಿದೆ. ಪಾಂಡ್ಯರನ್ನು ಉಪನಾಯಕನಾಗಿಯೂ ಮಾಡಲಾಗಿಲ್ಲ. ನಾಯಕತ್ವದಿಂದ ಪಾಂಡ್ಯರನ್ನು ಹೊರಗಿಡಲು ಮುಖ್ಯ ಕಾರಣ ಅವರ ದೈಹಿಕ ಕ್ಷಮತೆ ಸಮಸ್ಯೆಗಳು ಎಂದು ಹೇಳಲಾಗಿದೆ. ಆದರೆ, ಆಟಗಾರರ ವಿಶ್ವಾಸದ ವಿಷಯ ಬಂದಾಗ ತಕ್ಕಡಿಯು ಸೂರ್ಯಕುಮಾರ್ ಯಾದವ್ ಪರ ವಾಲಿತು ಎಂಬುದಾಗಿ ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

ಆಟಗಾರರು ಪಾಂಡ್ಯಕ್ಕಿಂತಲೂ ಹೆಚ್ಚಾಗಿ ಸೂರ್ಯಕುಮಾರ್ ಯಾದವ್‌ರನ್ನು ನಂಬುತ್ತಾರೆ ಮತ್ತು ಅವರಡಿಯಲ್ಲಿ ಆರಾಮವಾಗಿ ಕೆಲಸ ಮಾಡುತ್ತಾರೆ ಎಂಬ ಮಾಹಿತಿಯು ಬಿಸಿಸಿಐಗೆ ಲಭಿಸಿದೆ ಎಂದು ವರದಿ ಹೇಳಿದೆ.

ಎರಡು ದಿನಗಳ ಅವಧಿಯಲ್ಲಿ ಹಲವು ಗಂಟೆಗಳ ಕಾಲ ನಡೆದ ಆಯ್ಕೆ ಸಮಿತಿ ಸಭೆಯು ಎಂದಿನಂತಿರಲಿಲ್ಲ ಎಂದು ‘ಇಂಡಿಯನ್ ಎಕ್ಸ್‌ಪ್ರೆಸ್’ ಹೇಳಿದೆ. ಸಭೆಯಲ್ಲಿ ಬಿಸಿ-ಬಿಸಿ ಚರ್ಚೆಗಳಾದವು ಮತ್ತು ಭಿನ್ನಾಭಿಪ್ರಾಯಗಳು ವ್ಯಕ್ತವಾದವು ಎಂದು ಅದು ಹೇಳಿದೆ. ಸಭೆಯು ಆಟಗಾರರಿಗೆ ಕರೆಗಳನ್ನು ನೀಡಿತು ಎನ್ನಲಾಗಿದೆ. ತಂಡಾಡಳಿತ ದೀರ್ಘಾವಧಿ ಯೋಜನೆಗಳ ಬಗ್ಗೆ ಆಟಗಾರರಿಗೆ ಮನವರಿಕೆ ಮಾಡಿಕೊಡಲಾಯಿತು ಎಂದು ವರದಿ ಹೇಳಿದೆ.

ಸೂರ್ಯಕುಮಾರ್ ಯಾದವ್‌ರ ಮನುಷ್ಯರನ್ನು ನಿಭಾಯಿಸುವ ಕಲೆಯು ಬಿಸಿಸಿಐ ಆಯ್ಕೆಗಾರರ ಮೇಲೆ ಪರಿಣಾಮ ಬೀರಿತು ಎನ್ನಲಾಗಿದೆ. ಕಳೆದ ವರ್ಷ ದಕ್ಷಿಣ ಆಫ್ರಿಕ ಪ್ರವಾಸದ ಅರ್ಧದಲ್ಲೇ ಭಾರತೀಯ ಶಿಬಿರದಿಂದ ಇಶಾನ್ ಕಿಶನ್ ಹೊರಬರುವುದರಲ್ಲಿದ್ದಾಗ, ಹಾಗೆ ಮಾಡದಂತೆ ಅವರಿಗೆ ಮನವರಿಕೆ ಮಾಡಲು ಯಾದವ್ ಪ್ರಯತ್ನಿಸಿದ್ದರು ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News