ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ಶಿಪ್ಸ್: 3000 ಮೀ. ಸ್ಟೀಪಲ್ಚೇಸ್ ನಲ್ಲಿ ಅಂತಿಮ ಸುತ್ತಿಗೆ ತೇರ್ಗಡೆಗೊಳ್ಳಲು ಅವಿನಾಶ್ ಸಾಬ್ಳೆ ವಿಫಲ
ಬುಡಾಪೆಸ್ಟ್ (ಹಂಗೇರಿ): ಬುಡಾಪೆಸ್ಟ್ನಲ್ಲಿ ಶನಿವಾರ ಆರಂಭಗೊಂಡ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ಶಿಪ್ಸ್ನಲ್ಲಿ, 3000 ಮೀಟರ್ ಸ್ಟೀಪಲ್ಚೇಸ್ನಲ್ಲಿ ಅಂತಿಮ ಸುತ್ತಿಗೆ ತೇರ್ಗಡೆಗೊಳ್ಳಲು ಭಾರತದ ಅವಿನಾಶ್ ಸಾಬ್ಳೆ ಶನಿವಾರ ವಿಫಲರಾಗಿದ್ದಾರೆ.
ಅವರು 3000 ಮೀಟರ್ ಸ್ಟೀಪಲ್ಚೇಸ್ನಲ್ಲಿ ರಾಷ್ಟ್ರೀಯ ದಾಖಲೆ ಹೊಂದಿದ್ದಾರೆ.
ಅವರು ಒಂದನೇ ಹೀಟ್ನಲ್ಲಿ 8 ನಿಮಿಷ ಮತ್ತು 22.24 ಸೆಕೆಂಡ್ನಲ್ಲಿ 7ನೇ ಸ್ಥಾನದಲಿ ಸ್ಪರ್ಧೆಯನ್ನು ಮುಗಿಸಿ ನಿರಾಶೆ ಮೂಡಿಸಿದರು.
ಅವರು ನಿರ್ದಿಷ್ಟವಾಗಿ ಈ ಕ್ರೀಡಾಕೂಟಕ್ಕಾಗಿ ಕ್ರೀಡಾ ಸಚಿವಾಲಯದ ವೆಚ್ಚದಲ್ಲಿ ವಿದೇಶದಲ್ಲಿ ಹಲವಾರು ತಿಂಗಳುಗಳ ಕಾಲ ತರಬೇತಿ ಪಡೆದಿದ್ದರು. ಅವರಿಗೆ ದೇಶಿ ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ವಿನಾಯಿತಿಯನ್ನೂ ನೀಡಲಾಗಿತ್ತು.
28 ವರ್ಷದ ಸಾಬ್ಳೆ, 2300 ಮೀಟರ್ ವೇಳೆಗೆ ಮುಂಚೂಣಿಯಲ್ಲಿದ್ದರು. ಆದರೆ ಬಳಿಕ, ಅದರಲ್ಲೂ ಮುಖ್ಯವಾಗಿ ಕೊನೆಯ ಚರಣದಲ್ಲಿ ತನ್ನ ವೇಗವನ್ನು ಕಳೆದುಕೊಂಡರು. ಅವರು ಅಂತಿಮವಾಗಿತನ್ನ ರಾಷ್ಟ್ರೀಯ ದಾಖಲೆಯ ಹೊತ್ತುಗಾರಿಕೆಯಾದ 8 ನಿಮಿಷ ಮತ್ತು 11.20 ಸೆಕೆಂಡ್ಗಳಿಗಿಂತ ತುಂಬಾ ಹಿಂದೆ ಬಿದ್ದರು.
ಮೂರು ಹೀಟ್ಗಳಲ್ಲಿ ಅಗ್ರ ಐದು ಸ್ಥಾನಗಳಲ್ಲಿ ಸ್ಪರ್ಧೆ ಮುಗಿಸಿದ ಸ್ಪರ್ಧಿಗಳು ಅಂತಿಮ ಸುತ್ತಿಗೆ ಹೋಗುತ್ತಾರೆ.
ಸಾಬ್ಳೆ ಪದಕ ಗೆಲ್ಲದಿದ್ದರೂ, ಕನಿಷ್ಠ ಅಂತಿಮ ಸುತ್ತಿಗಾದರೂ ಹೋಗುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಇದು ಅವರ ಮೂರನೇ ವಿಶ್ವ ಚಾಂಪಿಯನ್ಶಿಪ್ಸ್ ಕ್ರೀಡಾಕೂಟವಾಗಿದೆ. ಅಂತಿಮ ಸುತ್ತು ತಲುಪಲು ಅವರು ವಿಫಲವಾಗಿರುವುದು ಇದೇ ಮೊದಲ ಬಾರಿಯಾಗಿದೆ.
ಅವರ ಕಳಪೆ ಪ್ರದರ್ಶನವು ಕ್ರೀಡಾಕೂಟದ ಆರಂಭಿಕ ದಿನದಂದು ಭಾರತೀಯ ಪಾಳಯಕ್ಕಾದ ದೊಡ್ಡ ಹಿನ್ನಡೆಯಾಗಿದೆ.
ಕಳೆದ ವರ್ಷ ಅಮೆರಿಕದ ಯೂಜೀನ್ನಲ್ಲಿ ನಡೆದ ಕ್ರೀಡಾಕೂಟದಲ್ಲಿ, ಅವರು ಫೈನಲ್ನಲ್ಲಿ 11ನೇ ಸ್ಥಾನ ಗಳಿಸಿದ್ದರು. 2019ರಲ್ಲಿ ದೋಹಾದಲ್ಲಿ ನಡೆದ ಕ್ರೀಡಾಕೂಟದಲ್ಲಿ ಅವರು 13ನೇ ಸ್ಥಾನ ಪಡೆದಿದ್ದರು.
20 ಕಿ.ಮೀ. ವೇಗದ ನಡಿಗೆಯಲ್ಲೂ ಭಾರತೀಯರು ವಿಫಲರಾಗಿದ್ದಾರೆ.
ವಿಕಾಸ್ ಸಿಂಗ್ 1 ಗಂಟೆ 21 ನಿಮಿಷ 58 ಸೆಕೆಂಡ್ನಲ್ಲಿ 28ನೇ ಸ್ಥಾನದಲ್ಲಿ ಸ್ಪರ್ಧೆಯನ್ನು ಮುಗಿಸಿದರು. ಪರಮ್ಜಿತ್ ಸಿಂಗ್ (1:24:02) 35ನೆಯವರಾಗಿ ಮುಗಿಸಿದರೆ, ಆಕಾಶ್ದೀಪ್ ಸಿಂಗ್ (1:31:12) 47ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದರು. ಒಟ್ಟು 50 ಮಂದಿ ಸ್ಪರ್ಧಿಸಿದ್ದರು.