ವಿನೇಶ್ ಬೆಳ್ಳಿ ಪದಕಕ್ಕೆ ಅರ್ಹರು | ಅಮೆರಿಕದ ಕುಸ್ತಿ ದಂತಕತೆ ಜೋರ್ಡಾನ್ ಬರೋಸ್ ಬೆಂಬಲ
ಹೊಸದಿಲ್ಲಿ : ನಿಗದಿತ ತೂಕಕ್ಕಿಂತ ಸ್ವಲ್ಪ ಹೆಚ್ಚಾಗಿರುವುದಕ್ಕಾಗಿ ಒಲಿಂಪಿಕ್ಸ್ನ 50 ಕೆಜಿ ವಿಭಾಗದ ಫ್ರೀಸ್ಟೈಲ್ ಕುಸ್ತಿ ಸ್ಪರ್ಧೆಯಿಂದ ಅನರ್ಹಗೊಂಡಿರುವ ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ರ ಬೆಂಬಲಕ್ಕೆ ಅಮೆರಿಕದ ಕುಸ್ತಿ ದಂತಕತೆ ಜೋರ್ಡಾನ್ ಬರೋಸ್ ನಿಂತಿದ್ದಾರೆ.
ಕುಸ್ತಿಪಟುಗಳನ್ನು ಅನರ್ಹಗೊಳಿಸುವ ಯುಡಬ್ಲ್ಯುಡಬ್ಲ್ಯು ನಿಯಮಗಳಿಗೆ ಬದಲಾವಣೆಯಾಗಬೇಕು ಎಂದು ಬರೋಸ್ ಕರೆ ನೀಡಿದ್ದಾರೆ. ಫೈನಲ್ ತಲುಪಿದವರು ಎರಡನೇ ದಿನದಂದು ತೂಕದಲ್ಲಿ ವಿಫಲವಾದರೂ, ಅವರು ತಮ್ಮ ಪದಕವನ್ನು ಪಡೆಯಬೇಕು ಎಂದು ಅವರು ಹೇಳಿದ್ದಾರೆ.
ಅನರ್ಹತೆ ಬಳಿಕವೂ, ವಿನೇಶ್ಗೆ ಬೆಳ್ಳಿ ಪದಕ ನೀಡಬೇಕೆಂಬ ಬರೋಸ್ರ ಕರೆಯನ್ನು ಟೋಕಿಯೊ ಒಲಿಂಪಿಕ್ಸ್ನಲ್ಲಿ ಕಂಚು ಗೆದ್ದಿರುವ ಬಜರಂಗ್ ಪೂನಿಯ ಮತ್ತು ರಿಯೋ ಗೇಮ್ಸ್ನಲ್ಲಿ ಕಂಚಿನ ಪದಕ ಪಡೆದಿರುವ ಸಾಕ್ಷಿ ಮಲಿಕ್ ಬೆಂಬಲಿಸಿದ್ದಾರೆ.
ಸೆಮಿಫೈನಲ್ನಲ್ಲಿ ವಿನೇಶ್ ವಿರುದ್ಧ ಸೋತಿರುವ ಕ್ಯೂಬಾದ ಕುಸ್ತಿಪಟು ಯುಸ್ನೆಯ್ಲಿಸ್ ಗಝ್ಮನ್ ಲೊಪೆಝ್ 50 ಕೆಜಿ ಕುಸ್ತಿ ಫೈನಲ್ನಲ್ಲಿ ವಿನೇಶ್ ಸ್ಥಾನದಲ್ಲಿ ಸ್ಪರ್ಧಿಸಲಿದ್ದಾರೆ.