ಕೊರಿಯಾ ವಿರುದ್ಧ ಗೆಲುವು: ಸೆಮೀಸ್ ಗೆ ಭಾರತ ಹಾಕಿ ತಂಡ ಲಗ್ಗೆ
ಹೊಸದಿಲ್ಲಿ: ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ತನ್ನ ಪಾರಮ್ಯ ಮುಂದುವರಿಸಿದ ಭಾರತ ದಕ್ಷಿಣ ಕೊರಿಯಾ ವಿರುದ್ಧ 3-2 ಗೋಲುಗಳ ಜಯ ಸಾಧಿಸಿದೆ. ಮೂರು ಗೆಲುವು ಹಾಗೂ ಒಂದು ಡ್ರಾದೊಂದಿಗೆ 10 ಅಂಕ ಸಂಪಾದಿಸಿರುವ ಭಾರತ ಲೀಗ್ ಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿದೆ.
ನೀಲಕಂಠ ಶರ್ಮಾ ಆರನೇ ನಿಮಿಷದಲ್ಲೇ ಗೋಲು ಹೊಡೆದು ಭಾರತಕ್ಕೆ ಮುನ್ನಡೆ ದೊರಕಿಸಿಕೊಟ್ಟರು. ಆದರೆ ಕೊರಿಯಾದ ಕಿಮ್ ಸುಂಗ್ಯೂನ್ ಮತ್ತೆ ಆರೇ ನಿಮಿಷದಲ್ಲಿ, ಭಾರತದ ಗೋಲ್ಕೀಪರ್ ಕೃಷ್ಣನ್ ಬಹದ್ದೂರ್ ಪಾಟಕ್ ಅವರನ್ನು ವಂಚಿಸಿ ಗೋಲು ಬಾರಿಸುವ ಮೂಲಕ ಸಮಬಲ ಸಾಧಿಸಲು ನೆರವಾದರು. ಆದರೆ 23ನೇ ನಿಮಿಷದಲ್ಲಿ ಹರ್ಮನ್ಪ್ರೀತ್ ಸಿಂಗ್ ಗೋಲು ಸಾಧಿಸಿ ತವರಿನ ತಂಡದ ಮುನ್ನಡೆಗೆ ಕಾರಣರಾದರು.
ಮನ್ದೀಪ್ ಸಿಂಗ್ 33ನೇ ನಿಮಿಷದಲ್ಲಿ ಮತ್ತೊಂದು ಗೋಲು ಹೊಡೆದು ಮುನ್ನಡೆಯನ್ನು 3-1ಕ್ಕೆ ಹಿಗ್ಗಿಸಿದರು. ಈ ಮೂಲಕ ಪಂದ್ಯದಲ್ಲಿ ಭಾರತದ ಪ್ರಾಬಲ್ಯ ಮುಂದುವರಿಯಿತು. ಯಂಗ್ ಜಿಹೂನ್ 58ನೇ ನಿಮಿಷದಲ್ಲಿ ಗೋಲು ಗಳಿಸಿ ಮುನ್ನಡೆಯನ್ನು ಕುಗ್ಗಿಸಿದರೂ, ಉಳಿದ ಎರಡು ನಿಮಿಷಗಳ ಕಾಲ ಭಾರತ ತನ್ನ ಮುನ್ನಡೆಯನ್ನು ಉಳಿಸಿಕೊಂಡಿತು.