ಕ್ರಿಕೆಟ್ ಆಸ್ಟ್ರೇಲಿಯ ಆರಿಸಿದ ವಿಶ್ವಕಪ್ ತಂಡಕ್ಕೆ ಕೊಹ್ಲಿ ನಾಯಕ
ಹೊಸದಿಲ್ಲಿ: 2023ರ ಆವೃತ್ತಿಯ ಐಸಿಸಿ ಕ್ರಿಕೆಟ್ ವಿಶ್ವಕಪ್ ನ ಲೀಗ್ ಹಂತ ಮುಕ್ತಾಯಗೊಂಡಿದೆ. ಭಾರತ, ದಕ್ಷಿಣ ಆಪ್ರಿಕ, ಆಸ್ಟ್ರೇಲಿಯ ಮತ್ತು ನ್ಯೂಝಿಲ್ಯಾಂಡ್ ತಂಡಗಳು ಸೆಮಿಫೈನಲ್ ಗೆ ತೇರ್ಗಡೆಗೊಂಡಿವೆ.
ಪಂದ್ಯಾವಳಿಯಲ್ಲಿ ಪಾಲ್ಗೊಂಡಿರುವ 10 ತಂಡಗಳ ಪೈಕಿ, ಈವರೆಗೆ ಒಂದು ಪಂದ್ಯದಲ್ಲೂ ಸೋಲದ ಏಕೈಕ ತಂಡ ಭಾರತವಾಗಿದೆ.
ಲೀಗ್ ಹಂತ ಮುಗಿಯುತ್ತಿರುವಂತೆಯೇ, ಕ್ರಿಕೆಟ್ ಆಸ್ಟ್ರೇಲಿಯವು ಹಾಲಿ ವಿಶ್ವಕಪ್ ಪಂದ್ಯಾವಳಿಯ ತಂಡವೊಂದನ್ನು ಆರಿಸಿದೆ. ಸಹಜವಾಗಿಯೇ ಭಾರತೀಯ ಆಟಗಾರರು ತಂಡದಲ್ಲಿ ಪ್ರಾಬಲ್ಯ ಸಾಧಿಸಿದ್ದಾರೆ. ವಿರಾಟ್ ಕೊಹ್ಲಿಯನ್ನು ತಂಡದ ನಾಯಕ ಎಂದು ಘೋಷಿಸಲಾಗಿದೆ. 12 ಸದಸ್ಯರ ತಂಡದಲ್ಲಿ ಮುಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜ ಮುಂತಾದವರು ಸ್ಥಾನ ಪಡೆದಿದ್ದಾರೆ.
ಭಾರತ ಈವರೆಗೆ ಈ ಪಂದ್ಯಾವಳಿಯಲ್ಲಿ ಸರ್ವಾಂಗೀಣ ಪ್ರದರ್ಶನವನ್ನು ನೀಡಿದೆ. ತಂಡದ ಪ್ರತಿಯೋರ್ವ ಸದಸ್ಯ ತಂಡದ ಗೆಲುವಿಗೆ ದೇಣಿಗೆ ನೀಡಿದ್ದಾರೆ. ಲೀಗ್ ಹಂತದಲ್ಲಿ ದಕ್ಷಿಣ ಆಫ್ರಿಕ ಮತ್ತು ಆಸ್ಟ್ರೇಲಿಯ ತಲಾ ಎರಡು ಪಂದ್ಯಗಳಲ್ಲಿ ಸೋಲು ಕಂಡಿವೆ. ನ್ಯೂಝಿಲ್ಯಾಂಡ್ 9 ಪಂದ್ಯಗಳ ಪೈಕಿ ಐದು ಪಂದ್ಯಗಳನ್ನು ಜಯಿಸಿದೆ.
ಕ್ರಿಕೆಟ್ ಆಸ್ಟ್ರೇಲಿಯ ಆರಿಸಿದ ವಿಶ್ವಕಪ್ ತಂಡ ಹೀಗಿದೆ.
ವಿರಾಟ್ ಕೊಹ್ಲಿ (ಭಾರತ), ಕ್ವಿಂಟನ್ ಡಿ ಕಾಕ್ (ದಕ್ಷಿಣ ಆಫ್ರಿಕ), ಡೇವಿಡ್ ವಾರ್ನರ್ (ಆಸ್ಟ್ರೇಲಿಯ), ರಚಿನ್ ರವೀಂದ್ರ (ನ್ಯೂಝಿಲ್ಯಾಂಡ್), ಏಡನ್ ಮರ್ಕ್ರಾಮ್ (ದಕ್ಷಿಣ ಆಫ್ರಿಕ), ಗ್ಲೆನ್ ಮ್ಯಾಕ್ಸ್ವೆಲ್ (ಆಸ್ಟ್ರೇಲಿಯ), ಮಾರ್ಕೊ ಜಾನ್ಸನ್ (ದಕ್ಷಿಣ ಆಫ್ರಿಕ), ರವೀಂದ್ರ ಜಡೇಜ (ಭಾರತ), ಮುಹಮ್ಮದ್ ಶಮಿ (ಭಾರತ), ಆ್ಯಡಮ್ ಝಾಂಪ (ಆಸ್ಟ್ರೇಲಿಯ), ಜಸ್ಪ್ರೀತ್ ಬುಮ್ರಾ (ಭಾರತ) ಮತ್ತು ದಿಲ್ಶನ್ ಮಡುಶಂಕ (ಶ್ರೀಲಂಕಾ).