ಟ್ವೆಂಟಿ-20 ವಿಶ್ವಕಪ್: ಭಾರತ ಆಟಗಾರರ ಮೊದಲ ಬ್ಯಾಚ್ ಅಮೆರಿಕಕ್ಕೆ ನಿರ್ಗಮನ
ಹೊಸದಿಲ್ಲಿ: ನಾಯಕ ರೋಹಿತ್ ಶರ್ಮಾ ಅವರನ್ನೊಳಗೊಂಡ ಭಾರತೀಯ ಕ್ರಿಕೆಟಿಗರ ಮೊದಲ ಬ್ಯಾಚ್ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾಗವಹಿಸಲು ಶನಿವಾರ ಅಮೆರಿಕಕ್ಕೆ ಪ್ರಯಾಣ ಬೆಳೆಸಿದೆ.
ರೋಹಿತ್‌ರಲ್ಲದೆ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ, ಅಗ್ರ ರ್ಯಾಂಕಿನ ಟಿ-20 ಬ್ಯಾಟರ್ ಸೂರ್ಯಕುಮಾರ್ ಯಾದವ್, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹಾಗೂ ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋರ್ ಸಹಿತ ಇನ್ನೂ ಕೆಲವು ಆಟಗಾರರು ಮುಂಬೈ ಏರ್‌ಪೋರ್ಟ್‌ನಿಂದ ನಿರ್ಗಮಿಸಿದರು.
ರವೀಂದ್ರ ಜಡೇಜ, ಶಿವಂ ದುಬೆ, ಮುಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್, ಖಲೀಲ್ ಅಹ್ಮದ್, ಕುಲದೀಪ್ ಯಾದವ್ ಹಾಗೂ ಅಕ್ಷರ್ ಪಟೇಲ್ ಕೂಡ ಅಮೆರಿಕಕ್ಕೆ ನಿರ್ಗಮಿಸಿದ್ದಾರೆ.
ಐಪಿಎಲ್ ಟೂರ್ನಿಯಲ್ಲಿ ಪ್ಲೇ ಆಫ್‌ಗೆ ತಲುಪಿದ್ದ ಆರ್‌ಸಿಬಿ ತಂಡವನ್ನು ಪ್ರತಿನಿಧಿಸಿರುವ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸಹಿತ ಕೆಲವು ಆಟಗಾರರು ಟಿ-20 ಕ್ರಿಕೆಟ್‌ನಲ್ಲಿ ಭಾಗಿಯಾಗಲು ಇನ್ನಷ್ಟೇ ತೆರಳಬೇಕಾಗಿದೆ.
ರಾಜಸ್ಥಾನ ರಾಯಲ್ಸ್ ತಂಡದ ಆಟಗಾರರಾದ ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ ಹಾಗೂ ಯಜುವೇಂದ್ರ ಚಹಾಲ್ ತಂಡವನ್ನು ಇನ್ನೂ ಸೇರಿಸಿಕೊಂಡಿಲ್ಲ.
ಈ ಬಾರಿಯ ವಿಶ್ವಕಪ್ ಟೂರ್ನಿಯು ಅಮೆರಿಕ ಹಾಗೂ ವೆಸ್ಟ್‌ಇಂಡೀಸ್‌ನ ಜಂಟಿ ಆತಿಥ್ಯದಲ್ಲಿ ಜೂನ್ 2ರಿಂದ 29ರ ತನಕ ನಡೆಯಲಿದೆ.
ಭಾರತೀಯ ಕ್ರಿಕೆಟ್ ತಂಡ ನ್ಯೂಯಾರ್ಕ್‌ನಲ್ಲಿ ಹೊಸತಾಗಿ ನಿರ್ಮಿಸಲ್ಪಟ್ಟ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ಜೂನ್ 5ರಂದು ಐರ್‌ಲ್ಯಾಂಡ್ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.
ಟೀಮ್ ಇಂಡಿಯಾವು ಜೂನ್ 9ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಆ ನಂತರ ಎ ಗುಂಪಿನಲ್ಲಿ ಸಹ ಆತಿಥ್ಯ ದೇಶವಾದ ಅಮೆರಿಕ(ಜೂನ್ 12) ಹಾಗೂ ಕೆನಡಾ(ಜೂನ್ 15) ತಂಡವನ್ನು ಎದುರಿಸಲಿದೆ.
ಭಾರತ ಕ್ರಿಕೆಟ್ ತಂಡವು 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಮೊದಲ ಆವೃತ್ತಿಯ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿತ್ತು.