ಯುಎಸ್ ಓಪನ್ | ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಗಾಗಿ ಸಬಲೆಂಕಾ, ಜೆಸ್ಸಿಕಾ ಹಣಾಹಣಿ

Update: 2024-09-06 15:15 GMT

ನ್ಯೂಯಾರ್ಕ್ : ವಿಶ್ವದ ನಂ.2ನೇ ಆಟಗಾರ್ತಿ ಆರ್ಯನಾ ಸಬಲೆಂಕಾ ಹಾಗೂ ಆರನೇ ರ್ಯಾಂ ಕಿನ ಜೆಸ್ಸಿಕಾ ಪೆಗುಲಾ ಯುಎಸ್ ಓಪನ್ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿಗಾಗಿ ಶನಿವಾರ ಹೋರಾಡಲಿದ್ದಾರೆ.

ದ್ವಿತೀಯ ಶ್ರೇಯಾಂಕಿತೆ ಸಬಲೆಂಕಾ ಗುರುವಾರ ನಡೆದ ಸೆಮಿ ಫೈನಲ್ ನಲ್ಲಿ ಅಮೆರಿಕದ ಎಮ್ಮಾ ನವಾರೊರನ್ನು 6-3, 7-6(2) ಸೆಟ್‌ ಗಳ ಅಂತರದಿಂದ ಮಣಿಸಿದರು. ಈ ಮೂಲಕ ಸತತ ಎರಡನೇ ಬಾರಿ ಯುಎಸ್ ಓಪನ್‌ ನಲ್ಲಿ ಫೈನಲ್‌ ಗೆ ಪ್ರವೇಶಿಸಿದ್ದಾರೆ.

ಕಳೆದ ವರ್ಷ ರನ್ನರ್ಸ್ ಅಪ್‌ ಗೆ ತೃಪ್ತಿಪಟ್ಟಿದ್ದ ಎರಡು ಬಾರಿಯ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಸಬಲೆಂಕಾ ಚಾಂಪಿಯನ್ಶಿಪ್ ಪಂದ್ಯದಲ್ಲಿ ಅಮೆರಿಕದ ಜೆಸ್ಸಿಕಾ ಪೆಗುಲಾರನ್ನು ಎದುರಿಸಲಿದ್ದಾರೆ.

4ನೇ ಸುತ್ತಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೊಕೊ ಗೌಫ್ಗೆ ಸೋಲುಣಿಸಿದ್ದ 13ನೇ ಶ್ರೇಯಾಂಕದ ನವಾರೊ ಅವರು ಈ ವರ್ಷದ ಇಂಡಿಯನ್ ವೆಲ್ಸ್ನಲ್ಲಿ ಸಬಲೆಂಕಾರನ್ನು ಮೂರು ಸೆಟ್‌ ಗಳಿಂದ ಮಣಿಸಿದ್ದರು. ಆದರೆ ಬೆಲಾರುಸ್ ಆಟಗಾರ್ತಿ ಸಬಲೆಂಕಾ ತಾಳ್ಮೆಯಿಂದ ಆಡಿ ಗೆಲುವನ್ನು ತಮ್ಮದಾಗಿಸಿಕೊಂಡರು.

► ಚೊಚ್ಚಲ ಗ್ರ್ಯಾನ್ಸ್ಲಾಮ್ ಫೈನಲ್‌ ಗೆ ಜೆಸ್ಸಿಕಾ:

ಝೆಕ್ ಗಣರಾಜ್ಯದ ಕರೊಲಿನಾ ಮುಚೋವಾ ವಿರುದ್ಧ ಆರಂಭಿಕ ಸೆಟ್ ಸೋಲಿನಿಂದ ಚೇತರಿಸಿಕೊಂಡ ಜೆಸ್ಸಿಕಾ ಪೆಗುಲಾ ಯುಎಸ್ ಓಪನ್‌ ನಲ್ಲಿ ಗುರುವಾರ ಫೈನಲ್‌ ಗೆ ತಲುಪಿದ್ದಾರೆ. ಇದೇ ಮೊದಲ ಬಾರಿ ಗ್ರ್ಯಾನ್ಸ್ಲಾಮ್ ಟೂರ್ನಿಯಲ್ಲಿ ಪ್ರಶಸ್ತಿಗೆ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

ಅಮೆರಿಕದ ಆಟಗಾರ್ತಿ ಜೆಸ್ಸಿಕಾ ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್ನ ಸೆಮಿ ಫೈನಲ್‌ ನಲ್ಲಿ 52ನೇ ರ್ಯಾಂ ಕಿನ ಮುಚೋವಾರನ್ನು 1-6, 6-4, 6-2 ಸೆಟ್‌ ಗಳ ಅಂತರದಿಂದ ಮಣಿಸಿದರು.

ಟೊರೊಂಟೊ ಟೂರ್ನಿ ಸಹಿತ 16 ಪಂದ್ಯಗಳಲ್ಲಿ 15ರಲ್ಲಿ ಜಯ ಸಾಧಿಸಿರುವ ಪೆಗುಲಾ ಆರು ಬಾರಿ ಕ್ವಾರ್ಟರ್ ಫೈನಲ್‌ ನಲ್ಲಿ ಮುಗ್ಗರಿಸಿದ ನಂತರ ಮೊದಲ ಬಾರಿ ಗ್ರ್ಯಾನ್ಸ್ಲಾಮ್ನ ಸೆಮಿ ಫೈನಲ್‌ ನಲ್ಲಿ ಅಡಿದರು. 30ರ ವಯಸ್ಸಿನ ಪೆಗುಲಾ ಕೇವಲ 28 ನಿಮಿಷಗಳಲ್ಲಿ ಮೊದಲ ಸೆಟ್ಟನ್ನು ಸೋತಿದ್ದಾರೆ. ಕೊನೆಯ 10 ಗೇಮ್‌ ಗಳಲ್ಲಿ 8ರಲ್ಲಿ ಜಯ ಸಾಧಿಸಿರುವ ಪೆಗುಲಾ ಪ್ರಬಲ ಪ್ರತಿರೋಧ ಒಡ್ಡಿದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News