ವಿಶ್ವ ಚಾಂಪಿಯನ್‌ಶಿಪ್ ಒಲಿಂಪಿಕ್ಸ್‌ಗಿಂತಲೂ ಕಠಿಣ: ನೀರಜ್ ಚೋಪ್ರಾ
ಹೊಸದಿಲ್ಲಿ: ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ ಮೊದಲ ಭಾರತೀಯ ಕ್ರೀಡಾಳುವಾಗಿರುವ 25ರ ಹರೆಯದ ನೀರಜ್ ಚೋಪ್ರಾ, ಒಲಿಂಪಿಕ್ಸ್‌ಗಿಂತ ವಿಶ್ವ ಚಾಂಪಿಯನ್‌ಶಿಪ್ ಕಠಿಣ ಎಂಬ ವಿಚಾರವನ್ನು ಒಪ್ಪಿಕೊಂಡಿದ್ದಾರೆ.
ಒಲಿಂಪಿಕ್ಸ್ ತುಂಬಾ ವಿಶೇಷ ಹಾಗೂ ವಿಶ್ವ ಚಾಂಪಿಯನ್‌ಶಿಪ್ ದೊಡ್ಡ ಪ್ರಶಸ್ತಿಯಾಗಿದೆ. ಸ್ಪರ್ಧಾವಳಿಯ ಕುರಿತಾಗಿ ಮಾತನಾಡುವಾಗ ವಿಶ್ವ ಚಾಂಪಿಯನ್‌ಶಿಪ್ ಯಾವಾಗಲೂ ಒಲಿಂಪಿಕ್ಸ್‌ಗಿಂತಲೂ ಕಠಿಣ. ಎಲ್ಲ ಅತ್ಲೀಟ್‌ಗಳು ಇದಕ್ಕೆ ತಯಾರಿ ನಡೆಸಿಯೇ ಬರುತ್ತಾರೆ. ಭಾರತದಿಂದ ಬಂದಿರುವ ಹಲವು ಜನರು ಬುಡಾಪೆಸ್ಟ್‌ನಲ್ಲಿದ್ದು, ಸ್ಥಳೀಯ ಜನತೆಯ ಬೆಂಬಲ ಕೂಡ ಅಮೋಘವಾಗಿತ್ತು. ಇದೊಂದು ವಿಶೇಷ ಗೆಲುವು ಎಂದು ಚೋಪ್ರಾ ಹೇಳಿದ್ದಾರೆ.
ಅಗ್ರ-8ರಲ್ಲಿ ಸ್ಥಾನ ಪಡೆದಿರುವ ಸಹ ಸ್ಪರ್ಧಿಗಳಾದ ಕಿಶೋರ್ ಕುಮಾರ್ ಜೆನಾ ಹಾಗೂ ಡಿ.ಪಿ. ಮನು ಅವರನ್ನು ಚೋಪ್ರಾ ಶ್ಲಾಘಿಸಿದರು.
ಐದನೇ ಹಾಗೂ ಆರನೇ ಸ್ಥಾನ ಪಡೆದಿರುವ ಕಿಶೋರ್ ಜೆನಾ ಹಾಗೂ ಡಿಪಿ ಮನು ಕೂಡ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ನಾವು ಇನ್ನಷ್ಟು ಕೆಲಸ ಮಾಡಬೇಕಾಗಿದೆ.ಎಎಫ್‌ಐ ಅಧ್ಯಕ್ಷರ ಬಳಿ ಇಲ್ಲಿನ ಮೊಂಡೊ ಟ್ರ್ಯಾಕ್ಸ್ ಬಗ್ಗೆ ತಿಳಿಸಿದ್ದೇನೆ. ಇಲ್ಲಿರುವಂತೆ ಭಾರತದಲ್ಲೂ ಇದೇ ರೀತಿಯ ಟ್ರ್ಯಾಕ್ ಹೊಂದುವ ವಿಶ್ವಾಸ ನನಗಿದೆ. ನಾವು ಮುಂದಿನ ವರ್ಷಗಳಲ್ಲಿ ಇನ್ನಷ್ಟು ಪ್ರದರ್ಶನ ನೀಡಬಹುದು ಎಂದು ಚೋಪ್ರಾ ಹೇಳಿದ್ದಾರೆ.