ಆರ್‌ಸಿಬಿ ತೊರೆಯುವ ಬಗ್ಗೆ ಯೋಚಿಸಿದ್ದರೂ ಅದೇ ತಂಡದಲ್ಲಿ ಮುಂದುವರಿಯುವ ನಿರ್ಧಾರದ ಹಿಂದಿನ ಕಾರಣ ತಿಳಿಸಿದ ಕೊಹ್ಲಿ

Update: 2023-11-27 09:56 GMT

ವಿರಾಟ್‌ ಕೊಹ್ಲಿ (Photo: PTI)

ಹೊಸದಿಲ್ಲಿ: ಖ್ಯಾತ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಅವರು ಕ್ರಿಕೆಟ್‌ ಕ್ಷೇತ್ರದಲ್ಲಿ ಹಲವಾರು ದಾಖಲೆಗಳನ್ನು ಮಾಡಿದ್ದಾರೆ ಹಾಗೂ ಟ್ರೋಫಿಗಳನ್ನೂ ಗೆದ್ದಿದ್ದಾರೆ. ಆದರೆ ಐಪಿಎಲ್‌ ವಿಚಾರದಲ್ಲಿ ಹಾಗಾಗಿಲ್ಲ. ಅವರು ಕಪ್ತಾನರಾಗಿದ್ದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಫೈನಲ್‌ ಪ್ರವೇಶಿಸಿದೆಯಾದರೂ ಇಲ್ಲಿಯ ತನಕ ಒಂದು ಬಾರಿಯೂ ಐಪಿಎಲ್‌ ಗೆದ್ದಿಲ್ಲ. ಇದೊಂದು ಕೊರಗು ಅವರಲ್ಲಿದೆ. ಅದರೆ ಇದೇ ಕಾರಣಕ್ಕೆ ಕೊಹ್ಲಿ ಯಾವತ್ತಾದರೂ ಬೇರೆ ಐಪಿಎಲ್‌ ತಂಡ ಸೇರಲು ಮನಸ್ಸು ಮಾಡಿದ್ದರೇ ಎಂಬ ಪ್ರಶ್ನೆಗೆ ಅವರೇ ಆರ್‌ಸಿಬಿ ಜೊತೆಗಿನ 2022 ಚಾಟ್‌ನಲ್ಲಿ ಉತ್ತರಿಸಿದ್ದಾರೆ. ಹಲವು ಐಪಿಎಲ್‌ ಫ್ರಾಂಚೈಸಿಗಳು ತಮ್ಮ ಹೆಸರನ್ನು ಹರಾಜಿನಲ್ಲಿ ಸೇರಿಸಲು ಮುಂದಾಗಿದ್ದವು. ಆದರೆ ಬೆಂಗಳೂರು ತಂಡದೊಂದಿಗೆ ಇರಲು ತಾನು ನಿರ್ಧರಿಸಿದ್ದಾಗಿ ಹೇಳಿದ್ದಾರೆ.

“ನಿಜ ಹೇಳಬೇಕೆಂದರೆ ಆ ಬಗ್ಗೆ ನಾನು ಯೋಚಿಸಿದ್ದೆ. ಅದನ್ನು ಅಲ್ಲಗಳೆಯುವುದಿಲ್ಲ. ಹಲವು ಫ್ರಾಂಚೈಸಿಗಳೂ ನನ್ನನ್ನು ಸಂಪರ್ಕಿಸಿದ್ದವು. ನಂತರ ಅದರ ಬಗ್ಗೆ ಯೋಚಿಸಿದೆ. ದಿನದ ಅಂತ್ಯಕ್ಕೆ, ಎಲ್ಲರಿಗೂ ನಿರ್ದಿಷ್ಟ ವರ್ಷಗಳು ಇರುತ್ತವೆ, ಅಷ್ಟು ವರ್ಷ ಬಾಳಿ ನಂತರ ಸಾಯುತ್ತಾರೆ, ಹೀಗೆ ಮುಂದುವರಿಯುತ್ತದೆ. ಹಲವು ಟ್ರೋಫಿಗಳನ್ನು ಗೆದ್ದ ಮಹಾನುಭಾವರು ಇದ್ದಾರೆ. ಆದರೆ ಯಾರೂ ಅವರನ್ನು ಕೊಠಡಿಯಲ್ಲಿ ʻಓಹ್‌, ಅವರು ಐಪಿಎಲ್‌ ಚಾಂಪಿಯನ್‌ ಅಥವಾ ಅವರು ವಿಶ್ವ ಕಪ್‌ ಚಾಂಪಿಯನ್ʼ ಎಂದು ಸಂಬೋಧಿಸುವುದಿಲ್ಲ. ನಾವು ಒಳ್ಳೆಯ ವ್ಯಕ್ತಿಯಾಗಿದ್ದರೆ ಜನರು ನಮ್ಮನ್ನು ಇಷ್ಟಪಡುತ್ತಾರೆ, ಕೆಟ್ಟ ವ್ಯಕ್ತಿಯಾಗಿದ್ದರೆ ಜನರು ನಮ್ಮಿಂದ ದೂರ ಉಳಿಯುತ್ತಾರೆ ಅಷ್ಟೇ,” ಎಂದು ಹೇಳುವ ಮೂಲಕ ತಾವೇಕೆ ಆರ್‌ಸಿಬಿ ತಂಡದಲ್ಲಿಯೇ ಉಳಿಯಲು ನಿರ್ಧರಿಸಿದ್ದಾಗಿ ಕೊಹ್ಲಿ ವಿವರಿಸಿದ್ದಾರೆ.

ಇತರ ಫ್ರಾಂಚೈಸಿಗಳು ತಮ್ಮ ಮೇಲೆ ಹೆಚ್ಚಿನ ವಿಶ್ವಾಸವಿರಿಸದಂತಹ ಸಂದರ್ಭದಲ್ಲಿ ರಾಯಲ್‌ ಚಾಲೆಂಜರ್ಸ್‌ ತಮ್ಮ ಮೇಲೆ ಇರಿಸಿದ ವಿಶ್ವಾಸವನ್ನು ಅವರು ಸ್ಮರಿಸಿದ್ದಾರೆ.

ತಮ್ಮ ಪತ್ನಿ ಅನುಷ್ಕಾ ಶರ್ಮ ಅವರ ಅಭಿಪ್ರಾಯ ತಮಗೆ ಬಹಳ ಮುಖ್ಯ ಎಂದು ಹೇಳುವ ಕೊಹ್ಲಿ ತಮ್ಮ ನಿರ್ಧಾರಗಳ ವಿಚಾರದಲ್ಲಿ ತಮಗೆ ಇತರ ಯಾರದ್ದೇ ಅಭಿಪ್ರಾಯ ಮುಖ್ಯ ಅಲ್ಲ ಎಂದು ಹೇಳುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News