ಜಯ್ ಶಾ ಐಸಿಸಿಗೆ ಹೋದರೆ ಮುಂದಿನ ಬಿಸಿಸಿಐ ಕಾರ್ಯದರ್ಶಿ ಯಾರು?
ಮುಂಬೈ: ಅಂತರ್‌ರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ)ಯ ನೂತನ ಅಧ್ಯಕ್ಷರಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಕಾರ್ಯದರ್ಶಿ ಜಯ್ ಶಾ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಐಸಿಸಿಯ 16 ಸದಸ್ಯರ ಪೈಕಿ 15 ಸದಸ್ಯರು ಅವರಿಗೆ ಬೆಂಬಲ ನೀಡಿದ್ದಾರೆ.
ಅವರು ಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದರೆ ಬಿಸಿಸಿಐ ಕಾರ್ಯದರ್ಶಿಯಾಗಿ ಅವರ ಸ್ಥಾನವನ್ನು ಯಾರು ತುಂಬುತ್ತಾರೆ ಎಂಬ ಬಗ್ಗೆ ಎಲ್ಲರಲ್ಲಿ ಕುತೂಹಲ ಇದೆ. ಈ ಬಗ್ಗೆ ನಿರ್ಧರಿಸಲು ಅವರಿಗೆ ಇನ್ನು ಮೂರು ದಿನಗಳು ಮಾತ್ರ ಉಳಿದಿವೆ. ಯಾಕೆಂದರೆ ಐಸಿಸಿ ಅಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸಲು ಆಗಸ್ಟ್ 27 ಕೊನೆಯ ದಿನವಾಗಿದೆ. ನೂತನ ಐಸಿಸಿ ಅಧ್ಯಕ್ಷರು ಡಿಸೆಂಬರ್ 1ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಅವರ ಅಧಿಕಾರಾವಧಿ 2025 ಅಕೋಬರ್‌ನಲ್ಲಿ ಮುಕ್ತಾಯಗೊಳ್ಳಲಿದೆ. ಆ ಬಳಿಕ ಅವರು ಬಿಸಿಸಿಐ ಹುದ್ದೆಗೆ ಮರಳಬೇಕಾದರೆ ಮೂರು ವರ್ಷ ಕಡ್ಡಾಯವಾಗಿ ಕಾಯಬೇಕಾಗುತ್ತದೆ.
ಆದರೆ, ಈ ಅವಧಿಯಲ್ಲಿ ಬಿಸಿಸಿಐಯಲ್ಲಿ ಏನು ಸಂಭವಿಸಬಹುದು? ಬಿಸಿಸಿಐಯ ನೂತನ ಕಾರ್ಯದರ್ಶಿಯಾಗಿ ಜಯ್ ಶಾ ಸ್ಥಾನಕ್ಕೆ ನೇಮಕಗೊಳ್ಳಬಹುದಾದ ಸಂಭಾವ್ಯ ಅಭ್ಯರ್ಥಿಗಳ ವಿವರ ಇಲ್ಲಿದೆ.
ರಾಜೀವ್ ಶುಕ್ಲಾ
PC: FACEBOOK
ಬಿಸಿಸಿಐ ತನ್ನ ಪದಾಧಿಕಾರಿಗಳನ್ನು ಬದಲಾವಣೆ ಮಾಡುವ ಸಾಧ್ಯತೆಯಿದೆ. ಬಿಸಿಸಿಐ ಉಪಾಧ್ಯಕ್ಷ ಹಾಗೂ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸಂಸದರಾಗಿರುವ ರಾಜೀವ್ ಶುಕ್ಲಾರನ್ನು ಒಂದು ವರ್ಷದ ಅವಧಿಗೆ ಬಿಸಿಸಿಐ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುವಂತೆ ಅದು ಸೂಚಿಸಬಹುದಾಗಿದೆ. ಈ ಕೊಡುಗೆ ಬಂದರೆ ಶುಕ್ಲಾ ಸಂತೋಷದಿಂದ ಸ್ವೀಕರಿಸಬಹುದಾಗಿದೆ. ಯಾಕೆಂದರೆ, ಬಿಸಿಸಿಐಯಲ್ಲಿ ಉಪಾಧ್ಯಕ್ಷ ಸ್ಥಾನ ಹೆಚ್ಚು ಕಡಿಮೆ ರಬ್ಬರ್ ಸ್ಟಾಂಪ್ ಇದ್ದಂತೆ.
ಆಶಿಶ್ ಶೆಲಾರ್
PC: X
ಮಹಾರಾಷ್ಟ್ರ ಬಿಜೆಪಿಯ ಹಿರಿಯ ನಾಯಕ ಹಾಗೂ ಬಿಸಿಸಿಐ ಖಜಾಂಚಿ ಆಶಿಶ್ ಶೆಲಾರ್ ಕೂಡ ಸ್ಪರ್ಧೆಯಲ್ಲಿದ್ದಾರೆ. ಅವರು ಮುಂಬೈ ಕ್ರಿಕೆಟ್ ಅಸೋಸಿಯೇಶನ್‌ನಲ್ಲಿ ಪ್ರಭಾವಿ ವ್ಯಕ್ತಿಯಾಗಿದ್ದಾರೆ. ಆದರೆ, ಶೆಲಾರ್ ರಾಜಕೀಯವಾಗಿ ಸಕ್ರಿಯರಾಗಿರುವವರು. ಬಿಸಿಸಿಐ ಹುದ್ದೆಯನ್ನು ನಿಭಾಯಿಸಲು ಸಮಯಾವಕಾಶ ಬೇಕು.
ಅರುಣ್ ಧುಮಾಲ್
PC: X
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅಧ್ಯಕ್ಷ ಅರುಣ್ ಧುಮಾಲ್ ಬಿಸಿಸಿಯನ್ನು ನಡೆಸಲು ಬೇಕಾದ ಅರ್ಹತೆಯನ್ನು ಹೊಂದಿದ್ದಾರೆ. ಅವರುದ ಐಪಿಎಲ್‌ನ ಖಜಾಂಚಿಯಾಗಿದ್ದರು ಮತ್ತು ಈಗ ಅದರ ಮುಖ್ಯಸ್ಥರಾಗಿದ್ದಾರೆ.
ದೇವಜಿತ್ ಲೋನ್ ಸೈಕಿಯ
ಬಿಸಿಸಿಐ ಜಂಟಿ ಕಾರ್ಯದರ್ಶಿ ದೇವಜಿತ್ ಲೋನ್ ಸೈಕಿಯ ಕೂಡ ಸ್ಪರ್ಧೆಯಲ್ಲಿದ್ದಾರೆ. ಅವರು ಪ್ರಸಿದ್ಧ ವ್ಯಕ್ತಿಯಾಗಿರದಿದ್ದರೂ, ಹಾಲಿ ಬಿಸಿಸಿಐ ಆಡಳಿತದಲ್ಲಿ ಮಹತ್ವದ ಸ್ಥಾನ ಹೊಂದಿದ್ದಾರೆ. ಹಾಗಾಗಿ, ಅವರನ್ನು ಬಿಸಿಸಿಐ ಕಾರ್ಯದರ್ಶಿ ಹುದ್ದೆಗೆ ಏರಿಸುವ ಸಾಧ್ಯತೆಯೂ ಇದೆ.
ಇತರ ಆಕಾಂಕ್ಷಿಗಳು
ರೋಹನ್ ಜೇಟ್ಲಿ, ಅವಿಶೇಕ್ ದಾಲ್ಮಿಯ, ದಿಲ್‌ಶೇರ್ ಖನ್ನಾ, ವಿಪುಲ್ ಫಡ್ಕೆ ಮತ್ತು ಪ್ರಭುತೇಜ್ ಭಾಟಿಯ ಮುಂತಾದ ಯುವ ಆಡಳಿತಗಾರರನ್ನೂ ಬಿಸಿಸಿಐ ಕಾರ್ಯದರ್ಶಿ ಹುದ್ದೆಗೆ ಪರಿಗಣಿಸಬಹುದಾಗಿದೆ.
ಆದರೆ, ಬಿಸಿಸಿಐಯ ಮಾಜಿ ಕಾರ್ಯದರ್ಶಿಯೊಬ್ಬರ ಪ್ರಕಾರ, ಬಿಸಿಸಿಐಯ ಅಧಿಕಾರ ವ್ಯವಸ್ಥೆಯು ಅದೇ ವ್ಯವಸ್ಥೆಯಲ್ಲಿರುವವರಿಗೆ ಆದ್ಯತೆ ನೀಡುತ್ತದೆ. ಸಂಪೂರ್ಣವಾಗಿ ಹೊಸಬರನ್ನು ಉನ್ನತ ಹುದ್ದೆಗೆ ಆರಿಸುವ ಸಾಧ್ಯತೆ ಕಡಿಮೆ.