ವಿಶ್ವಕಪ್ ನಂತರ ಮೊದಲ ಬಾರಿ ಜರ್ಮನಿ ತಂಡಕ್ಕೆ ಥಾಮಸ್ ಮುಲ್ಲರ್ ವಾಪಸ್
ಬರ್ಲಿನ್: ಜರ್ಮನಿಯ ರಾಷ್ಟ್ರೀಯ ಫುಟ್ಬಾಲ್ ತಂಡದೊಂದಿಗೆ ಥಾಮಸ್ ಮುಲ್ಲರ್ ಅವರ ವೃತ್ತಿಬದುಕು ಇನ್ನೂ ಕೊನೆಗೊಂಡಿಲ್ಲ. ಕೋಚ್ ಹನ್ಸಿ ಫ್ಲಿಕ್ ಅವರು 9 ತಿಂಗಳ ನಂತರ ಇದೇ ಮೊದಲ ಬಾರಿ 33ರ ವಯಸ್ಸಿನ ಮುಲ್ಲರ್‌ರನ್ನು ತಂಡಕ್ಕೆ ಸೇರಿಸಿಕೊಂಡಿದ್ದಾರೆ.
ಮುಲ್ಲರ್ ಖತರ್ ವಿಶ್ವಕಪ್‌ನಲ್ಲಿ ಡಿ.1ರಂದು ಜರ್ಮನಿ ಪರ ಕೊನೆಯ ಪಂದ್ಯ ಆಡಿದ್ದರು. ಜರ್ಮನಿಯು ವಿಶ್ವಕಪ್‌ನಲ್ಲಿ ಗ್ರೂಪ್ ಹಂತ ದಾಟುವಲ್ಲಿ ವಿಫಲವಾಗಿತ್ತು.
ಜರ್ಮನಿ ಪರ 121 ಪಂದ್ಯಗಳನ್ನು ಆಡಿರುವ ಮುಲ್ಲರ್ ಇದು ನನ್ನ ಕೊನೆಯ ಅಂತರ್‌ರಾಷ್ಟ್ರೀಯ ಪಂದ್ಯವಾಗಿದೆ ಎಂದು ಈ ಹಿಂದೆ ಹೇಳಿದ್ದರು. ಭಾವುಕರಾಗಿ ನಾನು ಹಾಗೆ ಹೇಳಿದ್ದು ತಂಡದ ಆಯ್ಕೆಗೆ ಲಭ್ಯವಿರುವೆ ಎಂದು ಆನಂತರ ಸ್ಪಷ್ಟಪಡಿಸಿದ್ದರು. ಆದಾಗ್ಯೂ ಅವರಿಗೆ 5 ಸೌಹಾರ್ದ ಪಂದ್ಯಗಳಲ್ಲಿ ಅವಕಾಶ ಲಭಿಸಿರಲಿಲ್ಲ.
ಮುಲ್ಲರ್ ಇದೀಗ ನಿರ್ಣಾಯಕ ಸಮಯದಲ್ಲಿ ಜರ್ಮನಿ ತಂಡಕ್ಕೆ ವಾಪಸಾಗಿದ್ದಾರೆ.
ಜರ್ಮನಿ 2023ರಲ್ಲಿ ಆಡಿರುವ 5 ಪಂದ್ಯಗಳಲ್ಲಿ ಕೇವಲ 1ರಲ್ಲಿ ಜಯ ಸಾಧಿಸಿದೆ. ಶನಿವಾರ ಜಪಾನ್ ವಿರುದ್ಧ ಸೌಹಾರ್ದ ಪಂದ್ಯವನ್ನಾಡಲಿದೆ. ಜಪಾನ್ ವಿಶ್ವಕಪ್‌ನಲ್ಲಿ ಜರ್ಮನಿಯನ್ನು ಸೋಲಿಸಿ ಶಾಕ್ ನೀಡಿತ್ತು. ಸೆ.12ರಂದು ವಿಶ್ವಕಪ್‌ನ ರನ್ನರ್ಸ್ ಅಪ್ ಫ್ರಾನ್ಸ್ ತಂಡದ ವಿರುದ್ಧ ಜರ್ಮನಿ ಪಂದ್ಯವನ್ನಾಡಲಿದೆ.